ವಿಕ ಸುದ್ದಿಲೋಕ ತುಮಕೂರು ತುಮಕೂರು ನಗರದ ಶಿರಾದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾದ ರಂಗಾಪುರದ ಮೇಲುಸೇತುವೆಯನ್ನು ಶೀಘ್ರವಾಗಿ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಸುಲಭ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚಿಸಿದರು. ತುಮಕೂರು ಮಹಾನಗರ ಪಾಲಿಕೆಯಿಂದ ನಗರದಲ್ಲಿಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಂಗಳವಾರ ನಡೆದ ವಿವಿಧ ಇಲಾಖೆಯ ಸಮನ್ವಯ ಸಭೆಯಲ್ಲಿಮಾತನಾಡಿದ ಅವರು, ಬೆಂಗಳೂರು - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯು ತುಮಕೂರು ನಗರದ ಮಧ್ಯಭಾಗದಲ್ಲಿಹಾದುಹೋಗಿದೆ. ಕುಡಿಯುವ ನೀರು, ಚರಂಡಿ, ಒಳಚರಂಡಿ ಪೈಪ್ ಲೈನ್ ಗಳು ಹಾದು ಹೋಗಿದ್ದು, ದುರಸ್ತಿ ಕಾರ್ಯಗಳು ಹಾಗೂ ಹೊಸ ಯೋಜನೆಗಳು ಅನುಷ್ಠಾನಗೊಳಿಸಲು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ ತುಮಕೂರು ನಗರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಟವಾಡಿಯಿಂದ ಮಲ್ಲಸಂದ್ರದವರೆಗೂ ವೈಟ್ ಟಾಪಿಂಗ್ ಸಿಸಿ ರಸ್ತೆಯಾಗುತ್ತಿದ್ದು, ಹತ್ತಾರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖವಾದ ರಸ್ತೆ ಇದಾಗಿದೆ. ಮೊದಲಿಗೆ ಭೀಮಸಂದ್ರದ ಹೊಸ ಸೇತುವೆ ನಿರ್ಮಾಣ ಮಾಡಿ ನಂತರ ತುಮಕೂರು ಕಡೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿದರೆ ಸಂಚಾರದ ಸಮಸ್ಯೆಗಳನ್ನು ತಗ್ಗಿಸಬಹುದು ಎಂದು ಹೇಳಿದರು. ಮಳೆಗಾಲದ ಸಮಯದಲ್ಲಿಕೆಳಸೇತುವೆಗಳಾದ ಅಂತರಸನಹಳ್ಳಿ ಮಧುಗಿರಿ ರಸ್ತೆ, ದೇವರಾಯಪಟ್ಟಣದಿಂದ - ಭಾರತಿನಗರದ ಕೆಳಸೇತುವೆಗಳ ಸಮಸ್ಯೆ ಬಗೆಹರಿಸುವಂತೆ ಸಭೆಯಲ್ಲಿಸೂಚನೆ ನೀಡಿದ ಶಾಸಕರು, ತುಮಕೂರು ನಗರದ ದಕ್ಷಿಣ ಭಾಗಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವ ದೃಷ್ಟಿಯಿಂದ ವೀರಸಾಗರದ ಟೂಡಾ ಲೇಔಟ್ ನಲ್ಲಿರುವ ಸರಕಾರಿ ಜಾಗವನ್ನು ತುಮಕೂರು ಮಹಾನಗರ ಪಾಲಿಕೆಯವರಿಗೆ ಶೀಘ್ರವಾಗಿ ಹಸ್ತಾಂತರ ಮಾಡಲು ಕ್ರಮವಹಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಶುಭಾ, ಟೂಡಾ ಆಯುಕ್ತ ಉಮೇಶ್ ಚಂದ್ರ, ರಾಷ್ಟ್ರೀಯ ಹೆದ್ದಾರಿ ಸೇವಾ ಪ್ರಾಧಿಕಾರದ ಯೋಜನಾಧಿಕಾರಿ ಅನುಪ್ ಶರ್ಮ, ಪಾಲಿಕೆ ಉಪ-ಆಯುಕ್ತ ಮನುಕುಮಾರ್ , ಅಧೀಕ್ಷಕ ಕಾರ್ಯಪಾಲಕ ಅಭಿಯಂತರ ಸಂದೀಪ್ , ಕಾರ್ಯಪಾಲಕ ಎಂಜಿನಿಯರಾದ ಸುರೇಶ್ , ಪ್ರವೀಣ್ , ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅನಿಲ್ ಕುಮಾರ್ , ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರಾದ ರವಿ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜು, ಕೊಳಚೆ ನಿರ್ಮೂಲನ ಮಂಡಳಿಯ ಸಹಾಯಕ ಎಂಜಿನಿಯರ್ ಭಾನು ಹಾಜರಿದ್ದರು.

