ವಿಕ ಸುದ್ದಿಲೋಕ, ಬೆಂಗಳೂರುವೀರಲೊಕ ಪ್ರಕಾಶನದಿಂದ ಜಯನಗರದ ಶಾಲಿನಿ ಮೈದಾನದಲ್ಲಿಮೂರುದಿನಗಳ ಕಾಲ ನಡೆದ ಪುಸ್ತಕ ಸಂತೆಯ ಕೊನೆಯ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯ ಪುಸ್ತಕ ಪ್ರೇಮಿಗಳು ಭಾಗಿಯಾದರು. ಪುಸ್ತಕ ಪ್ರೇಮಿಗಳಿಂದ ಭರ್ಜರಿ ಖರೀದಿಯೂ ನಡೆಯಿತು.
ಬೆಳಗ್ಗೆ 11 ಗಂಟೆಯಿಂದಲೇ ಜನ ತಂಡೋಪತಂಡವಾಗಿ ಬರಲು ಶುರು ಮಾಡಿದರು. ಮಧ್ಯಾಹ್ನ, ಸಂಜೆ ವೇಳೆಗಂತೂ ಹೆಜ್ಜೆ ಇಡಲೂ ಜಾಗವಿಲ್ಲದಷ್ಟು ಸಂಖ್ಯೆಯಲ್ಲಿನೆರೆದಿದ್ದರು. ಪುಸ್ತಕ ಸಂತೆಗೆ ಬಂದ ಹೆಚ್ಚಿನರು ನಾಲ್ಕಾರು ಪುಸ್ತಕಗಳನ್ನು ಖರೀದಿಸಿಯೇ ಸಾಗುತ್ತಿದ್ದರು. 90ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳೂ ಸೇರಿದಂತೆ ಹೊರಗೆ ಹಾಕಿದ್ದ ತಿಂಡಿ ತಿನಿಸು, ಬಟ್ಟೆಬರೆ ಮಳಿಗೆಗಳಲ್ಲೆಲ್ಲಜನರಿಂದ ಭರ್ತಿಯಾಗಿದ್ದವು. ಚಿತ್ರನಟರು, ನಿರ್ದೇಶಕರು, ಧಾರಾವಾಹಿಗಳ ವಿವಿಧ ಪಾತ್ರಧಾರಿಗಳು ಸಹ ಪುಸ್ತಕ ಸಂತೆಗೆ ಬಂದಿದ್ದರಿಂದ ಅವರ ಜತೆ ಹಲವರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಜನಜಂಗುಳಿಯ ನಡುವೆಯೂ ಸಂವಾದ ಕಾರ್ಯಕ್ರಮಗಳು ನಡೆದವು. ‘ಸಣ್ಣ ಕಥೆ ನನ್ನ ದೃಷ್ಟಿಯಲ್ಲಿ’ ವಿಷಯ ಕುರಿತು ಅನಿಲ್ ಗುನ್ನಾಪುರ, ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಂನಾಡಿಗಾ ನಾರಾಯಣ್ ಅಭಿಪ್ರಾಯ ಹಂಚಿಕೊಂಡರು. ‘ಸಾಹಿತಿಗಳು ಇತರ ಕ್ಷೇತ್ರಗಳ ಸಾಧಕರ ನಡುವೆ ಸಂಬಂಧ ಕೊಡು-ಕೊಳ್ಳುವಿಕೆ ಇಲ್ಲದಿರುವಿಕೆಗೆ ಪರಿಹಾರವೇನು’ ವಿಷಯದ ಕುರಿತು ಮೌನೇಶ್ ಬಡಿಗೇರ, ಚೈತನ್ಯ ಮಜುಲಕೋಡಿ, ಡಿ. ಮಹೇಂದ್ರ ಸಂವಾದ ನಡೆಸಿದರು. ‘ವಿಜ್ಞಾನ ಸಾಹಿತ್ಯಕ್ಕೆ ಮಾಹಿತಿಯ ಸಂವಹನ ಬಿಟ್ಟು ಬೇರೆ ಉದ್ದೇಶಗಳಿವೆಯೇ ? ಹಾಗೂ ಇಂದಿನ ಹಾಸ್ಯ ಸಾಹಿತ್ಯದ ಗೊತ್ತು ಗುರಿ’ ವಿಷಯಗಳ ಕುರಿತು ಸಂವಾದಗಳಲ್ಲಿಮಹತ್ವದ ಚರ್ಚೆ ನಡೆದವು.
‘ಸಾಹಿತ್ಯಿಕ ಸಂಸ್ಥೆಗಳಲ್ಲಿ
ಮೂಲ ಆಶಯ ಮರೆ’
‘ಸಾಹಿತ್ಯ ಪರಿಷತ್ , ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಸಾಹಿತ್ಯ ಸೃಷ್ಟಿಗೆ ಪ್ರಯೋಜನವಾಗಿದೆಯೇ’ ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿರಘುನಾಥ್ ಚ.ಹ., ನೂತನ ದೋಶೆಟ್ಟಿ, ಕರ್ಕಿ ಕೃಷ್ಣಮೂರ್ತಿ ಮಹತ್ವಪೂರ್ಣ ಚರ್ಚೆ ನಡೆಸಿದರು.
‘‘ರಾಜ್ಯದಲ್ಲಿರುವ ಸಾಹಿತ್ಯಿಕ ಸಂಸ್ಥೆಗಳು ಹುಟ್ಟಿಕೊಂಡಿರುವ ಸ್ಪಷ್ಟತೆ ಯಾರಿಗೂ ಇಲ್ಲ. ಪುಸ್ತಕ ಪ್ರಕಟಣೆ, ಪ್ರಶಸ್ತಿ ಕೊಡುತ್ತಿದ್ದಾರೆ. ಆದರೆ, ಸಂಸ್ಥೆಗಳು ಮೂಲ ಆಶಯಗಳಿಂದ ದೂರ ಸರಿದಿವೆ. ಇಂತಹ ಸಂಸ್ಥೆಗಳಿಂದ ಉಪಯೋಗಗಳಿವೆ ಅನ್ನುವುದಕ್ಕಿಂತ, ಸರಕಾರಕ್ಕೆ ಅನುಕೂಲವಿದೆ. ಇಂತಹ ಸಂಸ್ಥೆಗಳನ್ನು ಸ್ವಾಯತ್ತತೆಯಿಂದ ಇರಲು ಬಿಡುತ್ತಿಲ್ಲ. ಈ ಸಂಸ್ಥೆಗಳಲ್ಲೂರಾಜಕೀಯ ನುಸುಳಿವೆ. ಅಕಾಡೆಮಿಗಳು, ಸಾಹಿತ್ಯ ಪರಿಷತ್ ಗಳ ಮೂಲ ಆಶಯವೇ ಮರೆಯಾಗುತ್ತಿದೆ. ಇದರಿಂದಾಗಿ ಸಾಹಿತಿಗಳು ಲಜ್ಜೆಗೇಡಿಗಳಾಗುವ ವಾತಾವರಣ ಸೃಷ್ಟಿಯಾಗಿದೆ. ಹಿಂದೆ ಕನ್ನಡ ಕಟ್ಟುವ ಕೆಲಸವನ್ನು ಸಾಕಷ್ಟು ಜನ ಮಾಡಿದ್ದಾರೆ. ಆದರೆ, ಈಗ ಸಾರ್ವಜನಿಕ ಲಾಬಿಗೆ ಒಳಗಾಗಿ ಸಾಹಿತ್ಯ ಪರಿಷತ್ ಆದ್ಯತೆಗಳು ಸಹ ಬದಲಾಗುತ್ತಿವೆ,’’ ಎಂದು ಆತಂಕ ವ್ಯಕ್ತಪಡಿಸಿದರು.
***
ಫೋಟೋ ಶೀರ್ಷಿಕೆ....
ಜಯನಗರದ ಶಾಲಿನಿ ಮೈದಾನದಲ್ಲಿ ಭಾನುವಾರ ಪುಸ್ತಕ ಸಂತೆಯಲ್ಲಿಮೂರನೆಯ ದಿನ ಕಿಕ್ಕಿರಿದು ತುಂಬಿದ ಜನಸ್ತೋಮ.