(ಬೆಂಗಳೂರಿಗೆ) ದಸರೆ ಉದ್ಘಾಟನೆಗೆ 100ಕ್ಕೂ ಹೆಚ್ಚು ಧರ್ಮಗುರುಗಳಿಗೆ ಆಹ್ವಾನ

Contributed by: Beeresha M|Vijaya Karnataka•
invitation to over 100 religious leaders for dasara inauguration
ದಸರೆ ಉದ್ಘಾಟನೆಗೆ 100ಕ್ಕೂ ಹೆಚ್ಚು ಧರ್ಮಗುರುಗಳಿಗೆ ಆಹ್ವಾನ

*ದಸರಾ ಸಿದ್ಧತೆ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿನಿರ್ಧಾರ
ವಿಕ ಸುದ್ದಿಲೋಕ ಮೈಸೂರು

ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರಲು ಈ ಬಾರಿಯ ದಸರಾ ಉದ್ಘಾಟನಾ ದಿನದಂದು ನಾನಾ ಧರ್ಮಗಳ 100ಕ್ಕೂ ಹೆಚ್ಚು ಮಠಾಧೀಶರು ಹಾಗೂ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಶನಿವಾರ ನಡೆದ ದಸರಾ ಪೂರ್ವ ಸಿದ್ಧತೆ ಕುರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಮತ್ತಷ್ಟು ಶಿಸ್ತು, ಸೌಹಾರ್ದತೆ ಹಾಗೂ ಸಾಂಸ್ಕೃತಿಕ ವೈಭವದಿಂದ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಮಾತ್ರವಲ್ಲದೇ ಹೊರ ರಾಜ್ಯದ ವಿಐಪಿಗಳನ್ನು ದಸರೆಗೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿಅಧಿಕಾರಿಗಳಿಗೆ ಹಲವು ಸ್ಪಷ್ಟ ನಿರ್ದೇಶನ ನೀಡಿದರು.

ಫ್ಲೆಕ್ಸ್ , ಬ್ಯಾನರ್ ಗೆ ಸಂಪೂರ್ಣ ಕಡಿವಾಣ: ದಸರಾ ಸಂದರ್ಭದಲ್ಲಿಮೈಸೂರು ನಗರದ ಸೌಂದರ್ಯ ಹಾಗೂ ನೈರ್ಮಲ್ಯಕ್ಕೆ ಧಕ್ಕೆ ಉಂಟಾಗದಂತೆ ರಾಜಕೀಯ ನಾಯಕರು ಅಥವಾ ಖಾಸಗಿ ವ್ಯಕ್ತಿಗಳ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಅಳವಡಿಸುವುದನ್ನು ಸಂಪೂರ್ಣ ನಿಷೇಧಿಸಲು ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ದಿನಕ್ಕೆ ಇಬ್ಬರು ಸಚಿವರಿಗೆ ಹೊಣೆ: ‘‘11 ದಿನಗಳ ದಸರಾ ಮಹೋತ್ಸವವನ್ನು ಯಾವುದೇ ಲೋಪವಿಲ್ಲದೆ ನಡೆಸಲು ಪ್ರತಿದಿನ ತಲಾ ಇಬ್ಬರು ಸಚಿವರಿಗೆ 24 ಗಂಟೆಗಳ ಕಾಲ ಆಡಳಿತಾತ್ಮಕ ಹಾಗೂ ಸಂಘಟನಾ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಗಳ ಸಮನ್ವಯ, ಜನದಟ್ಟಣೆ ನಿರ್ವಹಣೆ ಹಾಗೂ ನಾನಾ ಇಲಾಖೆಗಳ ನಡುವಿನ ಸಹಕಾರಕ್ಕೆ ಆದ್ಯತೆ ನೀಡಲಾಗುವುದು,’’ ಎಂದು ತಿಳಿಸಿದರು.

ಜಂಬೂಸವಾರಿಗೆ ತ್ರಿವಿಧ ಸೇನೆ: ‘‘ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿಈ ಬಾರಿಯ ದಸರಾ ಮೆರವಣಿಗೆಯಲ್ಲಿಭಾರತೀಯ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಶಿಸ್ತುಬದ್ಧ ಪಥಸಂಚಲನ ಮತ್ತು ಸಾಹಸ ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ. ಜಂಬೂಸವಾರಿ ಮೆರವಣಿಗೆಯಲ್ಲಿಬೈಲಕುಪ್ಪೆಯ ಟಿಬೆಟಿಯನ್ ಸಾಂಸ್ಕೃತಿಕ ತಂಡ, ತುಳುನಾಡಿನ ಕಲಾತಂಡಗಳು, ನೆರೆ ರಾಜ್ಯದ ಸ್ತಬ್ಧಚಿತ್ರಗಳು ಭಾಗವಹಿಸಲಿವೆ,’’ ಎಂದು ಅಧಿಕಾರಿಗಳು ತಿಳಿಸಿದರು.

21 ದಿನ ಬೆಳಕಿನ ವೈಭವ: ‘‘ನಗರದಾದ್ಯಂತ 21 ದಿನಗಳ ಕಾಲ ವಿಶೇಷ ದೀಪಾಲಂಕಾರ ಇರಲಿದೆ. ಇದರ ಜತೆಗೆ ಆಕಾಶದಲ್ಲಿರೋಮಾಂಚನ ಮೂಡಿಸುವ ಬೃಹತ್ 3,500 ಡ್ರೋನ್ ಗಳ ಶೋ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ,’’ ಎಂದು ದೀಪಾಲಂಕಾರ ಸಮಿತಿಯವರು ಮಾಹಿತಿ ನೀಡಿದರು.

ಅಧಿಕಾರಿಗಳಿಂದ ಸಿದ್ಧತೆ ಮಾಹಿತಿ: ಅ.13ರಿಂದ ಯುವ ದಸರಾ ಸಿದ್ಧತೆ, ಅಂಬಾರಿ ಆನೆಗಳಿಗೆ ತರಬೇತಿ, ಕ್ರೀಡಾ ದಸರಾ, ಆಹಾರ ಮೇಳದಲ್ಲಿಬುಡಕಟ್ಟು ಆಹಾರ ವೈವಿಧ್ಯ, ವಿಂಟೇಜ್ ವಾಹನಗಳ ಪ್ರದರ್ಶನ, ರೈತ ದಸರಾ, ಮಹಿಳಾ ದಸರಾ ಹಾಗೂ ಯೋಗ ದಸರಾ, ಸಂಚಾರ ಮತ್ತು ಭದ್ರತೆಗೆ ವಿಶೇಷ ವ್ಯವಸ್ಥೆ ಕೈಗೊಂಡಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸಿಗರ ಸುಲಿಗೆ ತಡೆಗಟ್ಟಿ: ದಸರಾ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಹೋಟೆಲ್ ಗಳು ಹೆಚ್ಚಿನ ದರ ವಿಧಿಸಿ ಸುಲಿಗೆ ಮಾಡದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ನಗರದ ಪ್ರಮುಖ ಜಂಕ್ಷನ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಬೃಹತ್ ಎಲ್ ಇಡಿ ಪರದೆ ಅಳವಡಿಸಿ ಯುವ ದಸರಾ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಎಲ್ಲರ ವಿಶ್ವಾಸ ಪಡೆಯಿರಿ: ರಾಜವಂಶಸ್ಥರಿಗೂ ಗೌರವಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಇಲ್ಲಿರಾಜಕೀಯಕ್ಕೆ ಅವಕಾಶ ನೀಡಬಾರದು. ಏಷ್ಯನ್ ಗೇಮ್ಸ್ ನಲ್ಲಿಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟಕ್ಕೆ ಆಹ್ವಾನಿಸುವಂತೆ ಸೂಚಿಸಿದರು.

ಸಭೆಯಲ್ಲಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಧ್ರುವನಾರಾಯಣ…, ಟಿ.ಎಸ್ .ಶ್ರೀವತ್ಸ, ರವಿಶಂಕರ್ , ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಶಿವಕುಮಾರ್ , ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ , ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ , ನಾನಾ ಪ್ರಾಧಿಕಾರಗಳ ಅಧ್ಯಕ್ಷರಾದ ಎಚ್ .ಡಿ.ಗಣೇಶ್ , ರಂಗಸ್ವಾಮಿ ಸೇರಿದಂತೆ ಅಧಿಕಾರಿಗಳು ಇದ್ದರು.