ವಿಕ ಸುದ್ದಿಲೋಕ ಗುಂಡ್ಲುಪೇಟೆ ಪಟ್ಟಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಬಸ್ ಸಂಚಾರ ವ್ಯವಸ್ಥೆಗೆ ಒತ್ತಾಯಿಸಿ ಮಾದರಿ ಗುಂಡ್ಲುಪೇಟೆ ಅಭಿಯಾನ ರುವಾರಿ ಡಾ. ಬಿ.ಎಸ್ .ಅಜಯ್ ಕುಮಾರ್ ನೇತೃತ್ವದಲ್ಲಿಪಟ್ಟಣದಲ್ಲಿಬೃಹತ್ ಜಾಥಾ ಮತ್ತು ಪ್ರತಿಭಟನೆ ನಡೆಯಿತು.
ಪಟ್ಟಣದ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿಜಾಥಾ ನಡೆಸಿ ತಾಲೂಕು ಕಚೇರಿಯ ಮುಂದೆ ಸಮಾವೇಶಗೊಂಡರು.
ಈ ಸಂದರ್ಭದಲ್ಲಿಮಾದರಿ ಗುಂಡ್ಲುಪೇಟೆ ಅಭಿಯಾನದ ರುವಾರಿ ಡಾ. ಬಿ.ಎಸ್ .ಅಜಯ್ ಕುಮಾರ್ ಮಾತನಾಡಿ,‘‘ತಾಲೂಕಿನ 45 ಗ್ರಾಮಗಳಿಗೆ ಇಂದಿಗೂ ಸೂಕ್ತ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಇಲ್ಲದೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ರೈತರು ನಿತ್ಯ ಸಾರಿಗೆ ಬಸ್ ಸಂಚಾರ ಇರುವಲ್ಲಿಗೆ 5 ರಿಂದ 6 ಕಿ.ಮೀ. ನಡೆದುಕೊಂಡು ತಲುಪಬೇಕಾದ ದುಸ್ಥಿತಿ ನಿರ್ಮಾಣವಾಗಿದೆ,’’ಎಂದು ಬೇಸರ ವ್ಯಕ್ತಪಡಿಸಿದರು.
ಹಲವು ಗ್ರಾಮಗಳಲ್ಲಿರಸ್ತೆ, ಕುಡಿಯುವ ನೀರು ಹಾಗೂ ವಾಸದ ಮನೆಗಳು ದುಸ್ಥಿತಿಯಲ್ಲಿವೆ. ದೊಡ್ಡ ಪಟ್ಟಣಗಳ ಸೌಕರ್ಯಗಳನ್ನು ನೋಡಿ ಬಂದವರಿಗೆ ಇಲ್ಲಿನ ಗ್ರಾಮೀಣ ಜನರ ಕಷ್ಟಗಳನ್ನು ಕಂಡರೆ ಬೇಸರವಾಗುತ್ತದೆ. ಆದ್ದರಿಂದ ತಾಲೂಕು ಆಡಳಿತ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕು,’’ ಎಂದು ಒತ್ತಾಯಿಸಿದರು.
‘‘ಗುಂಡ್ಲುಪೇಟೆಯನ್ನು ಮಾದರಿ ತಾಲೂಕಾಗಿ ಮಾಡಲು ನಾವು ಅಭಿಯಾನ ಹಮ್ಮಿಕೊಂಡಿದ್ದೇವೆ. ಯಾವುದೇ ಒತ್ತಡಗಳಿಗೆ ಮಣಿಯದೆ ಗ್ರಾಮೀಣ ಭಾಗದ ಜನರಿಗೆ ಕಡ್ಡಾಯವಾಗಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು,’’ ಎಂದರು.
ಈ ಸಂದರ್ಭದಲ್ಲಿಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ಜಯಪ್ರಕಾಶ್ ಹಾಗೂ ಸಾರಿಗೆ ಬಸ್ ಘಟಕ ವ್ಯವಸ್ಥಾಪಕ ಕುಮಾರನಾಯಕ್ ಅವರಿಗೆ ಮನವಿ ಸಲ್ಲಿಸಿ, 20 ದಿನದೊಳಗೆ ಬಸ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಸ್ಥೆ ವ್ಯವಸ್ಥಾಪಕ ಮಧು, ರೈತ ಸಂಘಟನೆ ಕಾರ್ಯಕರ್ತರು, ತಾಲೂಕಿನ ವಿವಿಧ ಗ್ರಾಮಗಳ ಸಾವಿರಕ್ಕೂ ಅಧಿಕ ಮಹಿಳೆಯರು, ಸಾರ್ವಜನಿಕರು ಹಾಜರಿದ್ದರು.
ಸಿಎಚ್ ಎನ್ 3ಜಿಪಿಟಿ1
ಗುಂಡ್ಲುಪೇಟೆಯಲ್ಲಿಗ್ರಾಮೀಣ ಭಾಗಕ್ಕೆ ಸಮರ್ಪಕ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.