ಇತ್ತೀಚೆಗೆ ಮಂಗಳೂರಿನಲ್ಲಿನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಸಲಾಗಿದೆ. 320 ಕಿ.ಮೀ. ಕರಾವಳಿ ತೀರದ ಅಭಿವೃದ್ಧಿಗಾಗಿ 32,100 ಕೋಟಿ ಮಂಜೂರು ಮಾಡಲಾಗಿದ್ದು ಉಡುಪಿಗೆ ಹಡಗು ನಿರ್ಮಾಣ ಘಟಕಕ್ಕೆ 220 ಕೋಟಿ ನೀಡಿರುವುದನ್ನು ಹೊರತುಪಡಿಸಿದರೆ ಉಡುಪಿ ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಿಸದೆ ಅನ್ಯಾಯ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಘಟಕ ಆರೋಪಿಸಿದೆ.ಈ ಬಗ್ಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಉಡುಪಿ ಜಿಲ್ಲೆಗೆ ಇಷ್ಟೊಂದು ದೊಡ್ಡ ಮಟ್ಟದ ಅನ್ಯಾಯವಾಗಿದ್ದರೂ ಜಿಲ್ಲೆಯ ಶಾಸಕರು, ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತದೆ ಮೌನವಾಗಿರುವುದು ಅತ್ಯಂತ ವಿಷಾದನೀಯ ಎಂದರು.
ಸರಕಾರಿ ಕಚೇರಿಗಳಲ್ಲಿಜನಸಾಮಾನ್ಯರ ಯಾವುದೇ ಕೆಲಸಗಳು ಲಂಚ ನೀಡದೆ ನಡೆಯುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಹುದ್ದೆಗಳು ಖಾಲಿ ಬಿದ್ದಿದ್ದು, ಸಾವಿರಾರು ಫೈಲ್ ಗಳು ವಿಲೆವಾರಿಗೆ ಕಾಯುತ್ತಿವೆ. ಜಿಲ್ಲಾಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಕೇವಲ ಉತ್ಸವ ಮೂರ್ತಿಯಂತೆ ಉಡುಪಿಗೆ ಭೇಟಿ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆಯನ್ನು ಬಗೆ ಹರಿಸುವತ್ತಾ ಯಾವುದೇ ಆಸಕ್ತಿ ವಹಿಸಿಲ್ಲಎಂದು ಆರೋಪಿಸಿದರು.
ಸಚಿವ ಕೆ.ಜೆ. ಜಾಜ್ ರ್ ಅವರು ಮರವಂತೆ ಬಳಿ ಅಡ್ವೆಂಚರ್ ಪಾರ್ಕ್ ಮತ್ತು 12 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಭರವಸೆ ನೀಡಿದ್ದಾರೆಯೇ ಹೊರತು, ಅವುಗಳಲ್ಲಿಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಮತ್ತೊಂದೆಡೆ ಜಿಲ್ಲೆಯ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದರು.
ಕುಂದಾಪುರದ ಒಳಚರಂಡಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಮತ್ತು ಇದಕ್ಕೆ ಹೆಚ್ಚುವರಿಯಾಗಿ 300 ಕೋಟಿ ಅನುದಾನದ ತುರ್ತು ಅಗತ್ಯವಿದೆ. ಅದೇ ರೀತಿ ಬ್ರಹ್ಮಾವರ ಮತ್ತು ಉಡುಪಿ ನಗರದ ಕೆಲವು ಭಾಗಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ವಾರಾಹಿ ಎಡದಂಡೆ ಕಾಲುವೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಕಸ್ತೂರಿರಂಗನ್ ವರದಿ ಕುರಿತಾದ ಗೊಂದಲಗಳು ಇನ್ನೂ ಬಗೆಹರಿದಿಲ್ಲಎಂದರು.
ಕುಂದಾಪುರದ ಪಂಚಗಂಗಾವಳಿ ನದಿ ಪ್ರದೇಶ ಹೂಳು ತುಂಬಿಕೊಂಡಿದ್ದು, ನದಿಯ ಪ್ರವಾಹ ಪ್ರದೇಶಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಮಲ್ಪೆ ಬಂದರಿನ ಮೂಲಭೂತ ಸೌಕರ್ಯ ಅಭಿವೃದ್ಧಿ ಕೂಡಾ ಕನಸಾಗಿಯೇ ಉಳಿದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಗಳೂ ಸಹ ಸಮರ್ಪಕವಾಗಿ ಜಾರಿಯಾಗಿಲ್ಲ. ಸ್ಥಳೀಯ ಹೋಂ ಸ್ಟೇ ಮಾಲೀಕರು ಅಧಿಕಾರಿಗಳ ಕೆಂಪು ಪಟ್ಟಿ ಮತ್ತು ವಿಳಂಬ ಧೋರಣೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾದರೆ ಜಿಲ್ಲೆಯಲ್ಲಿಪ್ರವಾಸೋದ್ಯಮ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಿಂದ ಬಂದಿರುವ ವಲಸೆ ಕಾರ್ಮಿಕರು ಕುಂದಾಪುರ, ಉಡುಪಿ ನಗರದ ರಸ್ತೆಬದಿಯ ಫುಟ್ ಪಾತ್ ಗಳಲ್ಲಿಮಲಗುವ ದುಸ್ಥಿತಿ ಇದೆ. ರಾತ್ರಿ ತಂಗುದಾಣಗಳ ನಿರ್ಮಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಬಳಸಿಕೊಳ್ಳುವಲ್ಲಿಜಿಲ್ಲಾಡಳಿತ ವಿಫಲವಾಗಿದೆ. ಬೀಚ್ ಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೆ ಘನತ್ಯಾಜ್ಯ ನಿರ್ವಹಣೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲದೆ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆಗಾಗಿ ಅನುದಾನ ಬಿಡುಗಡೆ ಮಾಡದೆ ಪ್ರಾಣಿಗಳ ಹಕ್ಕುಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲೆಯ ಜನರ ಬಗ್ಗೆ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವಲ್ಲಿಸಂಪೂರ್ಣ ವಿಫಲವಾಗಿದ್ದರೆ, ಸ್ಥಳೀಯ ಜನಪ್ರತಿನಿಧಿಗಳು ಮೂಕಪ್ರೇಕ್ಷಕರಾಗಿದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ತಕ್ಷಣ ಈ ಗಂಭೀರ ಸಮಸ್ಯೆಗಳತ್ತ ಗಮನ ಹರಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಸ್ .ಆರ್ .ಲೋಬೊ, ಮಾಜಿ ಅಧ್ಯಕ್ಷ ಡೇನಿಯಲ್ ರೇಂಜರ್ , ಕಾರ್ಯದರ್ಶಿ ವಿಜಯಾನಂದ ಪಾಂಗಾಳ, ಸದಸ್ಯ ಆಗಸ್ಟಿನ್ ಡಿಸೋಜಾ ಉಪಸ್ಥಿತರಿದ್ದರು.