‘ಕೈ’ ಮುಖಂಡರ ಸಾಮಾಜಿಕ ಜಾಲತಾಣ ಸಸ್ಪೆಂಡ್ : ಹೈದರಾಬಾದ್ ಮೆಟಾ ಕಚೇರಿ ಮೇಲೆ ದಾಳಿ

Contributed by: vijay.cheelange@timesgroup.com|Vijaya Karnataka•
Vijay Karnataka
ಹೈದರಾಬಾದ್ : ಯುವ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣಗಳನ್ನು ಸಸ್ಪೆಂಡ್ ಮಾಡಿದ್ದಕ್ಕೆ ಪಕ್ಷದ ಕಾರ್ಯಕರ್ತರು ಹೈದರಾಬಾದ್ ನಲ್ಲಿರುವ ಮೆಟಾ ಕಂಪನಿಯ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೂವಿನ ಕುಂಡಗಳನ್ನು ಎಸೆದು ಧ್ವಂಸಗೊಳಿಸಿದ್ದಾರೆ.

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಸಾಮಾಜಿಕ ಜಾಲತಾಣಗಳ ಮೇಲೆ ಮೆಟಾ ನಿರ್ಬಂಧ ವಿಧಿಸಿದೆ. ಇದನ್ನು ವಿರೋಧಿಸಿ ರಾಜ್ಯ ಅಧ್ಯಕ್ಷ ಜಕ್ಕಿಡಿ ಶಿವಚರಣ್ ರೆಡ್ಡಿ ನೇತೃತ್ವದಲ್ಲಿಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ, ಮೆಟಾ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂರಾಜಕೀಯ ಬೆರೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಒಂದು ವಾರದಲ್ಲಿಸಾಮಾಜಿಕ ಜಾಲತಾಣಗಳು ಸರಿಯಾಗಬೇಕು. ಡಿಲೀಟ್ ಆಗಿರುವ ಪೋಸ್ಟ್ ಗಳನ್ನು ಪುನಃಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟರ್ ನ್ನು ಸುಟ್ಟುಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ‘‘ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿರಾಜಕೀಯವಲ್ಲ, ವ್ಯವಹಾರ ನಡೆಸಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಕೇಂದ್ರ ಸರಕಾರವು ಸಹ ವಿದೇಶಿ ಕಂಪನಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಮೂಲಕ ಅವರ ವ್ಯವಹಾರಗಳನ್ನು ರಾಜಕೀಯಗೊಳಿಸಬಾರದು,’’ ಎಂದು ಕುಟುಕಿದ್ದಾರೆ.

ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ಬಿಜೆಪಿ ಖಂಡಿಸಿದೆ. ಕಾಂಗ್ರೆಸ್ ಗೂಂಡಾಗಳ ಪಕ್ಷ ಎಂದು ಕರೆದಿದೆ.