ಶಬರಿಮಲೆ ಯಾತ್ರೆ ಬೆಟ್ಟವೇರುವ ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆ ಸೂಚನೆ

Contributed by: gangadhar.korekkana@gmail.com|Vijaya Karnataka•
Vijay Karnataka
ಶಬರಿಮಲೆ: ಅಯ್ಯಪ್ಪ ದರ್ಶನಕ್ಕಾಗಿ ಆಗಮಿಸುವ ಭಕ್ತರು ಬೆಟ್ಟ ಏರುವ ಸಂದರ್ಭ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಕಾರ್ಯಕರ್ತರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.

ಹೃದ್ರೋಗ ಸಮಸ್ಯೆ ಇರುವವರು ಯಾತ್ರೆಗೆ ತೆರಳುವ ಮೊದಲು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು, ಪ್ರಯಾಣಕ್ಕೆ ವೈದ್ಯರಿಂದ ಅನುಮತಿ ಪಡೆಯಬೇಕು. ಇತ್ತೀಚೆಗೆ ಹೃದಯಾಘಾತ, ಹೃದಯ ಶಸ್ತ್ರಚಿಕಿತ್ಸೆ, ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿರುವವರು ತಜ್ಞ ವೈದ್ಯರ ಸಲಹೆಯಿಲ್ಲದೆ ಬೆಟ್ಟ ಏರಬಾರದು. ಜೀವನಶೈಲಿ ಸಂಬಂಧಿತ ಕಾಯಿಲೆಗಳು ನಿಯಂತ್ರಣದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಯಮಿತವಾಗಿ ಸೇವಿಸುವ ಔಷಧಗಳನ್ನು ಮುಂದುವರಿಸಬೇಕು. ಅಗತ್ಯ ಔಷಧಗಳು ಹಾಗೂ ವೈದ್ಯರ ಚೀಟಿಯನ್ನು ಜತೆಯಲ್ಲಿಇಟ್ಟುಕೊಳ್ಳಬೇಕು.
ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಬೆಟ್ಟ ಏರಬೇಕು. ಅತಿಯಾದ ವೇಗ ಹಾಗೂ ದೈಹಿಕ ಶ್ರಮ ತಪ್ಪಿಸಬೇಕು. ಆಗಾಗ ವಿಶ್ರಾಂತಿ ಪಡೆಯಬೇಕು. ಸಾಕಷ್ಟು ನೀರು ಕುಡಿಯಬೇಕು. ಆಹಾರ ಸೇವಿಸದೆ ಬೆಟ್ಟ ಏರಬಾರದು. ಜನಸಂದಣಿಯಲ್ಲಿನೂಕುನುಗ್ಗಲು ಮಾಡುವುದು ಹಾಗೂ ಓಡುವುದನ್ನು ತಪ್ಪಿಸಬೇಕು. ಎದೆನೋವು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಪ್ರಯಾಣ ನಿಲ್ಲಿಸಿ ವೈದ್ಯಕೀಯ ನೆರವು ಪಡೆಯಬೇಕು.

ಎದೆಯಲ್ಲಿನೋವು, ಭಾರ, ಬಿಗಿತ ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ಅತಿಯಾದ ಬೆವರುವಿಕೆ, ತಲೆಸುತ್ತು, ಪ್ರಜ್ಞೆ ತಪ್ಪುವುದು, ಹೃದಯ ಬಡಿತದಲ್ಲಿಅಸಹಜ ಬದಲಾವಣೆ, ಹಠಾತ್ ಅತಿಯಾದ ಆಯಾಸ, ಕೈಗಳು, ದವಡೆ ಅಥವಾ ಬೆನ್ನಿನ ಭಾಗಕ್ಕೆ ಹರಡುವ ನೋವು ಕಾಣಿಸಿಕೊಂಡರೆ ಅದನ್ನು ಹೃದಯ ಸಂಬಂಧಿತ ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕು. ತಕ್ಷಣ ನಡೆಯುವುದನ್ನು ನಿಲ್ಲಿಸಿ ಸುರಕ್ಷಿತ ಸ್ಥಳದಲ್ಲಿವಿಶ್ರಾಂತಿ ಪಡೆಯಬೇಕು. ಹತ್ತಿರದ ತುರ್ತು ವೈದ್ಯಕೀಯ ಸಹಾಯ ಕೇಂದ್ರದ ನೆರವು ಪಡೆಯಬೇಕು. ಅಗತ್ಯವಿದ್ದಲ್ಲಿಆಂಬ್ಯುಲೆನ್ಸ್ ಸೇವೆಯ ಮೂಲಕ ಆಸ್ಪತ್ರೆಗೆ ತಲುಪಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸನ್ನಿಧಾನದ ಆಯುರ್ವೇದ ಆಸ್ಪತ್ರೆ: ಶಬರೀಶನ ಸನ್ನಿಧಾನಕ್ಕೆ ಕಠಿಣ ಬೆಟ್ಟದ ಹಾದಿಯನ್ನು ಏರಿ ಆಗಮಿಸುವ ಅಯ್ಯಪ್ಪ ಭಕ್ತರಿಗೆ ಉಂಟಾಗುವ ದೈಹಿಕ ತೊಂದರೆಗಳಿಗೆ ಸನ್ನಿಧಾನದ ಆಯುರ್ವೇದ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುವುದು. ಭುಜ ನೋವು, ಮೊಣಕಾಲು ನೋವು, ಪಾದ ನೋವು, ಉಳುಕು ಮೊದಲಾದ ಸಮಸ್ಯೆಗಳಿಂದ ಬಳಲುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಸ್ಪತ್ರೆಗೆ ಆಗಮಿಸುತ್ತಾರೆ. ಅವರಿಗೆ ಕಷಾಯ, ಉಜ್ಜುವಿಕೆ ಹಾಗೂ ಪಂಚಕರ್ಮ ಚಿಕಿತ್ಸೆಗಳು ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ21 ಸಿಬ್ಬಂದಿ ಇದ್ದಾರೆ. ಏಳು ಮಂದಿ ವೈದ್ಯರು, ನಾಲ್ವರು ಪಂಚಕರ್ಮ ಥೆರಪಿಸ್ಟ್ ಗಳು ಹಾಗೂ ನಾಲ್ವರು ಫಾರ್ಮಸಿಸ್ಟ್ ಗಳು ಸೇವೆ ಸಲ್ಲಿಸುತ್ತಿದ್ದಾರೆ.

ಪೂರೈಕೆಯಾಗುವ ಔಷಧಗಳನ್ನು ಗಾಜಿನ ಬಾಟಲಿಗಳಲ್ಲಿತುಂಬಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಸನ್ನಿಧಾನದ ಜತೆಗೆ ಪಂಪಾ ಮತ್ತು ಎರುಮೇಲಿಯಲ್ಲಿಯೂ ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

ಫೊಟೋ: 22ಕೆಎಸ್ ದರ್ಶನ

ದರ್ಶನದ ಬಳಿಕ ಅಯ್ಯಪ್ಪ ಭಕ್ತರು ಮಾಡಿದ ತುಪ್ಪಾಭಿಷೇಕವನ್ನು ಹಂಚುತ್ತಿರುವುದು.

ಫೊಟೋ: 22ಕೆಎಸ್ ಕ್ಯೂ

ಮಧ್ಯಾಹ್ನ ಪೂಜೆಯ ಬಳಿಕ ದರ್ಶನಕ್ಕಾಗಿ ಹದಿನೆಂಟು ಮೆಟ್ಟಲು ಬಳಿ ಭಕ್ತರ ಸರದಿ ಸಾಲು.