ಪು.9 ಯೋಗ (ಲೀಡ್ )

Contributed byShridevi Ambekallu|Vijaya Karnataka
yoga asanas beneficial for digestion enhancing stomach health
ಹೊಟ್ಟೆಯ ಆರೋಗ್ಯಕ್ಕೆ ಯೋಗದ ಆಸರೆ

----
ಇಂಟ್ರೋ:

ಆಹಾರ ಸೇವಿಸುವುದು ಮಾತ್ರ ಆರೋಗ್ಯದ ಗುಟ್ಟು ಅಲ್ಲ; ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ, ಅದರ ಪೋಷಕಾಂಶಗಳು ದೇಹಕ್ಕೆ ಹೀರಿಕೊಳ್ಳುವುದೂ ಅಷ್ಟೇ ಮುಖ್ಯ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಮುಂತಾದ ಸಣ್ಣಪುಟ್ಟ ಸಮಸ್ಯೆಗಳು ದಿನನಿತ್ಯದ ನೆಮ್ಮದಿಯನ್ನೇ ಕದಡಬಹುದು. ಇಂತಹ ಸಂದರ್ಭದಲ್ಲಿಸರಿಯಾದ ಆಹಾರ ಪದ್ಧತಿಯ ಜೊತೆಗೆ ನಿಯಮಿತ ಯೋಗಾಭ್ಯಾಸವೂ ಆರೋಗ್ಯಕರ ಜೀವನಶೈಲಿಯ ಭಾಗವಾಗಬಹುದು.

-----

* ಪ್ರವೀಣ್ ಎಸ್ ಮುಗನೂರು

----

ನಮ್ಮ ದೇಹದ ಆರೋಗ್ಯದಲ್ಲಿಜೀರ್ಣಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾಗಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಕ್ಕಾಗ ದೇಹವು ಚೈತನ್ಯದಿಂದಿರುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಅನಿಯಮಿತ ಜೀರ್ಣಕ್ರಿಯೆಯಂತಹ ಸಮಸ್ಯೆಗಳು ನಮ್ಮ ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ನಿಯಮಿತವಾದ ಯೋಗಾಭ್ಯಾಸವು ದೇಹದ ಚಲನೆ, ಉಸಿರಾಟ ಮತ್ತು ವಿಶ್ರಾಂತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಕೆಲವು ಯೋಗಾಸನಗಳು ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಭಾಗದ ಸ್ನಾಯುಗಳ ಚಲನೆಯನ್ನು ಉತ್ತೇಜಿಸುವ ಮೂಲಕ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.

ಜೀರ್ಣಕ್ರಿಯೆಗೆ ಆಸನಗಳ ಮಹತ್ವ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಅಭ್ಯಾಸ ಮಾಡುವ ಆಸನಗಳು ಮುಖ್ಯವಾಗಿ ಹೊಟ್ಟೆಯ ಭಾಗದ ಸ್ನಾಯುಗಳಿಗೆ ಸೌಮ್ಯವಾದ ಚಲನೆ ಮತ್ತು ಒತ್ತಡವನ್ನು ನೀಡುತ್ತವೆ. ಇದರಿಂದ ದೇಹದ ಚಲನೆ ಹೆಚ್ಚಾಗಿ, ಹೊಟ್ಟೆಯ ಭಾಗದಲ್ಲಿಆರಾಮದಾಯಕ ಅನುಭವ ಉಂಟಾಗಬಹುದು. ಯೋಗಾಸನಗಳ ಜೊತೆಗೆ ಸರಿಯಾದ ಆಹಾರ ಪದ್ಧತಿ, ಸಾಕಷ್ಟು ನೀರು, ನಿಯಮಿತ ದೈಹಿಕ ಚಟುವಟಿಕೆ ಮತ್ತು ಉತ್ತಮ ನಿದ್ರೆ ಕೂಡ ಆರೋಗ್ಯಕರ ಜೀರ್ಣಕ್ರಿಯೆಗೆ ಅಗತ್ಯ.

ಜೀರ್ಣಕ್ರಿಯೆಗೆ ಸಹಾಯಕವಾಗುವ ಪ್ರಮುಖ ಆಸನಗಳು

*ಪವನ ಮುಕ್ತಾಸನ

ಪವನಮುಕ್ತಾಸನವನ್ನು ‘ಗಾಳಿಯನ್ನು ನಿವಾರಿಸುವ ಆಸನ’ ಎಂದೂ ಕರೆಯಲಾಗುತ್ತದೆ. ಹೊಟ್ಟೆಯ ಭಾಗಕ್ಕೆ ಸೌಮ್ಯವಾದ ಒತ್ತಡ ನೀಡುವ ಆಸನವಾಗಿದ್ದು, ಜೀರ್ಣಕ್ರಿಯೆಗೆ ಸಹಾಯಕವಾದ ಆಸನಗಳಲ್ಲಿಒಂದಾಗಿದೆ.

ಮಾಡುವ ವಿಧಾನ: ಬೆನ್ನಿನ ಮೇಲೆ ಮಲಗಿ ಕಾಲುಗಳನ್ನು ನೇರವಾಗಿ ಇಡಿ. ಬಲಗಾಲನ್ನು ಮಡಚಿ ಮೊಣಕಾಲನ್ನು ಎದೆಗೆ ತನ್ನಿ. ಎರಡೂ ಕೈಗಳಿಂದ ಮೊಣಕಾಲನ್ನು ಹಿಡಿದುಕೊಳ್ಳಿ. ಸಾಧ್ಯವಾದರೆ ತಲೆಯನ್ನು ಸ್ವಲ್ಪ ಮೇಲಕ್ಕೆತ್ತಿ ಮೊಣಕಾಲಿನ ಕಡೆಗೆ ತಂದುಕೊಳ್ಳಿ. ಆರಾಮವಾಗಿ ಉಸಿರಾಡುತ್ತಾ ಕೆಲವು ಸೆಕೆಂಡುಗಳ ಕಾಲ ಇರಿ. ನಿಧಾನವಾಗಿ ಕಾಲನ್ನು ನೇರಗೊಳಿಸಿ. ಇದೇ ವಿಧಾನವನ್ನು ಎಡಗಾಲಿನಿಂದ ಮತ್ತು ನಂತರ ಎರಡೂ ಕಾಲುಗಳಿಂದ ಮಾಡಿ.

* ಅರ್ಧ ಮತ್ಸ್ಯೇಂದ್ರಾಸನ

ಮಾಡುವ ವಿಧಾನ: ನೆಲದ ಮೇಲೆ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ಒಂದು ಕಾಲನ್ನು ಮಡಚಿ ಇನ್ನೊಂದು ಕಾಲಿನ ಹೊರಭಾಗದಲ್ಲಿಇಡಿ. ದೇಹವನ್ನು ನಿಧಾನವಾಗಿ ಮಡಚಿದ ಕಾಲಿನ ಕಡೆಗೆ ತಿರುಗಿಸಿ. ಬೆನ್ನು ನೇರವಾಗಿರಲಿ. ಆರಾಮವಾಗಿ ಉಸಿರಾಡುತ್ತಾ ಕೆಲವು ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿಇರಿ. ನಿಧಾನವಾಗಿ ಮೂಲಸ್ಥಿತಿಗೆ ಬಂದು ಇನ್ನೊಂದು ಬದಿಯಲ್ಲಿಯೂ ಅಭ್ಯಾಸ ಮಾಡಿ.

* ವಜ್ರಾಸನ

ಮಾಡುವ ವಿಧಾನ: ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ಪಾದಗಳ ಮೇಲ್ಭಾಗ ನೆಲಕ್ಕೆ ತಾಗಿರಲಿ. ಸೊಂಟವನ್ನು ಹಿಮ್ಮಡಿಗಳ ಮೇಲೆ ಇರಿಸಿ. ಬೆನ್ನು ಮತ್ತು ತಲೆಯನ್ನು ನೇರವಾಗಿ ಇಡಿ. ಕೈಗಳನ್ನು ತೊಡೆಯ ಮೇಲಿಡಿ. ನಿಧಾನವಾಗಿ ಉಸಿರಾಡುತ್ತಾ ಆರಾಮವಾಗಿ ಕುಳಿತುಕೊಳ್ಳಿ.

*ಭುಜಂಗಾಸನ

ಮಾಡುವ ವಿಧಾನ: ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ನೇರವಾಗಿ ಇಡಿ. ಕೈಗಳನ್ನು ಭುಜಗಳ ಪಕ್ಕದಲ್ಲಿನೆಲದ ಮೇಲೆ ಇಡಿ. ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ತಲೆ ಮತ್ತು ಎದೆಯನ್ನು ನಿಧಾನವಾಗಿ ಮೇಲಕ್ಕೆತ್ತಿ. ಸೊಂಟ ಮತ್ತು ಕಾಲುಗಳು ನೆಲದಲ್ಲಿಯೇ ಇರಲಿ. ಆರಾಮದ ಮಿತಿಯಲ್ಲಿಕೆಲವು ಸೆಕೆಂಡುಗಳ ಕಾಲ ಇರಿ. ಉಸಿರನ್ನು ಹೊರಬಿಡುತ್ತಾ ನಿಧಾನವಾಗಿ ಕೆಳಗೆ ಬನ್ನಿ.

ಆಸನಗಳನ್ನು ಅಭ್ಯಾಸ ಮಾಡುವಾಗ ಗಮನಿಸಬೇಕಾದ ಅಂಶಗಳು

- ಆಸನಗಳನ್ನು ಖಾಲಿ ಹೊಟ್ಟೆಯಲ್ಲಿಅಥವಾ ಆಹಾರ ಸೇವಿಸಿದ ನಂತರ ಸೂಕ್ತ ಅಂತರವಿಟ್ಟು ಅಭ್ಯಾಸ ಮಾಡುವುದು ಉತ್ತಮ.

- ಯಾವುದೇ ಆಸನವನ್ನು ಬಲವಂತವಾಗಿ ಮಾಡಬಾರದು.

- ಉಸಿರಾಟವನ್ನು ಸಹಜವಾಗಿ ಮುಂದುವರಿಸಬೇಕು.

- ನೋವು ಅಥವಾ ಅಸ್ವಸ್ಥತೆ ಉಂಟಾದರೆ ಆಸನವನ್ನು ನಿಲ್ಲಿಸಬೇಕು.

- ಆರಂಭಿಕರು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿಅಭ್ಯಾಸ ಮಾಡುವುದು ಉತ್ತಮ.

- ನಿಯಮಿತ ಅಭ್ಯಾಸವೇ ಮುಖ್ಯ; ಒಂದೆರಡು ದಿನಗಳ ಅಭ್ಯಾಸದಿಂದ ಮಾತ್ರ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಬಾರದು.

ಜೀರ್ಣಕ್ರಿಯೆಯ ಸಮಸ್ಯೆ ನಿರಂತರವಾಗಿದ್ದರೆ ಅಥವಾ ತೀವ್ರವಾಗಿದ್ದರೆ ಕೇವಲ ಯೋಗಾಸನಗಳ ಮೇಲೆ ಅವಲಂಬಿಸದೆ, ವೈದ್ಯರ ಸಲಹೆ ಪಡೆಯುವುದೂ ಅಗತ್ಯ. ಯೋಗವು ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯೊಂದಿಗೆ ಸೇರಿಕೊಂಡಾಗ ಉತ್ತಮ ಆರೋಗ್ಯಕ್ಕೆ ಪರಿಣಾಮಕಾರಿ ಪೂರಕವಾಗುತ್ತದೆ.

-----

*ಬಾಕ್ಸ್ ಮಾಡಿ

ಜೀರ್ಣಕ್ರಿಯೆ ಚೆನ್ನಾಗಿರಲು 5 ಸೂತ್ರಗಳು

- ಸಮತೋಲಿತ ಆಹಾರ: ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಯುಕ್ತ ಆಹಾರಕ್ಕೆ ಆದ್ಯತೆ ನೀಡಿ.

- ಸಾಕಷ್ಟು ನೀರು: ದಿನವಿಡೀ ಅಗತ್ಯ ಪ್ರಮಾಣದ ನೀರು ಸೇವಿಸಿ.

- ಚಲನೆಯಿರಲಿ: ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳದೆ ನಿಯಮಿತವಾಗಿ ಚಲಿಸಿ.

- ಯೋಗಾಭ್ಯಾಸ: ದೇಹಕ್ಕೆ ಹೊಂದುವ ಆಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ.

- ಉತ್ತಮ ನಿದ್ರೆ: ಸಮರ್ಪಕ ನಿದ್ರೆ ದೇಹದ ಒಟ್ಟಾರೆ ಆರೋಗ್ಯಕ್ಕೆ ಮುಖ್ಯ.

---

ಲೇಖಕರು: ಯೋಗ ಮಾರ್ಗದರ್ಶಕರು ರಾಷ್ಟೊ್ರೕತ್ಥಾನ ವಿದ್ಯಾ ಕೇಂದ್ರ ಬನಶಂಕರಿ, ಬೆಂಗಳೂರು