ವಿಕ ಸುದ್ದಿಲೋಕ ಬೆಂಗಳೂರು ಗ್ರಾಮಾಂತರ ವಿಜಯನಗರ ಅರಸರ ಕಾಲದ 6 ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಲಿಂಗದಹಳ್ಳಿಯಲ್ಲಿಪುರಾತತ್ವ ಇಲಾಖೆಯ ಉಪ ನಿರ್ದೇಶಕಿ ಕಾವ್ಯಶ್ರೀ ನೇತೃತ್ವದಲ್ಲಿಗ್ರಾಮಸ್ಥರ ಸಹಕಾರದೊಂದಿಗೆ ವೀರಗಲ್ಲುಗಳನ್ನು ಗ್ರಾಮದ ಆಂಜನೇಯ ದೇವಾಲಯ ಆವರಣ ಸೇರಿಸಲಾಗಿದೆ.
6 ವೀರಗಲ್ಲುಗಳ ಪೈಕಿ 3 ಯುದ್ಧ ವೀರಗಲ್ಲು, 3 ವೀರ ಮಾಸ್ತಿಕಲ್ಲುಗಳನ್ನು ರಕ್ಷಣೆ ಮಾಡಲಾಗಿದೆ. ಆಲಿಡಾಸನ ಬಂಗಿಯಲ್ಲಿರುವ ವೀರನು ಬಿಲ್ಲುಮತ್ತು ಕತ್ತಿಯನ್ನು ಹಿಡಿದಿದ್ದಾನೆ. ಅವನ ಬಲಕ್ಕೆ ಸರ್ವಾಲಂಕಾರ ಭೂಷಿತಲಾಗಿ ಆತನ ಸತಿ ನಿಂತಿರುವ ಕಲ್ಲುಗಳು ವಿಜಯನಗರ ಅರಸರ ಕಾಲದ್ದು ಎಂಬುದನ್ನು ಪತ್ತೆ ಮಾಡಲಾಗಿದೆ. ಅದೇ ರೀತಿ ಇನ್ನಿತರ ಕಲ್ಲುಗಳ ಕೆತ್ತನೆಯೂ ಅದ್ಭುತವಾಗಿದ್ದು, ವಿಜಯನಗರ ಕಾಲದ ಇತಿಹಾಸವನ್ನು ಅರಿಯಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣೆ ಅಗತ್ಯ:
ಸ್ಥಳೀಯವಾಗಿ ದೊರೆತ ಐತಿಹಾಸಿಕ ಕುರುಹುಗಳನ್ನು ಬಣ್ಣಿಸುವ ಕಲ್ಲುಗಳನ್ನು ಬೇರೆಡೆ ವರ್ಗಾಯಿಸುವುದರಿಂದ ಆ ಪ್ರದೇಶದ ಇತಿಹಾಸಕ್ಕೆ ಧಕ್ಕೆಯಾಗುತ್ತದೆ. ಆ ಸ್ಥಳದ ಇತಿಹಾಸ ಅರಿಯಲು ಇಂತಹ ಅವಶೇಷಗಳು ಸಹಕಾರಿಯಾಗಲಿವೆ. ಈ ನಿಟ್ಟಿನಲ್ಲಿಆಂಜನೇಯ ದೇವಾಲಯದಲ್ಲಿಅವುಗಳನ್ನು ಸಂರಕ್ಷಣೆ ಮಾಡಲಾಗಿದೆ. ಪಿಎಚ್ ಡಿ ವಿದ್ಯಾರ್ಥಿಗಳಿಗೆ, ಇತಿಹಾಸ ಸಂಶೋಧಕರಿಗೆ ಸಹಕಾರಿಯಾಗಲಿದೆ ಎಂಬುದು ಇಲಾಖೆ ಅಭಿಪ್ರಾಯವಾಗಿದೆ.
ರಸ್ತೆ ವಿಸ್ತರಣೆ ವೇಳೆ ಪತ್ತೆ
ಲಿಂಗದಹಳ್ಳಿಯಲ್ಲಿನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ವೀರಗಲ್ಲುಗಳು ಪತ್ತೆಯಾಗಿವೆ. ಆದರೆ ಕೂಲಿಕಾರ್ಮಿಕರು ಅವುಗಳ ಬಗ್ಗೆ ಲಕ್ಷ್ಯವಹಿಸದೆ ಅವುಗಳನ್ನು ಮತ್ತೆ ಭೂಮಿಯಲ್ಲಿಹುದುಗಿಸುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿ, ಕಾಮಗಾರಿ ಸ್ಥಗಿತಗೊಳಿಸಿ ಅದಾಗಲೇ ಮಣ್ಣಿನಡಿ ಹುದುಗಿದ್ದ ಕಲ್ಲುಗಳನ್ನು ಮತ್ತೆ ಮೇಲೆತ್ತಿಸುವಲ್ಲಿಸಫಲವಾಗಿದ್ದಾರೆ.
ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ನಾನಾ ಕಡೆಗಳಲ್ಲಿಐತಿಹಾಸಿಕ ಕುರುಹುಗಳು, ವೀರಗಲ್ಲುಗಳು ಪತ್ತೆಯಾಗಿವೆ. ಈ ಶಿಲೆಗಳು ಇತಿಹಾಸದ ಅನೇಕ ನೆನಪುಗಳನ್ನು ಈ ತಲೆಮಾರಿಗೆ ತಿಳಿಸುವುದರಿಂದ, ಅದರ ರಕ್ಷಣೆ ಮಾಡಬೇಕಿದೆ.
ಕೋಟ್
ದೊಡ್ಡಬಳ್ಳಾಪುರ ತಾಲೂಕು ಲಿಂಗದಹಳ್ಳಿಯಲ್ಲಿರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಐತಿಹಾಸಿಕ ಕಲ್ಲುಗಳು ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅದಾಗಲೇ ಹಲವು ಕಲ್ಲುಗಳನ್ನು ಮಣ್ಣಿನಡಿ ಮುಚ್ಚಲಾಗಿತ್ತು. ಕಾಮಗಾರಿ ನಿಲ್ಲಿಸಿ, ಹುದುಗಿದ್ದ ಕಲ್ಲುಗಳನ್ನು ಮೇಲೆತ್ತಿಸಿ ಅವುಗಳನ್ನು ಆಂಜನೇಯಸ್ವಾಮಿ ದೇವಾಲಯದಲ್ಲಿಸಂರಕ್ಷಣೆ ಮಾಡಲಾಗಿದೆ. ಈ ಭಾಗದಲ್ಲಿಮತ್ತಷ್ಟು ಇಂತಹ ಅವಶೇಷಗಳು ಸಿಗಲಿವೆ ಎಂದು ಅಂದಾಜಿಸಲಾಗಿದ್ದು, ಅವುಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು.
- ಕಾವ್ಯಶ್ರೀ | ಉಪ ನಿರ್ದೇಶಕಿ, ಪುರಾತತ್ವ ಇಲಾಖೆ, ಬೆಂಗಳೂರು ಗ್ರಾಮಾಂತರ
ಫೋಟೋ:0910ವಿಕೆ4: ದೊಡ್ಡಬಳ್ಳಾಪುರದ ಲಿಂಗದಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ದೊರೆತ ವೀರಗಲ್ಲುಗಳನ್ನು ಸಂರಕ್ಷಿಸಲಾಯಿತು.
0910ವಿಕೆ5: ರಸ್ತೆ ಕಾಮಗಾರಿ ವೇಳೆ ರಸ್ತೆ ಬದಿಗೆ ಬಿದ್ದಿರುವ ವೀರಗಲ್ಲುಗಳು.