ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿಗೆ ಗಾಯ

Contributed by: MANJUNATHA S|Vijaya Karnataka•
cooking gas cylinder explosion severe harm to health
ವಿಕ ಸುದ್ದಿಲೋಕ ಬೆಂಗಳೂರು

ನಗರದ ಚಂದ್ರಾಲೇಔಟ್ ಬಳಿಯ ವಿನಾಯಕನಗರ ಲೇಔಟ್ ನ ಮನೆಯೊಂದರಲ್ಲಿಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅವಳಿ ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿನಾಯಕನಗರ ಲೇಔಟ್ ನ ಕರಿಲಿಂಗಪ್ಪ(43), ಪತ್ನಿ ಲಕ್ಷ್ಮಮ್ಮ (40), ಮಕ್ಕಳಾದ ಚೈತ್ರಾ(11), ಬಸವ(9), ಅವಳಿ ಮಕ್ಕಳಾದ ಗೀತಾ ಹಾಗೂ ಗಿರಿಜಾ (3) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷಮ್ಮ ಮತ್ತು 3 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಚಂದ್ರಾ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ರಾಯಚೂರು ಮೂಲದ ಕರಿಲಿಂಗಪ್ಪ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ವಿನಾಯಕ ಲೇಔಟ್ ನ ಬಾಡಿಗೆ ಮನೆಯಲ್ಲಿನಾಲ್ವರು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು. ದಂಪತಿಯು ನಿತ್ಯ ಕಟ್ಟಡ ನಿರ್ಮಾಣಕ್ಕೆ ಕೆಲಸಕ್ಕೆ ತೆರಳುತ್ತಿದ್ದರು.

ಶುಕ್ರವಾರ ಮುಂಜಾನೆ 6 ಗಂಟೆ ಸುಮಾರಿಗೆ ಎದ್ದಿದ್ದ ಲಕ್ಷ್ಮಮ್ಮ ಅಡುಗೆ ಮಾಡಲು ಕೊಠಡಿಗೆ ತೆರಳಿದ್ದರು. ಗ್ಯಾಸ್ ಸ್ಟೌ ಹೊತ್ತಿಸಲು ಲೈಟರ್ ಹಚ್ಚುತ್ತಿದ್ದಂತೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾಚೆಲ್ಲಾಪಿಲ್ಲಿಯಾಗಿದ್ದು, ಲಕ್ಷ್ಮಮ್ಮ, ಕರಿಲಿಂಗಪ್ಪ ಹಾಗೂ ಮಕ್ಕಳು ಗಾಯಗೊಂಡಿದ್ದಾರೆ. ಸ್ಫೋಟದ ಸದ್ದು ಕೇಳಿ ಅಕ್ಕಪಕ್ಕದ ನಿವಾಸಿಗಳು ಹೊರಬಂದು ನೋಡಿದಾಗ ಇಡೀ ಕುಟುಂಬ ಬೆಂಕಿಯ ಜ್ವಾಲೆಯಲ್ಲಿನರಳಾಡುತ್ತಿತ್ತು. ತಕ್ಷಣ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ ಮಕ್ಕಳು ಹಾಗೂ ಲಕ್ಷ್ಮಮ್ಮ ದಂಪತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಅಡುಗೆ ಅನಿಲ ಸೋರಿಕೆಯೇ ಅವಘಡಕ್ಕೆ ಕಾರಣ?

ಲಕ್ಷ್ಮಮ್ಮ ಅವರು ಗುರುವಾರ ರಾತ್ರಿ ಸ್ಟೌ ಆಫ್ ಮಾಡದೆ ಮಲಗಿದ್ದಾರೆ. ಹೀಗಾಗಿ, ಇಡೀ ರಾತ್ರಿ ಅನಿಲ ಸೋರಿಕೆಯಾಗಿದೆ. ಇದನ್ನು ಗಮನಿಸದೆ ಶುಕ್ರವಾರ ಬೆಳಗ್ಗೆ ಸ್ಟೌವ್ ಹೊತ್ತಿಸಲು ಲೈಟರ್ ಹಚ್ಚುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.