ಇಂಟ್ರೋ: ನಿತ್ಯವೂ ಬದಲಾಗುವ ಜಗತ್ತು ಪರಮಸತ್ಯವೇ? ವೇದಾಂತದ ದೃಷ್ಟಿಯಲ್ಲಿಜಗತ್ತಿನ ಮಿಥ್ಯಾಸ್ವರೂಪ, ಮಾಯೆಯ ಬಂಧನ ಮತ್ತು ಆತ್ಮಚೈತನ್ಯದ ನಿತ್ಯಸತ್ಯವನ್ನು ಪರಿಚಯಿಸುವ ಚಿಂತನೆ. ‘ಬ್ರಹ್ಮ ಸತ್ಯಂ, ಜಗತ್ ಮಿಥ್ಯಾ’ ಎಂಬ ಗಹನ ತತ್ತ್ವದ ಸರಳ ವಿವರಣೆ ಇಲ್ಲಿದೆ.
----
ಯಕ್ಷಿಣಿ ಪ್ರದರ್ಶನವನ್ನು ನೋಡುವಾಗ ಜಾದೂಗಾರನ ಕೈಚಳಕವನ್ನು ನೋಡಿ ಮಂತ್ರಮುಗ್ಧರಾಗುತ್ತೇವೆ. ಇರುವುದನ್ನು ಇಲ್ಲವಾಗಿಸಿ, ಇಲ್ಲವಾಗಿರುವುದನ್ನು ಇರುವಂತೆ ಮಾಡುವ ಅವನ ಆಟ ನಮಗೆ ರೋಚಕವೆನಿಸುತ್ತದೆ. ಇಂತಹ ಯಕ್ಷಣಿಗಾರರ ಮೋಡಿಯಲ್ಲಿಬೀಳುವ ನಮಗೆ ನಾವಿರುವ ಜಗವೇ ಮಾಯಗಾರನ ಮಾಯೆ ಎಂಬ ಅರಿವು ಇರುವುದೇ ಇಲ್ಲ! ಶಾಸ್ತ್ರಗಳು ವ್ಯಾವಹಾರಿಕ ಜಗತ್ತು ಮಿಥ್ಯಾಸ್ವರೂಪವೆಂದು ಹೇಳುತ್ತವೆ. ಜಾಗೃತ ಎಂದರೆ ನಾವು ವ್ಯವಹರಿಸುವ ಪ್ರಪಂಚ, ಇದು ದೀರ್ಘವಾದ ಸ್ವಪ್ನದಂತೆ ಎಂಬುದು ವೇದಗಳ ಅಂಬೋಣ. ಹೊರಜಗತ್ತು ಅನುಭವಕ್ಕೆ ಬರುತ್ತದೆ ಎಂಬ ಕಾರಣದಿಂದ ಇದು ಸತ್ಯವಾದುದು ಎಂಬುದು ನಮ್ಮ ತಿಳಿವಳಿಕೆಯಾಗಿದೆ.
ಗೀತೆಯ 7 ನೆಯ ಅಧ್ಯಾಯದಲ್ಲಿಭಗವಂತನು ಹೇಳುತ್ತಾನೆ-
ತ್ರಿಭಿರ್ಗುಣಮಯ್ಕೆರ್ಭಾವೈರೇಭಿಃ ಸರ್ವವಿದ
ಜಗತ್ ಣಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ||13||
ಸತ್ವ,ರಜೋ ಮತ್ತ ತಮೋ ಎಂಬ ಮೂರು ಗುಣಗಳಿಂದ ಜೀವ ಸಮುದಾಯವು ಮೋಹಿತವಾಗಿದೆ. ಈ ಮೂರು ಗುಣಗಳಿಗೆ ಅತೀತನಾದ ನನ್ನನ್ನು ಅವರು ಅರಿಯರು. ಹೀಗೆ ಹೇಳುವ ಮೊದಲು ಭಗವಂತನು 12ನೇ ಶ್ಲೋಕದಲ್ಲಿಸತ್ವ, ರಜೋ ಮತ್ತು ತಮೋ ಗುಣಗಳಿಂದ ಆಗುವ ಭಾವ ಮತ್ತು ವಸ್ತುಗಳು ನನ್ನಿಂದಲೇ ಆಗುತ್ತವೆ ಎಂದು ಹೇಳುತ್ತಾನೆ. ತಾನು ಸರ್ವ ವ್ಯಾಪಕನಾದರೂ, ಈ ಮೂರು ಗುಣಗಳಲ್ಲಿನಾನಿಲ್ಲಎನ್ನುವ ಭಗವಂತನ ಮಾತಿನ ಅರ್ಥವೇನಿರಬಹುದು? ಅದಕ್ಕೆ ಶ್ರೀಶಂಕರರು ತಮ್ಮ ಭಾಷ್ಯದಲ್ಲಿ‘ತಥಾಪಿ ನ ತ್ವಹಂ ತೇಷು ತದಧೀನಃ ತದ್ವಶಃ ಯಥಾ ಸಂಸಾರಿಣ| ಸಂಸಾರಿಗಳು ಗುಣದಲ್ಲಿವಶವಾದವರಂತೆ ಭಗವಂತನು ತ್ರಿಗುಣಗಳಿಂದ ವಶವಾಗಿಲ್ಲಎಂದು ವಿವರಿಸುತ್ತಾರೆ. ಜಾದೂಗಾರನು ಅವನ ಮಾಯಾಜಾಲದಲ್ಲಿಅವನೇ ಬೀಳಲಾರನಲ್ಲವೇ? ಅದೇ ರೀತಿ ಇದು.
‘ಮೋಹಿತವಾಗಿದೆ’ ಎಂಬ ಭಗವಂತನ ನುಡಿಗಳು ಬಹು ಗಹನವಾಗಿವೆ. ಪ್ರಾಪಂಚಿಕ ಮೋಹಗಳಲ್ಲಿನಾವು ಮುಳುಗಿದ್ದೇವೆ ಎಂಬರ್ಥ ಬರುವ ಮಾತುಗಳಿವು.
ಮಾಯೆಯನ್ನು ದಾಟುವುದು ಹೇಗೆ?
ಭಗವಂತನು ತನ್ನ ಮಾಯೆಯನ್ನು ವರ್ಣಿಸುತ್ತ 14ನೇ ಶ್ಲೋಕದಲ್ಲಿಹೇಳುತ್ತಾನೆ-
ನನ್ನ ಈ ಮಾಯೆಯು ದೈವೀ ಮಾಯೆಯು. ಇದು ದಾಟಲು ಬಹು ಕಷ್ಟಸಾಧ್ಯವಾದದ್ದು. ಶ್ರೀಶಂಕರರು ತಮ್ಮ ಭಾಷ್ಯದಲ್ಲಿಬಹು ಸುಂದರವಾಗಿ ವಿವರಿಸುತ್ತಾರೆ. ಮಾಮೇವ ಎಂದರೆ, ತಮ್ಮ ಆತ್ಮನೇ ಆಗಿರುವ ಮಾಯಾವಿಯಾದ ನನ್ನನ್ನೇ ಎಂದು ಶ್ರೀಶಂಕರರು ಅರ್ಥೈಸಿದ್ದಾರೆ. ಮಾಂಡೂಕ್ಯ ಉಪನಿಷತ್ತಿನ ಮೇಲಿನ ಕಾರಿಕೆಯಲ್ಲಿಶ್ರೀ ಶಂಕರರು ‘ಮಾಯಸರೂಪ’ದ ಮೇಲೆ ಭಾಷ್ಯವನ್ನು ಬರೆಯುತ್ತ ‘ಸ್ವಪ್ನ ಮಾಯಾಸರೂಪ’ ಎಂಬ ಹೆಸರು ಕೊಟ್ಟಿದ್ದಾರೆ. ಅಂದರೆ ಕನಸಿಗೆ ಸಮಾನವಾದ ರೂಪವುಳ್ಳದ್ದು. ನಾವು ಎಚ್ಚರದ ಪ್ರಪಂಚ ಎಂದು ಹೆಸರಿಸುವ ಬಾಹ್ಯ ವ್ಯವಹಾರವು ಕನಸಿಗೆ ಸದೃಶವಾಗಿದೆ ಎಂದು ಶ್ರೀಶಂಕರರು ಬಹು ಅರ್ಥಪೂರ್ಣವಾದ ತಿಳಿವಳಿಕೆಯನ್ನು ಕೊಡುತ್ತಾರೆ. ನಮ್ಮ ಅನುಭವಗಳಲ್ಲಿಯೇ ಇದನ್ನು ಕಾಣಬಹುದು. ಈ ಕ್ಷಣ ಇರುವುದು ಇನ್ನೊಂದು ಕ್ಷಣ ಇರದು, ಇಂದು ಇರುವುದು ನಾಳೆ ಇರದು. ಪ್ರತಿ ಕ್ಷಣವೂ ಬದಲಾಗುತ್ತಿರುವ ಬದುಕು ಒಂದು ದೀರ್ಘವಾದ ಕನಸಿನಂತೆ. ಆದರೆ ಕನಸಿನಲ್ಲಿನಮಗೆ ಸುಪ್ತವಾದ ಇಂದ್ರಿಯಗಳಿಂದ ಅನುಭವಗಳಾದರೆ, ಜಾಗೃತನಲ್ಲಿಚೈತನ್ಯಯುತವಾದ ಇಂದ್ರಿಯಗಳಿಂದ ಅನುಭವಗಳು ಉಂಟಾಗುತ್ತವೆ. ಆದರೆ ಈ ಎರಡೂ ಅವಸ್ಥೆಗಳಲ್ಲಿಇಂದ್ರಿಯಗಳನ್ನು ಬೆಳಗುವವನು ಒಬ್ಬನೇ, ಅವನೇ ಆತ್ಮ, ಪರಮಾತ್ಮ.
ದೇಹಭಾವವನ್ನು ಕಳೆದು ಆತ್ಮ ಸ್ವರೂಪರೇ ನಾವಾಗಿದ್ದೇವೆ ಎಂಬ ಅರಿವು ಉಂಟಾದ ತಕ್ಷಣ, ತೋರುವ ಜಗತ್ತು ಮಿಥ್ಯ ಎಂಬುದು ಅರಿವಿನಲ್ಲಿಬರುತ್ತದೆ. ಮಿಥ್ಯವೆಂದರೆ ಜಗತ್ತು ಇಲ್ಲಎಂದರ್ಥವಲ್ಲ, ಅದು ನಿತ್ಯವಾದುದಲ್ಲ, ಶಾಶ್ವತವಾದುದಲ್ಲ. ಪಾರಮಾರ್ಥಿಕ ಸತ್ಯವೆಂದರೆ ಇರುವುದೊಂದೆ ಬ್ರಹ್ಮವಸ್ತು ಅದೇ ಜೀವ ಮತ್ತು ಜಗತ್ತಾಗಿ ತೋರುತ್ತಿದೆ. ರೂಪ, ನಾಮಗಳಾಗಿ ತೋರುವ ಸಗುಣ ಪರಮಾತ್ಮನೇ, ನಿರ್ಗುಣ ನಿರಾಕಾರನು. ನಮಗೆ ಮಿಥ್ಯಾ ಎಂದು ಅನಿಸದಿರಲು ಅಜ್ಞಾನವೇ ಕಾರಣವಾಗಿದೆ. ಸೃಷ್ಟಿಯ ಮಾಯೆಯೂ ಬಹು ಬಲವತ್ತರವಾಗಿದೆ. ಹಾಗಾಗಿ ಜನ್ಮಾಂತರಗಳ ವಾಸನೆಗಳನ್ನು ಪೋಷಿಸುತ್ತ ಹುಟ್ಟು ಮತ್ತು ಸಾವುಗಳ ಚಕ್ರದಲ್ಲಿಸಿಲುಕಿ ಮಿಥ್ಯಾ ಪ್ರಪಂಚದ ವ್ಯವಹಾರಗಳಲ್ಲಿನಮ್ಮನ್ನು ತೊಡಗಿಸಿಕೊಳ್ಳುತ್ತೇವೆ.
ಪರಮಸತ್ಯ
ಸತ್ಯವೆಂದರೆ ಅದು ಒಂದೇ ತೆರನಾಗಿರಬೇಕು, ಎಚ್ಚರ, ಕನಸು ಮತ್ತು ನಿದ್ದೆಗಳಲ್ಲಿಅಬಾಧಿತವಾಗಿರಬೇಕು. ದೇಹ ಮತ್ತು ಇಂದ್ರಿಯಗಳ ಅನುಭವಗಳು ಬದಲಾಗುತ್ತಿರುತ್ತವೆ. ಹಾಗಾಗಿ ಅವು ಸತ್ಯದ ಸ್ವರೂಪವನ್ನು ಹೊಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು. ಆದರೆ ಈ ಎಲ್ಲಅನುಭವಗಳಿಗೆ ಸಾಕ್ಷಿಯಾಗಿರುವ ಆತ್ಮ ಚೈತನ್ಯ ವಸ್ತು ಮಾತ್ರ ಅಭಾದಿತವಾಗಿರುವುದು. ಹಾಗಾಗಿ ಅದೊಂದೇ ಸತ್ಯವಾದುದು, ಆತ್ಮದ ತೋರಿಕೆಯೇ ಜಗತ್ತಾಗಿದೆ. ಶ್ರುತಿಪ್ರತಿಪಾದಿತವಾದ ಅದ್ವೈತವೇ ಪಾರಮಾರ್ಥಿಕ ಸತ್ಯವು. ಎಲ್ಲಿಯವರೆಗೆ ಅಜ್ಞಾನವು ಇರುವುದೋ ಅಲ್ಲಿಯ ತನಕ ಮಿಥ್ಯಾಸ್ವರೂಪವಾದ ವ್ಯಾವಹಾರಿಕ ಪ್ರಪಂಚವು ನಿಜ ಎಂಬಂತೆ ತೋರುವುದು. ನಿತ್ಯ, ಶುದ್ಧ, ಅಸಂಗ ಆತ್ಮವೇ ನಾವಾಗಿದ್ದೇವೆ ಎಂಬ ಜ್ಞಾನದಿಂದ “ಬ್ರಹ್ಮ ಸತ್ಯಂ ಜಗತ್ ಮಿಥ್ಯಾಱ ಎಂಬುದನ್ನು ಅರಿಯಲು ಸಾಧ್ಯ.