ಲೀಡ್ - ಕ್ರಷರ್ ಗಳ ಹಾವಳಿ ವಿರೋಧಿಸಿ ರಸ್ತೆಗಿಳಿದ ಗ್ರಾಮಸ್ಥರು

Contributed by: chandregowda.n@timesofindia.com|Vijaya Karnataka•
narayanaapura villagers protest against crushers
ಕಣಿವೆ ನಾರಾಯಣಪುರ ವ್ಯಾಪ್ತಿಯಲ್ಲಿದೂಳು | ಭಾರಿ ಬ್ಲಾಸ್ಟಿಂಗ್ ಗೆ ಜನಜೀವನ ಅಸ್ತವ್ಯಸ್ತ | ಕ್ರಷರ್ ಗಳ ಬಂದ್ ಗೆ ಪಟ್ಟು

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ತಾಲೂಕಿನ ಕಣಿವೆ ನಾರಾಯಣಪುರ ವ್ಯಾಪ್ತಿಯ ಕ್ರಷರ್ ಜೋನ್ ಭಾಗದಲ್ಲಿಜಲ್ಲಿಕ್ರಷರ್ ಗಳು ಹಾಗೂ ಕಲ್ಲುಕ್ವಾರಿಗಳ ಅತಿಯಾದ ಹಾವಳಿಯಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

ದಿನನಿತ್ಯ ಓಡಾಡುವ ನೂರಾರು ಜಲ್ಲಿತುಂಬಿದ ಬೃಹತ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ಜನರು, ಕೂಡಲೇ ಕ್ರಷರ್ ಗಳನ್ನು ಬಂದ್ ಮಾಡುವಂತೆ ಪಟ್ಟು ಹಿಡಿದರು. ಕಣಿವೆ ನಾರಾಯಣಪುರ ವ್ಯಾಪ್ತಿಯಲ್ಲಿಹತ್ತಾರು ಕಲ್ಲುಕ್ವಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಹೊರಸೂಸುವ ದೂಳು ಇಡೀ ಕೃಷಿ ಭೂಮಿಗೆ ವ್ಯಾಪಿಸುತ್ತಿದ್ದು, ಕೈಗೆ ಬಂದ ರಾಗಿ ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ದೂಳುಮಯವಾಗಿ ಹಾಳಾಗುತ್ತಿವೆ. ಒಂದೆಡೆ ಮಳೆಯಿಲ್ಲದೆ ಕಂಗಾಲಾಗಿದ್ದರೆ, ಮತ್ತೊಂದೆಡೆ ಕ್ರಷರ್ ದೂಳಿನಿಂದ ಬೆಳೆ ನಾಶವಾಗಿ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ಜಲಮೂಲಗಳಿಗೂ ಕಂಟಕ: ನಸುಕುಂಟೆ ಹೊಸೂರಿನಿಂದ ಕಣಿವೆ ನಾರಾಯಣಪುರದವರೆಗೆ ಬೃಹತ್ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಗುಂಡಿಬಿದ್ದು ಹದಗೆಟ್ಟಿವೆ. ವಾಹನಗಳು ಓಡಾಡುವಾಗ ರಸ್ತೆಗೆ ನಿಯಮಿತವಾಗಿ ನೀರು ಸಿಂಪಡಿಸದ ಕಾರಣ ದೂಳು ಮುಗಿಲೆತ್ತರಕ್ಕೆ ಹಾರುತ್ತಿದ್ದು, ರಸ್ತೆಯಲ್ಲಿವಾಹನ ಸವಾರರು ಕಣ್ಣು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯ ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು, ಕುಡಿಯುವ ನೀರಿಗೂ ಆತಂಕ ಎದುರಾಗಿದೆ.

ಕ್ವಾರಿಗಳಲ್ಲಿರಾತ್ರಿ ಹಗಲೆನ್ನದೆ ಮಿತಿಮೀರಿ ನಡೆಸಲಾಗುತ್ತಿರುವ ಭಾರಿ ಸದ್ದಿನ ಬ್ಲಾಸ್ಟಿಂಗ್ ನಿಂದಾಗಿ ಜನರು ನೆಮ್ಮದಿಯಿಂದ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಹಾರುವ ದೂಳಿನಿಂದಾಗಿ ಶ್ವಾಸಕೋಶ ತೊಂದರೆ, ಕ್ಯಾನ್ಸರ್ ನಂತಹ ಗಂಭೀರ ರೋಗಗಳು ಹೆಚ್ಚಾಗುತ್ತಿದ್ದು, ವೃದ್ಧರು ಹಾಗೂ ಶಾಲೆಗೆ ತೆರಳುವ ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಓವರ್ ಲೋಡ್ ಲಾರಿಗಳಿಂದ ಅಪಘಾತಗಳು ಸಂಭವಿಸಿ ಜೀವಹಾನಿಯೂ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಣಿ ಇಲಾಖೆ ಹಾಗೂ ಪೊಲೀಸರು ಈ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿರುವ ಕಣಿವೆ ನಾರಾಯಣಪುರ ಹಾಗೂ ಹೊಸೂರು ಗ್ರಾಮಸ್ಥರು, ಕೂಡಲೇ ಕ್ರಷರ್ ಗಳನ್ನು ಬಂದ್ ಮಾಡಬೇಕು, ಜನರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

09ಸಿಬಿಪಿಫೋಟೋ09

ಕ್ರಷರ್ ಗಳಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು.

09ಸಿಬಿಪಿಫೋಟೋ10

ರಸ್ತೆ ಬಂದ್ ಮಾಡಿ ಘೋಷಣೆ ಕೂಗಿದ ಸ್ಥಳೀಯರು.