ಸರಕಾರಿ ನೌಕರರ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

Contributed by: mohankumard.reddy555@gmail.com|Vijaya Karnataka•
invitation for nominations for the government employees service award 2026
ಗುಡಿಬಂಡೆ : ಕರ್ತವ್ಯನಿಷ್ಠೆ, ಪ್ರಾಮಾಣಿಕತೆ , ದಕ್ಷತೆ ಹಾಗೂ ಜನಸೇವೆಯ ಮೂಲಕ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರ ಸೇವಾ ಪ್ರಶಸ್ತಿ-2026ಕ್ಕೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಾದ್ಯಂತ ಒಟ್ಟು 271 ಸೇವಾ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪ್ರಶಸ್ತಿಗೆ ಆಯ್ಕೆಯಾಗುವ ನೌಕರರಿಗೆ 20 ಸಾವಿರ ನಗದು, ಪುರಸ್ಕಾರದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಸರಕಾರಿ ಸೇವೆಯಲ್ಲಿವಿಶೇಷ ಸಾಧನೆ ಮಾಡಿರುವ ನೌಕರರ ಕರ್ತವ್ಯನಿಷ್ಠೆ ಹಾಗೂ ಜನಪರ ಸೇವೆಯನ್ನು ಗುರುತಿಸಿ ಗೌರವಿಸುವುದರ ಜತೆಗೆ, ಸಹೋದ್ಯೋಗಿಗಳು, ಮೇಲಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮನ್ನಣೆ ದೊರೆಯಲು ಈ ಪ್ರಶಸ್ತಿ ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.
ಯಾರು ನಾಮನಿರ್ದೇಶನ ಮಾಡಬಹುದು?: ಅರ್ಹ ಸರಕಾರಿ ನೌಕರರನ್ನು ಅವರ ಇಲಾಖೆ ಮುಖ್ಯಸ್ಥರು ಅಥವಾ ಮೇಲಧಿಕಾರಿಗಳು, ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾಮತ್ತು ತಾಲೂಕು ಶಾಖೆಗಳು ನಾಮನಿರ್ದೇಶನ ಮಾಡಬಹುದು. ಕಾಯಂ ಗ್ರೂಪ್ -ಎ, ಗ್ರೂಪ್ -ಬಿ, ಗ್ರೂಪ್ -ಸಿ ಅಥವಾ ಗ್ರೂಪ್ -ಡಿ ಸರಕಾರಿ ನೌಕರರಾಗಿದ್ದು, ಕನಿಷ್ಠ 5 ವರ್ಷಗಳ ಸರಕಾರಿ ಸೇವೆ ಪೂರ್ಣಗೊಳಿಸಿರುವವರು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿರುವುದು ಕಡ್ಡಾಯವಾಗಿದ್ದು, ಸ್ವತಃ ತಮ್ಮ ಹೆಸರನ್ನು ತಾವೇ ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶವಿಲ್ಲಎಂದಿದ್ದಾರೆ.

ಆನ್ ಲೈನ್ ನಲ್ಲಿಅರ್ಜಿ : ನಾಮನಿರ್ದೇಶನವನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕಿದ್ದು, ಅರ್ಜಿಯನ್ನು ಯುನಿಕೋಡ್ ತಂತ್ರಾಂಶ ಬಳಸಿ ಕನ್ನಡ ಭಾಷೆಯಲ್ಲಿಭರ್ತಿ ಮಾಡಬೇಕು. ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವೇತನ ಪ್ರಮಾಣಪತ್ರ, ಸೇವಾ ಸಾಧನೆಗಳ ವಿವರ, ಸಾಧನೆಗಳಿಗೆ ಪೂರಕ ದಾಖಲೆಗಳು ಹಾಗೂ ಕೆಜಿಐಡಿ ಸಂಖ್ಯೆಯಂತಹ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕಿದೆ. ಮಾಹಿತಿಗೆ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.