ಕೆಲವು ಸ್ಥಳಗಳಿಗೆ ಮಾತ್ರ ಸೀಮಿತವಾದ ಪುರಸಭೆ ಅಧಿಕಾರಿಗಳ ದಾಳಿ | ಜಾಗೃತಿ ಮೂಡಿಸಿದರೂ ನಿಲ್ಲದ ಬಳಕೆ
ಕೆ.ಎಂ.ಚೌಡಪ್ಪ ಶ್ರೀನಿವಾಸಪುರ
ನಿಷೇಧಿತ ಪ್ಲಾಸ್ಟಿಕ್ ಕೈಚೀಲ, ಕವರ್ ಬಳಸಬಾರದೆಂದು ಪುರಸಭೆ ಪದೇಪದೆ ದಾಳಿ ಮಾಡುತ್ತಿದ್ದರೂ ಬಹುತೇಕ ವರ್ತಕರು, ನಾಗರಿಕರು ರಾಜಾರೋಷವಾಗಿ ಬಳಕೆ ಮಾಡುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಪುರಸಭೆ ಅಧಿಕಾರಿಗಳು ಹಲವಾರು ಬಾರಿ ಸಾರ್ವಜನಿಕರೊಂದಿಗೆ ಚರ್ಚಿಸಿ ನಂತರ ವರ್ತಕರ, ಸಾರ್ವಜನಿಕರ ಸಭೆ ನಡೆಸಿ ಪಟ್ಟಣದ ಸ್ವಚ್ಛತೆ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಪಾಲಿಥಿನ್ ಕವರ್ ಬಳಸಬಾರದೆಂದು ಜಾಗೃತಿ ಮೂಡಿಸುತ್ತಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಿದ್ದರೂ ಬಳಕೆ ಮಾತ್ರ ನಿಂತಿಲ್ಲ.
ನಿರ್ಲಕ್ಷ್ಯ: ಪ್ಯಾಕಿಂಗ್ ಕವರ್ , ಕೈಚೀಲ, ಉಪಾಹಾರ ನೀಡುವ ಪ್ಲೇಟ್ , ನೀರಿನ ಲೋಟ, ಟೇಬಲ್ ಪೇಪರ್ ಸೇರಿ ನಾನಾ ಹತ್ತು ಹಲವು ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನ್ಯಾಯಾಲಯ ಮತ್ತು ಸರಕಾರ ನಿಷೇಧಿಸಿ ಆದೇಶ ಜಾರಿ ಮಾಡಿ ದಶಕ ಕಳೆದಿದೆ. ಪುರಸಭೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೆ ಕಾಟಾಚಾರಕ್ಕೆ ಎನ್ನುವಂತೆ ಪಟ್ಟಣದ ಕೆಲವು ನಿರ್ದಿಷ್ಟ ಅಂಗಡಿಗಳಿಗೆ ಮಾತ್ರ ಭೇಟಿ ನೀಡುವ ಅಧಿಕಾರಿಗಳು ರಾಜಾಜಿ ರಸ್ತೆ, ಚಿಂತಾಮಣಿ ವೃತ್ತ ಭಾಗದ ಕಸಾಯಿಖಾನೆ, ಮಾಂಸದ ಅಂಗಡಿಗಳು ಸೇರಿದಂತೆ ಬಹುತೇಕರು ಮುಗುಮ್ಮಾಗಿ ರಸ್ತೆ ಬದಿ ಹಣ್ಣು, ಹೂವು, ತರಕಾರಿ ಮಾರಾಟ ಮಾಡುವ ಅಂಗಡಿಗಳಲ್ಲಿದಿನನಿತ್ಯ ರಾಜಾರೋಷವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೂ ಆ ಬಗ್ಗೆ ಹೆಲ್ತ್ ಇನ್ಸ್ ಪೆಕ್ಟರ್ಸ್ ಚಕಾರ ಎತ್ತದೆ ಜಾಣ ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ 500ರಿಂದ 5 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳುವ ಅಧಿಕಾರಿ ವರ್ಗ ಕಣ್ಣಿಗೆ ಕಾಣುತ್ತಿದ್ದರೂ ಆ ಬಗ್ಗೆ ಚಕಾರ ಎತ್ತದೆ, ಕಾನೂನು ಪಾಲನೆಗೆ ಮುಂದಾಗದೆ ಇರುವುದು ವಿಪರ್ಯಾಸ. ಹೂವು ಹಣ್ಣು ಚಿಲ್ಲರೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೆ 6 ತಿಂಗಳು, 3 ತಿಂಗಳಿಗೊಮ್ಮೆ ಕೆಲವು ಅಂಗಡಿಗಳ ಮೇಲೆ ಮಾತ್ರ ದಾಳಿ ಮಾಡಿ ಮತ್ತೆ ಅದರ ಗೋಜಿಗೆ ಹೋಗದೆ ತಟಸ್ಥವಾಗಿ ಕೈಚೆಲ್ಲುತ್ತಿರುವುದರಿಂದ ನಿಷೇಧ ಮಾಡಲು ಸಾಧ್ಯವಾಗುತ್ತಿಲ್ಲಎನ್ನುವುದಕ್ಕೆ ಸಾರ್ವಜನಿಕರ ಕೈಯಲ್ಲಿಕಂಡುಬರುವ ಕವರ್ ಗಳೇ ಸಾಕ್ಷಿಯಾಗಿವೆ.
ಕೆಲವು ಅಂಗಡಿಗಳಲ್ಲಿಬಟ್ಟೆ ಬ್ಯಾಗ್ ಗಳನ್ನು ತೋರ್ಪಡಿಕೆಗೆ ಇಟ್ಟುಕೊಂಡು ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅಧಿಕಾರಿಗಳು ಯಾವಾಗಲೋ ಒಮ್ಮೆ ನೆಪಮಾತ್ರಕ್ಕೆ ದಾಳಿ ನಡೆಸುವುದನ್ನು ಬಿಟ್ಟು ಎಲ್ಲಾಅಂಗಡಿ ಮುಂಗಟ್ಟು, ಸಗಟು ಮಾರಾಟಗಾರರ ಸ್ಥಳಗಳ ಮೇಲೆ ನಿರಂತರ 2 ತಿಂಗಳು ದಾಳಿ ಮಾಡಿ ಶಿಸ್ತು ಕ್ರಮ ಕೈಗೊಂಡರೆ ಉಪಯುಕ್ತ. ಮಾಂಸದ ಅಂಗಡಿಗಳಲ್ಲಿಇದುವರೆಗೆ ಕವರ್ ನಿಷೇಧ ಮಾಡಿಲ್ಲ. ಅಧಿಕಾರಿಗಳು ಆ ಭಾಗಕ್ಕೆ ಸುಳಿಯುವುದಿಲ್ಲ.
ಪ್ರತಿಕ್ರಿಯೆ: ಈಗಾಗಲೇ ಸಾರ್ವಜನಿಕವಾಗಿ ಪ್ಲಾಸ್ಟಿಕ್ ನಿಷೇಧಿಸಿ ವರ್ತಕರಿಗೂ ವ್ಯಾಪಾರಿಗಳಿಗೆ ಸಾರ್ವಜನಿಕರಿಗೆ ದುಷ್ಪರಿಣಾಮ ತಿಳಿಸಲಾಗಿದೆ. ಇನ್ನು ಮುಂದೆ ಯಾರೇ ಪರಿಸರ ಮಾರಕ ಕವರ್ ಬಳಸುವುದು ಕಂಡು ಬಂದರೆ ಪೊಲೀಸ್ ಪ್ರಕರಣ ದಾಖಲಿಸಿ ದಂಡ ಹಾಕಲಾಗುವುದು.
-ವಿ.ನಾಗರಾಜ್ , ಮುಖ್ಯಾಧಿಕಾರಿ
ಪರಿಸರ ಮಾಲಿನ್ಯ ತಡೆಗೆ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು. ಸಾರ್ವಜನಿಕರು ಕವರ್ ಬಳಸುವ ನಿರ್ಲಕ್ಷತನ ಬಿಡಬೇಕು. ಕವರ್ ಬಳಕೆ ಮುಂದಿನ ಪೀಳಿಗೆಗೆ, ಪರಿಸರಕ್ಕೆ ವಿಷಕಾರಕ ಎನ್ನುವುದನ್ನು ಯಾರು ಮರೆಯಬಾರದು. ಕನಿಷ್ಠ ಜಿಲ್ಲಾಧಿಕಾರಿ ಆದರೂ ಗಮನ ಹರಿಸಿ ಇಲ್ಲಿನ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆನ್ನುವ ಕ್ರಮ ವಹಿಸಬೇಕು.
-ಎಂ.ವೆಂಕಟರೆಡ್ಡಿ, ಪರಿಸರವಾದಿ, ನಿವೃತ್ತ ಮುಖ್ಯ ಶಿಕ್ಷಕ
ಸಾರ್ವಜನಿಕರು ಬಟ್ಟೆ ಬ್ಯಾಗ್ ತರುವ ಕೆಲಸ ಮಾಡಬೇಕು. ಪುರಸಭೆಯವರು ಈಗಾಗಲೇ ದಂಡ ಹಾಕುತ್ತಿದ್ದಾರೆ. ಎಲ್ಲರಿಗೂ ಅರಿವಾದರೆ ಮಾತ್ರ ಕವರ್ ಬ್ಯಾನ್ ಆಗುತ್ತದೆ.
-ಸೂರ್ಯನಾರಾಯಣಶೆಟ್ಟಿ, ಅಧ್ಯಕ್ಷರು ವರ್ತಕರ ಸಂಘ
24 ಶ್ರೀನಿವಾಸಪುರ 1: ಪ್ಲಾಸ್ಟಿಕ್ ನಿಷೇಧದ ನಡುವೆಯೂ ಅಂಗಡಿಗಳಿಂದ ಸಾರ್ವಜನಿಕರು ರಾಜಾರೋಷವಾಗಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಹೋಗುತ್ತಿರುವುದು.
24 ಶ್ರೀನಿವಾಸಪುರ 2: ಎಂ.ವೆಂಕಟರೆಡ್ಡಿ

