ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಆಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿಅ.19, 22ರ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಸಂತ ಆಗ್ನೆಸ್ ಕಾಲೇಜು ಪ್ರಿನ್ಸಿಪಾಲ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಅಧಿಕೃತ ಮಾರ್ಗಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು. ಸೆ.11ರಂದು ಕರಡು ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿತ್ತು. ಆಕ್ಷೇಪಣೆ ಸಲ್ಲಿಸಲು, ಸ್ಪಷ್ಟನೆ ಕೇಳಲು ಅಥವಾ ದಿನಾಂಕ ಬದಲಾವಣೆಗೆ ಸಲಹೆ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸೆ. 26ರಂದು ಅಂತಿಮ ವೇಳಾಪಟ್ಟಿ ಪ್ರಕಟಿಸುವವರೆಗೆ ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆ ಅಥವಾ ದಿನಾಂಕ ಬದಲಾವಣೆಯ ಮನವಿ ಬಂದಿರಲಿಲ್ಲ. ಸೋಮವಾರ ವಿದ್ಯಾರ್ಥಿಗಳ ಒಂದು ಗುಂಪು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಕಾಲೇಜಿನ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೂ ಮುನ್ನ ಕಾಲೇಜು ಆಡಳಿತಕ್ಕೆ ಯಾವುದೇ ಅಧಿಕೃತ ಮಾಹಿತಿ ಅಥವಾ ಮನವಿ ಸಲ್ಲಿಸಿರಲಿಲ್ಲಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸಲು ಕಾಲೇಜು ಸಿದ್ಧವಿದೆ. ಆದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು, ಶಿಸ್ತು ಉಲ್ಲಂಘಿಸುವುದು ಅಥವಾ ಕ್ಯಾಂಪಸ್ ನ ಶಾಂತಿಗೆ ಭಂಗ ತರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿತಿಳಿಸಿದ್ದಾರೆ.