Historical Achievement Of Pti In Indian Journalism September 21
ಹಿಸ್ಟರಿ ಮೆಲುಕು ಸೆಪ್ಟೆಂಬರ್ 21
Contributed by: DHEERAJ K|Vijaya Karnataka•
ಪಿಟಿಐ ಒಪ್ಪಂದ
ಸೆಪ್ಟೆಂಬರ್ 21, 1948ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಸ್ಥಾಪನೆಯು ಅತ್ಯಂತ ಮಹತ್ವದ ಘಟ್ಟವಾಗಿದೆ. ದೇಶವು ಸ್ವಾತಂತ್ರ್ಯ ಗಳಿಸಿದ ಹೊಸದರಲ್ಲಿ, ವಿದೇಶಿ ವಾರ್ತಾ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾದ ವರದಿಗಾರಿಕೆಯನ್ನು ದೇಶಕ್ಕೆ ಒದಗಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ರೂಪಿಸಲಾಯಿತು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿಸುದ್ದಿ ಸರಬರಾಜಿನ ಬಹುಪಾಲು ಅಧಿಕಾರವು ಬ್ರಿಟಿಷ್ ಒಡೆತನದ ರಾಯಿಟರ್ಸ್ ಮತ್ತು ಅದರ ಅಧೀನದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯಾ (ಎಪಿಐ) ಬಳಿಯಿತ್ತು. ದೇಶಕ್ಕೆ 1947ರಲ್ಲಿಸ್ವಾತಂತ್ರ್ಯ ಸಿಕ್ಕ ನಂತರ, ಭಾರತೀಯ ದಿನಪತ್ರಿಕೆಗಳ ಮಾಲೀಕರು ಮತ್ತು ಸಂಪಾದಕರು ದೇಶದ ಒಳಗಿನ ಮತ್ತು ಹೊರಗಿನ ಸುದ್ದಿಗಳನ್ನು ನಿಯಂತ್ರಿಸಲು ಮತ್ತು ವಿತರಿಸಲು ಸ್ವತಂತ್ರ ಭಾರತೀಯ ಸುದ್ದಿ ಸಂಸ್ಥೆಯೊಂದರ ಅಗತ್ಯವನ್ನು ಮನಗಂಡರು. ಇದರ ಪರಿಣಾಮವಾಗಿ, ಇಂಡಿಯನ್ ಆ್ಯಂಡ್ ಈಸ್ಟರ್ನ್ ನ್ಯೂಸ್ ಪೇಪರ್ ಸೊಸೈಟಿ(ಐಇಎನ್ ಎಸ್ )ಯ ಪ್ರಮುಖ ಪತ್ರಿಕಾ ಧುರೀಣರು ಒಗ್ಗೂಡಿ 1947ರ ಆಗಸ್ಟ್ 27ರಂದು ಪ್ರೆಸ್ ಟ್ರಸಟ್ ಆಫ್ ಇಂಡಿಯಾವನ್ನು ನೋಂದಾಯಿಸಿದರು. ‘ದಿ ಹಿಂದೂ’ ಪತ್ರಿಕೆಯ ಕಸ್ತೂರಿ ಶ್ರೀನಿವಾಸನ್ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ನೇಮಕಗೊಂಡರು.
ಪಿಟಿಐ ತನ್ನ ಕಾರ್ಯಾಚರಣೆಯನ್ನು ಪೂರ್ಣಪ್ರಮಾಣದಲ್ಲಿಪ್ರಾರಂಭಿಸಲು ರಾಯಿಟರ್ಸ್ ಜತೆಗಿನ ಒಪ್ಪಂದ ಅತ್ಯಂತ ಪ್ರಮುಖವಾಗಿತ್ತು. ಹಾಗಾಗಿ 1948ರ ಸೆಪ್ಟೆಂಬರ್ 21ರಂದು ಪಿಟಿಐ ಮತ್ತು ರಾಯಿಟರ್ಸ್ ಸಂಸ್ಥೆಗಳ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ, ಭಾರತದಲ್ಲಿಕಾರ್ಯಾಚರಣೆ ನಡೆಸುತ್ತಿದ್ದ ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯಾದ ಸಂಪೂರ್ಣ ಆಸ್ತಿ ಮತ್ತು ನೆಟ್ ವರ್ಕ್ ಅನ್ನು ಪಿಟಿಐ ತನ್ನ ವಶಕ್ಕೆ ತೆಗೆದುಕೊಂಡಿತು. ಇದರ ಜೊತೆಗೆ ಅಂತಾರಾಷ್ಟ್ರೀಯ ಸುದ್ದಿ ಸಂಗ್ರಹಣೆಯಲ್ಲಿರಾಯಿಟರ್ಸ್ ಸಂಸ್ಥೆಯೊಂದಿಗೆ ಸಮಾನ ಪಾಲುದಾರ ಸಂಸ್ಥೆಯಾಗಿ ಪಿಟಿಐ ಗುರುತಿಸಿಕೊಂಡಿತು. 1949ರ ಫೆಬ್ರವರಿ 1ರಂದು ಪಿಟಿಐ ತನ್ನ ವಾರ್ತಾ ಸೇವೆಯನ್ನು ಅಧಿಕೃತವಾಗಿ ಸಾರ್ವಜನಿಕವಾಗಿ ಪ್ರಾರಂಭಿಸಿತು.
ಈ ಸುದ್ದಿ ಸಂಸ್ಥೆಯು ಯಾವುದೇ ಲಾಭೋದ್ದೇಶವಿಲ್ಲದ, ಭಾರತೀಯ ದಿನಪತ್ರಿಕೆಗಳ ಲಾಭರಹಿತ ಸಹಕಾರ ಸಂಘವಾಗಿ ರೂಪುಗೊಂಡಿತು. 1948ರ ಒಪ್ಪಂದದ ನಂತರ PTಐ ಹಂತ ಹಂತವಾಗಿ ಬೆಳೆದು ದೇಶದ ಅತಿ ದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಸುದ್ದಿ ಸಂಸ್ಥೆಯಾಗಿ ಮಾರ್ಪಟ್ಟಿತು. ಪ್ರಸ್ತುತ ಪಿಟಿಐ ಹೊಸದಿಲ್ಲಿಯಲ್ಲಿಪ್ರಧಾನ ಕಚೇರಿಯನ್ನು ಹೊಂದಿದೆ.