Simple Living A Message To Preserve The Environment And Promote Social Harmony
(ಸಂಪಾದಕೀಯ) ಸರಳ ಬದುಕೇ ಬರಕ್ಕೆ ಉತ್ತರ
Contributed by: Keerthi Kolgar|Vijaya Karnataka•
ಕಿಕ್ಕರ್ : ನದಿಮೂಲ ಉಳಿದರೆ ನಾಡು ಉಳಿದೀತು
- - -ದಸರಾ ಉದ್ಘಾಟನಾ ವೇದಿಕೆಯಲ್ಲಿಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಉದ್ಘಾಟನಾ ಭಾಷಣ, ನಾಡಹಬ್ಬದ ಸಂಭ್ರಮವನ್ನು ಮೀರಿ ನಮ್ಮ ಕಾಲದ ಗಂಭೀರ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಸಿರುವುದು ಗಮನಾರ್ಹ. ಲಕ್ಷ ದೀಪಗಳನ್ನು ಹಚ್ಚುವುದಕ್ಕಿಂತ ‘ವೃಕ್ಷದೀಪ’ ಹಚ್ಚಿ ದೇವರನ್ನು ಪೂಜಿಸಬೇಕು ಎಂಬ ಅವರ ಕರೆ, ಧಾರ್ಮಿಕ ಆಚರಣೆಯನ್ನು ಪರಿಸರ ಹೊಣೆಗಾರಿಕೆಗೆ ಜೋಡಿಸುವ ಅಪೂರ್ವ ಸಂದೇಶವೇ ಸರಿ. ಬರದ ಹೊತ್ತಿನಲ್ಲಿಈ ಮಾತುಗಳ ಮಹತ್ವ ಇನ್ನಷ್ಟು ಹೆಚ್ಚಿದೆ. ನೀರು, ಮಣ್ಣು, ಗಾಳಿ ಮತ್ತು ಜೀವವೈವಿಧ್ಯವನ್ನು ಕಲುಷಿತಗೊಳಿಸಿ ನಡೆಸುವ ಯಾವುದೇ ಅಭಿವೃದ್ಧಿ ಕೊನೆಗೆ ಮನುಷ್ಯನ ಬದುಕನ್ನೇ ಬಡವಾಗಿಸುತ್ತದೆ ಎಂಬ ದುಸ್ಥಿತಿಯನ್ನು ಮನುಕುಲ ಹೆಜ್ಜೆಹೆಜ್ಜೆಗೂ ಅನುಭವಿಸುತ್ತಿರುವ ಈ ಹೊತ್ತಿನಲ್ಲಿಶ್ರೀಗಳ ಮಾತು ಜಗತ್ತಿಗೇ ವಿವೇಕ ಹೇಳಿದೆ.
ಈಗಿನ ಬಹುಪಾಲು ಜೆನ್ ಜಿ, ಆಲ್ಫಾ, ಬೀಟಾ ಪೀಳಿಗೆಗೆ ತಂತ್ರಜ್ಞಾನವೇ ಸೂರ್ಯ, ಚಂದ್ರ. ಜಗತ್ತು ಬೆಳಗುವುದೇ ಈ ತಾಂತ್ರಿಕ ಪರಿಕರಗಳಿಂದ ಎಂಬಂತಾಗಿದೆ. ಹಲವರಿಗೆ ಮಣ್ಣಿನ ನಂಟಿಲ್ಲ. ವರ್ಚುವಲ್ ಲೋಕದಲ್ಲೇ ಬದುಕಿನ ವಾಸ್ತವಗಳನ್ನು ಕಾಣುತ್ತಿರುವುದು ಈ ಪೀಳಿಗೆಯ ತಪ್ಪೂ ಅಲ್ಲ. ಆಧುನಿಕ ಕಾಲ ಅವರನ್ನು ಹಾಗೆ ರೂಪಿಸಿದೆಯಷ್ಟೇ. ಆದರೆ, ಗೂಗಲ್ ನಿಂದ ರೊಟ್ಟಿ ಅಥವಾ ಅನ್ನವನ್ನು ಡೌನ್ ಲೋಡ್ ಮಾಡಲಾಗದು ಎಂಬ ಶ್ರೀಗಳ ಸರಳ ಉದಾಹರಣೆಯು ನವಪೀಳಿಗೆಯನ್ನು ಎಚ್ಚರಿಸಿದೆ. ಆಹಾರಕ್ಕೆ ಭೂಮಿ, ನೀರು, ಬೀಜ, ಸೂರ್ಯನ ಬೆಳಕು ಮತ್ತು ರೈತನ ಬೆವರು ಅಗತ್ಯ. ಪರದೆಯ ಮೇಲಿನ ಸೌಲಭ್ಯಗಳು ಬದುಕಿನ ಮೂಲಾಧಾರಗಳನ್ನು ಬದಲಿಸಲಾರವು. ಆದ್ದರಿಂದ ತಂತ್ರಜ್ಞಾನವನ್ನು ತಿರಸ್ಕರಿಸುವುದಲ್ಲ, ಅದು ಪ್ರಕೃತಿ ಮತ್ತು ಪರಿಶ್ರಮದ ಪರ್ಯಾಯವಲ್ಲಎಂಬ ಅರಿವು ಬೆಳೆಸುವುದು ಇಂದಿನ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಮಕ್ಕಳಿಗೆ ಉಪಕರಣಗಳನ್ನು ಕೊಡುವಷ್ಟೇ ಅಲ್ಲ, ಮಣ್ಣನ್ನು ಮುಟ್ಟುವ, ಬೀಜ ಬಿತ್ತುವ, ನೀರನ್ನು ಉಳಿಸುವ ಮತ್ತು ರೈತನ ಶ್ರಮವನ್ನು ಗೌರವಿಸುವ ಸಂಸ್ಕಾರವನ್ನೂ ನೀಡಬೇಕಾಗಿರುವುದು ಆಧುನಿಕ ಕಾಲದ ತುರ್ತು ಕೂಡ.
ಬಂಗಾರ ಕೊರತೆಯಾದರೆ ಆಮದು ಮಾಡಿಕೊಳ್ಳಬಹುದು; ಕಾವೇರಿ, ಕೃಷ್ಣೆ, ತುಂಗಭದ್ರೆಯರನ್ನು ಯಾವ ದೇಶದಿಂದ ತರುವುದು ಎಂಬ ಶ್ರೀಗಳ ಪ್ರಶ್ನೆ, ನದಿಮೂಲಗಳನ್ನು ಅಭಿವೃದ್ಧಿಯ ಹೆಸರಿನಲ್ಲಿಬಲಿ ಕೊಡುತ್ತಿರುವ ಆಳುವವರಿಗೂ, ಆಳಲ್ಪಡುತ್ತಿರುವವರಿಗೂ ಸಮಾನವಾಗಿ ಅನ್ವಯಿಸುತ್ತದೆ. ಕನ್ನಂಬಾಡಿ ಕಟ್ಟೆಗಾಗಿ ರಾಜಮಾತೆ ಕೆಂಪನಂಜಮ್ಮಣ್ಣಿ ತಮ್ಮ ಆಭರಣಗಳನ್ನೇ ನೀಡಿದ ಪರಂಪರೆ ನಮ್ಮದು; ನೀರಿಗಾಗಿ ಒಡವೆ ತೊರೆದ ನಾಡು ಇಂದು ನೀರನ್ನೇ ಪೋಲು ಮಾಡುತ್ತಿರುವುದು ವಿಪರ್ಯಾಸ. ಮಣ್ಣನ್ನು ಮಣ್ಣಿನಂತೆ, ಮರವನ್ನು ಮರದಂತೆ ಪ್ರೀತಿಸುವ ನಾವು ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸಬಾರದೇ ಎಂಬ ಅವರ ಮಾತು, ಪರಿಸರಪ್ರೇಮ ಮತ್ತು ಸಾಮಾಜಿಕ ಸಾಮರಸ್ಯ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾರಿದೆ. ದುಡಿದು ಬದುಕುವುದನ್ನು ಕಲಿಸಿದ ಬಸವಣ್ಣನವರ ಕಾಯಕ ತತ್ತ್ವವೂ ಪ್ರಕೃತಿಯನ್ನು ಶೋಷಿಸದೆ, ಇತರರ ಶ್ರಮವನ್ನು ಕಸಿಯದೆ ಬಾಳುವ ಸರಳ ಜೀವನದ ಪಾಠವೇ ಆಗಿದೆ. ನಿಸರ್ಗಸ್ನೇಹಿಯಾಗಿ ಎಲ್ಲರ ಬದುಕು ರೂಪುಗೊಳ್ಳಲಿ.