ಬರಗಾಲದ ಬೆಳೆ ಸಮೀಕ್ಷೆ ಸಮರ್ಪಕವಾಗಿರಲಿವಿಕ ಸುದ್ದಿಲೋಕ ರಾಯಚೂರು
‘‘ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ದಾಖಲಿಸಿ, ರೈತರಿಗೆ ಬರ ಪರಿಹಾರ ಒದಗಿಸಬೇಕು,’’ ಎಂದು ಜಿ.ಪಂ. ಸಿಇಒ ಈಶ್ವರ್ ಕುಮಾರ್ ಕಾಂದೂ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿಏರ್ಪಡಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
‘‘ತೀವ್ರ ಬರ ಹಿನ್ನೆಲೆಯಲ್ಲಿಬೆಳೆಗಳು ಒಣಗಿದ್ದು ರೈತರು ಕಂಗಾಲಾಗಿದ್ದಾರೆ. ಸರಕಾರ ನಿಗದಿಪಡಿಸಿದ ಕಾಲಮಿತಿಯೊಳಗೆ ಬೆಳೆ ಸಮೀಕ್ಷೆ ದಾಖಲಿಸಬೇಕು. ಇಲ್ಲದಿದ್ದರೆ, ರೈತರು ಅಳಿದುಳಿದ ಬೆಳೆ ರಾಶಿ ಮಾಡುವುದರಿಂದ ಸಮೀಕ್ಷೆಗೆ ತೊಂದರೆಯಾಗುತ್ತದೆ. ಅಲ್ಲದೆ, ತಾಂತ್ರಿಕ ಕಾರಣ ನೀಡಿ ಬೆಳೆ ವಿಮೆ ಏಜೆನ್ಸಿಯವರು ಪರಿಹಾರದ ಮೊತ್ತ ಕಡಿತಗೊಳಿಸುವ ಸಾಧ್ಯತೆ ಇದೆ,’’ ಎಂದರು.
ಸಹಕರಿಸಿ:
‘‘ಪಿಡಿಒಗಳು ಕಂದಾಯ ಇಲಾಖೆ ಅಧಿಕಾರಿಗಳು, ಬೆಳೆ ವಿಮೆ ಏಜೆನ್ಸಿಯ ಸಿಬ್ಬಂದಿಯೊಂದಿಗೆ 4-5 ಜಮೀನಿಗೆ ತೆರಳಿ ಪರಿಶೀಲಿಸಬೇಕು. ಯಾವುದೇ ಬೆಳೆ ಬಿತ್ತದಿದ್ದರೆ, ಬಿತ್ತನೆ ಇಲ್ಲದ ಪ್ರದೇಶ ಎಂದು ಘೋಷಿಸಿ, ರೈತರಿಗೆ ಪ್ರಮಾಣ ಪತ್ರ ವಿತರಿಸಬೇಕು. ಬರಗಾಲ ಪರಿಸ್ಥಿತಿಯಿಂದ ಬೆಳೆ ಇಲ್ಲದೇ ನಷ್ಟ ಅನುಭವಿಸುವ ರೈತರಿಗೆ ಆದಷ್ಟು ನೆರವು ಒದಗಿಸಲು ಸಹಕರಿಸಬೇಕು,’’ ಎಂದರು.
ಕ್ರಿಯಾಯೋಜನೆ ರೂಪಿಸಿ:
‘‘ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುತ್ತಿದ್ದು, ಕೊನೆ ಭಾಗಕ್ಕೆ ನೀರು ತಲುಪಿಸುವ ನಿಟ್ಟಿನಲ್ಲಿಪಿಡಿಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪಾಳೆ ಪ್ರಕಾರ ನಿಯೋಜಿಸಲಾಗುವುದು. ಬರಗಾಲ ಪರಿಸ್ಥಿತಿಯಲ್ಲಿಶುದ್ಧ ಕುಡಿಯುವ ನೀರು ಪೂರೈಸಬೇಕು. ಕುಡಿಯುವ ನೀರು ಪೂರೈಕೆಗೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 1 ಕೋಟಿ ರೂ. ಬಿಡುಗಡೆಯಾಗಲಿದ್ದು, ಬೋರ್ ವೆಲ್ ಗಳ ರಿಪೇರಿ, ಬೋರ್ ವೆಲ್ ಬಾಡಿಗೆ ಪಡೆಯಲು ಬಳಸಲು ಕ್ರಿಯಾ ಯೋಜನೆ ರೂಪಿಸಬೇಕು. ಜಿಲ್ಲಾದ್ಯಂತ 15 ದಿನಗಳ ಒಳಗಾಗಿ ಪ್ರತಿ ಮನೆ ಮನೆಗೆ ತೆರಳಿ, ಶೌಚಾಲಯ ಸಮೀಕ್ಷೆ ಕೈಗೊಳ್ಳಬೇಕು,’’ ಎಂದರು.
ಅನುಮೋದನೆ:
‘‘ಪೌಷ್ಟಿಕ ರಾಯಚೂರು ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಯೋಜನೆಗೆ ಕೆಕೆಆರ್ ಡಿಬಿಯಿಂದ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿದೆ. ಮಹತ್ವಾಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಮಸ್ಕಿ ತಾಲೂಕಿನಲ್ಲಿಶಕ್ತಿ ಕೇಂದ್ರ ಆರಂಭಿಸಲು ನೀತಿ ಆಯೋಗದಿಂದ ಅನುದಾನ ಬಿಡುಗಡೆಯಾಗಿದೆ. ತಕ್ಷಣ ಅನುದಾನ ಬಳಕೆಗೆ ಕ್ರಮಕೈಗೊಳ್ಳಲಾಗುವುದು,’’ ಎಂದರು.
ಕಿಟ್ ವಿತರಣೆ:
ಬೆಂಕಿ ಅನಾಹುತ, ಪ್ರವಾಹ ಸೇರಿ ಇನ್ನಿತರ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜನ ಸಾಮಾನ್ಯರ ಪ್ರಾಣ ರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಸಾಂಕೇತಿಕವಾಗಿ ತಾಪಂ ಇಒ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕಿಟ್ ವಿತರಿಸಲಾಯಿತು.
ಪ್ರಶಸ್ತಿ ಪ್ರದಾನ:
ದೇವದುರ್ಗ ತಾಲೂಕಿನ ಗಬ್ಬೂರು ಗ್ರಾ.ಪಂ. ಪಿಡಿಒ ತಿರುಮಲರೆಡ್ಡಿ ಅವರಿಗೆ ಆಗಸ್ಟ್ ನ ‘ಉತ್ತಮ ಗ್ರಾಪಂ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ಮಲ ನಿಲಯ ಅಭಿಯಾನ ಚಾಲನಾ ಕಾರ್ಯಕ್ರಮ ಮತ್ತು ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಇತರರಿದ್ದರು.
---
ಆರ್ ಸಿಎಚ್ 18ಎಂಎಸ್ 06
ದೇವದುರ್ಗ ತಾಲೂಕಿನ ಗಬ್ಬೂರು ಪಿಡಿಒ ತಿರುಮಲರೆಡ್ಡಿ ಅವರಿಗೆ ಜಿ.ಪಂ.ನಲ್ಲಿನಡೆದ ಸಭೆಯಲ್ಲಿ‘ಉತ್ತಮ ಗ್ರಾಪಂ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.