ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವ ತಮ್ಮ ಪ್ರಣಾಳಿಕೆಯಲ್ಲಿಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದನ್ನು ಕಾರ್ಡ್ ರೂಪದಲ್ಲಿಪ್ರತಿ ಮನೆ ಮನೆಗೆ ತಲುಪಿಸಿದಾಗ ಗ್ಯಾರಂಟಿಗೆ ವಾರಂಟಿ ಇಲ್ಲಾ, ಅದು ಪುಸ್ತಕದೊಳಗಿನ ನವಿಲು ಗರಿ ಎಂದು ಟೀಕೆ ಹಾಗೂ ಲೇವಡಿ ಮಾಡಿದ ಉಡುಪಿ ಜಿಲ್ಲಾಬಿಜೆಪಿ ಶಾಸಕರುಗಳಿಗೆ ಪಂಚ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲಎಂದು ಉಡುಪಿ ಜಿಲ್ಲಾಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.ಉಡುಪಿಯಲ್ಲಿನಡೆಯುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಗ್ರಾಮ ಪಂಚಾಯಿತಿಗಳಿಂದ ಹಣ ಪಡೆದರೆ ತಪ್ಪೇನು, ಗ್ರಾ.ಪಂ.ಗಳು ಕೂಡ ಸರಕಾರದ ಒಂದು ಭಾಗ. ಪಂಚಾಯಿತಿರಾಜ್ ಅಧಿನಿಯಮದ ಅಡಿಯಲ್ಲಿಸರಕಾರಿ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಮಾಡುವ ಅವಕಾಶ ಗ್ರಾಮ ಪಂಚಾಯಿತಿಗಿದೆ.
ಇವತ್ತು ಗ್ಯಾರಂಟಿ ಎನ್ನುವುದು ಬಿಜೆಪಿಯವರಿಗೆ ಒಂದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪಂಚ ಗ್ಯಾರಂಟಿಯಿಂದ ರಾಜ್ಯದ ಜನತೆ ಆರ್ಥಿಕ ಸದೃಢತೆ ಕಾಣುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವತ್ತು ಮೂರು ಅವಧಿಯಿಂದ ಕೇಂದ್ರದಲ್ಲಿಸರಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರದ ನಡೆ ನೋಡಿದರೆ ತಿಳಿಯುತ್ತದೆ. ಕೇವಲ ಅದಾನಿ, ಅಂಬಾನಿ ಅಂತಹ ಶ್ರೀಮಂತರಿಗೆ ಈ ಸರಕಾರ ಮಂಡಿಯೂರಿದೆ ಬಿಟ್ಟರೆ ಮಧ್ಯಮ ವರ್ಗ ಹಾಗೂ ಬಡವರಿಗೆ ಈ ಸರಕಾರ ಶಾಪವಾಗಿ ಪರಿಣಮಿಸಿದೆ. ಗ್ಯಾರಂಟಿ ಸಮಾವೇಶ ಟೀಕಿಸುವ ಜಿಲ್ಲೆಯ ಶಾಸಕರುಗಳು ಮೊದಲು ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಹಣದ ಪಾಲನ್ನು ಆದಷ್ಟು ಬೇಗ ನೀಡುವಂತೆ ಆಗ್ರಹ ಮಾಡಲಿ. ಸರಕಾರಿ ಕಾರ್ಯಕ್ರಮ ಸರಕಾರದ ಅನುದಾನದಲ್ಲೇ ನಡೆಯುವುದು ಎನ್ನುವ ಕನಿಷ್ಠ ಜ್ಞಾನವನ್ನು ಬಿಜೆಪಿ ಶಾಸಕರುಗಳು ಇನ್ನಾದರೂ ಬೆಳೆಸಿಕೊಳ್ಳಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿತಿಳಿಸಿದ್ದಾರೆ.