ಅವಹೇಳನದ ವಿರುದ್ಧ ಸಿಡಿದೆದ್ದ ಬಸವ ಭಕ್ತರು

Contributed by: bhrahmanand.arali@timesofindia.com|Vijaya Karnataka•
Vijay Karnataka
ಚಿತ್ರ:21ಜಿಎಲ್ ಬಿ6

ವಿವಾದಾತ್ಮಕ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಗರದ ಜಗತ್ ವೃತ್ತದಲ್ಲಿನಡೆದ ಪ್ರತಿಭಟನೆ ವೇಳೆ ಲೇಖಕನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಚಿತ್ರ:21ಜಿಎಲ್ ಬಿ7

ವಿವಾದಾತ್ಮಕ ಲೇಖಕ ರವಿ ಹಂಜ್ ಪ್ರತಿಕೃತಿಗೆ ಚಪ್ಪಲಿ ಏಟು ಹಾಕಿದ ಬಸವ ಭಕ್ತರು.

ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕಠಿಣ ಕ್ರಮಕ್ಕೆ ಆಗ್ರಹ| ಜಗತ್ ವೃತ್ತದಲ್ಲಿಬಸವಪರ ಸಂಘಟನೆಗಳಿಂದ ಪ್ರತಿಕೃತಿ ದಹಿಸಿ ಆಕ್ರೋಶ

ಅವಹೇಳನದ ವಿರುದ್ಧ ಸಿಡಿದೆದ್ದ ಬಸವ ಭಕ್ತರು

ವಿಕ ಸುದ್ದಿಲೋಕ ಕಲಬುರಗಿ

ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವ ಸಾರಿದ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನ ಮಾಡಿರುವ ವಿವಾದಾತ್ಮಕ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಸವಪರ ಸಂಘಟನೆಗಳ ಮುಖಂಡರು ನಗರದ ಜಗತ್ ವೃತ್ತದಲ್ಲಿಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲಬಸವಪರ ಸಂಘಟನೆಗಳ ಮುಖಂಡರು ಹಾಗೂ ಸಮುದಾಯದ ಜನರು ನಗರದ ಜಗತ್ ವೃತ್ತದಲ್ಲಿಜಮಾಯಿಸಿದರು. ಮೊದಲಿಗೆ ಬಸವೇಶ್ವರ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತತ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ಮುಖಂಡರು, ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಚಿಂತನೆ ಹಾಗೂ ಸಂವಾದದ ಪರಂಪರೆಯನ್ನು ಪರಿಚಯಿಸಿದವರು. ಇಂತಹ ಮಹಾನ್ ಶರಣರ ಕುರಿತು ಹಗುರವಾಗಿ ಮಾತನಾಡುವುದು ಹಾಗೂ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಬರಹಗಳನ್ನು ಪ್ರಕಟಿಸುವುದು ಖಂಡನೀಯ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ ಸೇರಿ ಹಲವು ಮುಖಂಡರು ಮಾತನಾಡಿದರು. ಎಂಎಲ್ಸಿ ಬಿ.ಜಿ. ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ, ಅಮರನಾಥ ಪಾಟೀಲ್ , ಮುಖಂಡರಾದ ಚಂದು ಪಾಟೀಲ, ನೀಲಕಂಠರಾವ್ ಮೂಲಗೆ, ಎಂ.ಎಸ್ . ಪಾಟೀಲ ನರಿಬೋಳ, ಮಾಲಾ ಕಣ್ಣಿ, ಜ್ಯೋತಿ ಮರಗೋಳ, ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ವಿರು ಪಾಟೀಲ್ ರಾಯಕೋಡ್ , ವೀರೇಶ ನೀಲಾ, ಶಾಂತಲಿಂಗ ಸೂಗೂರು, ಬಾಬುರಾವ್ ಶೇರಿಕಾರ, ಈರಣ್ಣ ಝಳಕಿ, ರವೀಂದ್ರ ಶಾಬಾದಿ, ರಾಜಶೇಖರ ಸಿರಿ, ರಾಜು ನಾಗನಳ್ಳಿ, ಸಚಿನ್ ಕಡಗಂಚಿ, ಶಂಭು ಬಳಬಟ್ಟಿ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ರವಿ ಬಿರಾದಾರ, ಅಪ್ಪು ಗುಬ್ಯಾಡ, ಸಿದ್ದುಗೌಡ ಅಫಜಲಪುರಕರ್ , ಸಿದ್ದು ಬಾಳಿ, ನಾಗಭೂಷಣ್ ಮಠಪತಿ, ಅಶೋಕ ಘೂಳಿ, ಹಣಮಂತರಾವ ಪಾಟೀಲ್ , ಬಸವರಾಜ ಧೂಳಗುಂಡಿ, ರಾಜಶೇಖರ ಯಂಕಂಚಿ, ಶರಣು ಕಣ್ಣಿ, ವಿಶ್ವಾರಾದ್ಯ ಹಿರೇಮಠ್ , ಶಿವಕುಮಾರ್ ಕಾಳಗಿ, ರೇವಣ್ಣ ಪಟ್ಟಣ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

***

ಕೋಟ್ ...

ಲೇಖಕ ರವಿ ಹಂಜ್ ವಿರುದ್ಧ ರಾಜ್ಯದ ಎಲ್ಲಸಚಿವರು ಖಂಡನೆ ವ್ಯಕ್ತಪಡಿಸಿದ್ದಾರೆ. ವಿವಾದಿತ ಕೃತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಮಾಡಿದೆ. ಇದೀಗ ಆರೋಪಿ ವಿರುದ್ಧ ಕಠಿಣ ಕ್ರಮವೂ ಕೈಗೊಳ್ಳಲು ಮತ್ತೊಮ್ಮೆ ಸರಕಾರಕ್ಕೆ ಒತ್ತಾಯಿಸುವೆ.

- ಅಲ್ಲಂಪ್ರಭು ಪಾಟೀಲ್ , ಶಾಸಕ

ಕೋಟ್ ...

ಸಮಾನತೆ, ದಾಸೋಹ ಹಾಗೂ ಕಾಯಕದಂತಹ ತತ್ವ ನೀಡಿದ ಮಹಾನ ಶರಣ ಬಸವಣ್ಣ ಅವರಿಗೆ ಮಾಡಿದ ಅವಮಾನ ಎಂದಿಗೂ ಮಹಾಸಭಾ ಸಹಿಸುವುದಿಲ್ಲ. ಈಗಾಗಲೇ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಸಚಿವ ಈಶ್ವರ ಖಂಡ್ರೆ ಅವರು ಲೇಖಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೂಡಲೇ ಲೇಖಕನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಮತ್ತು ಕಠಿಣ ಶಿಕ್ಷೆ ನೀಡಬೇಕು.

- ಶರಣು ಮೋದಿ, ಜಿಲ್ಲಾಧ್ಯಕ್ಷ, ವೀರಶೈವ ಲಿಂಗಾಯತ ಮಹಾಸಭಾ

ಕೋಟ್ ...

ಬಸವಣ್ಣ ಅವರ ಬಗ್ಗೆ ದುರಹಂಕಾರದ ಹೇಳಿಕೆ ನೀಡುವ ವ್ಯಕ್ತಿಗೆ ಬರೆಯಲು ಮತ್ತು ಪ್ರಕಟಿಸಲು ಅವಕಾಶ ನೀಡಿದವರ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ. ವಿವಾದ ಉಂಟಾಗಲಿದೆ ಎಂಬ ಅರಿವಿದ್ದರೂ ಇಂತಹ ಬರಹಗಳಿಗೆ ಅವಕಾಶ ನೀಡಲಾಗಿದೆ. ಇಂತಹ ಕೃತ್ಯಗಳ ಹಿಂದೆ ಇರುವ ಎಲ್ಲರ ಪಾತ್ರದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು.

- ರವೀಂದ್ರ ಶಾಬಾದಿ, ಮುಖಂಡ,

ಕೋಟ್ ...

ಬಸವಣ್ಣ ಅವರನ್ನು ಅವಮಾನಿಸಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಮತ್ತು ಇವರಿಗೆ ಕುಮ್ಮಕ್ಕು ನೀಡಿದವರ ಬಗ್ಗೆ ತನಿಖೆ ನಡೆದು ಅವರಿಗೂ ಕೂಡ ಶಿಕ್ಷೆ ವಿಧಿಸಬೇಕು.

- ಆರ್ .ಜೆ.ಶೆಟಗಾರ, ಜಿಲ್ಲಾಧ್ಯಕ್ಷ, ಜಾಗತಿಕ ಲಿಂಗಾಯತ ಮಹಾಸಭಾ