ಅನಧಿಕೃತ ರಸ್ತೆ ಅಗೆತ , ಕ್ರಮಕ್ಕೆ ಒತ್ತಾಯ
ಲಿಂಗಸುಗೂರು : ‘‘ಪುರಸಭೆ ವ್ಯಾಪ್ತಿಯ ಪ್ರಮುಖ ಸಾರ್ವಜನಿಕ ರಸ್ತೆ ಯನ್ನು ಅನಧಿಕೃತವಾಗಿ ಅಗೆಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು,’’ ಎಂದು ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು. ‘‘ಪಟ್ಟಣದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಎದುರುಗಡೆಯ ರಸ್ತೆಯನ್ನು ಈಚೆಗೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡಲಾಗಿದೆ. ಆದರೆ, ಖಾಸಗಿ ರೆಸ್ಟೋರೆಂಟ್ ಮಾಲೀಕರು ಪುರಸಭೆಯಿಂದ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ರಸ್ತೆ ಅಗೆದಿದ್ದಾರೆ. ಇದರಿಂದ ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಮೋಹನ್ ಗೋಸ್ಲೆ, ಮುಖಂಡ ರಾಜು ತಂಬಾಕೆ ಸೇರಿ ಇತರರಿದ್ದರು.

