ವಿಶ್ವ ವಿಖ್ಯಾತ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿಧಾರವಾಡ ಜಿಲ್ಲೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಅವಕಾಶ ದೊರೆಯದಿರುವುದು ಜಿಲ್ಲೆಯ ಜನರಲ್ಲಿಅಸಮಾಧಾನ ಮೂಡಿಸಿದೆ.
ಪ್ರತಿ ವರ್ಷ ವಿಜಯದಶಮಿ ದಿನದಂದು ರಾಜ್ಯದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿಸಾಗುತ್ತವೆ. ಇವು ಆಯಾ ಜಿಲ್ಲೆಗಳ ವೈಶಿಷ್ಟ ್ಯ, ಪರಂಪರೆ ಮತ್ತು ಸಾಧನೆಗಳನ್ನು ರಾಜ್ಯದ ಜನತೆಗೆ ಪರಿಚಯಿಸುವ ಪ್ರಮುಖ ವೇದಿಕೆಯಾಗಿವೆ. ಆದರೆ ಈ ಬಾರಿ ಧಾರವಾಡ ಜಿಲ್ಲೆಯ ಸ್ತಬ್ಧಚಿತ್ರವನ್ನು ಅಂತಿಮ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ.
15 ಜಿಲ್ಲೆಗಳಿಗೆ ಅವಕಾಶ
ಈ ಹಿಂದೆ ರಾಜ್ಯದ ಎಲ್ಲ30 ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ವರ್ಷ ಕೇವಲ 15 ಜಿಲ್ಲೆಗಳ ಸ್ತಬ್ಧಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ರಾಜ್ಯ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ .ಮಂಜುಶ್ರೀ ಅವರ ಅಧ್ಯಕ್ಷತೆಯಲ್ಲಿರಾಜ್ಯಮಟ್ಟದ ಆಯ್ಕೆ ಸಮಿತಿ ರಚಿಸಿತ್ತು. ವಿವಿಧ ಜಿಲ್ಲೆಗಳಿಂದ ಸಲ್ಲಿಕೆಯಾದ ಮಾದರಿಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಯಾದಗಿರಿ, ವಿಜಯನಗರ ಮತ್ತು ಬೀದರ್ ಜಿಲ್ಲೆಗಳ ಸ್ತಬ್ಧಚಿತ್ರಗಳು ಈ ಬಾರಿ ಮೆರವಣಿಗೆಯಲ್ಲಿಭಾಗವಹಿಸಲಿವೆ. ಆದರೆ ವಿದ್ಯಾಕಾಶಿ ಹಾಗೂ ಪೇಢಾ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡ ಜಿಲ್ಲೆಯ ಕಲೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಸಾಧಕರು ಮತ್ತು ಅಭಿವೃದ್ಧಿಯನ್ನು ಅನಾವರಣಗೊಳಿಸುವ ಅವಕಾಶ ತಪ್ಪಿದಂತಾಗಿದೆ.
ಕೋಟ್
ಜಿಲ್ಲಾಪಂಚಾಯಿತಿ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿಈ ಬಾರಿ ಜಿಲ್ಲೆ ಸೇರ್ಪಡೆಯಾಗಿಲ್ಲ. ಮುಂದಿನ ಬಾರಿ ಧಾರವಾಡ ಜಿಲ್ಲೆ ಪಾಲ್ಗೊಳ್ಳಲಿದೆ.
- ಸ್ನೇಹಲ್ ಆರ್ ., ಜಿಲ್ಲಾಧಿಕಾರಿ, ಧಾರವಾಡ ಜಿಲ್ಲೆ
ಕೋಟ್
ನನ್ನ ಸ್ವ ಕ್ಷೇತ್ರದ ಸ್ತಬ್ಥ ಚಿತ್ರವನ್ನು ಕೂಡಾ ಕೈಬಿಡಲಾಗಿದೆ. ಅನಿವಾರ್ಯ ಕಾರಣಗಳಿಂದ ಈ ಬಾರಿ 15 ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
-ಶಿವರಾಜ ತಂಗಡಗಿ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ