ಪ್ಯಾಕೇಜ್

Contributed by: Keerthi Kolgar|Vijaya Karnataka•
adventures of the new generation of farmers in the fields
ಇಂಟ್ರೊ: ‘‘ಕೃಷಿಯಲ್ಲಿಏನಿದೆ? ಓದಿದವರು ನಗರ ಸೇರಬೇಕು,’’ ಎಂಬ ಮಾತು ಹಳ್ಳಿಗಳಲ್ಲಿಇಂದಿಗೂ ಕೇಳಿಬರುತ್ತದೆ. ಓದದೆ ಹಳ್ಳಿಯಲ್ಲೇ ಉಳಿದು ಕೃಷಿಯ ಹೊಲಕ್ಕಿಳಿದರೆ, ಅದೇ ಕೆಲವರಿಗೆ ಅಪರಾಧದಂತೆಯೂ ತೋರುತ್ತದೆ. ಆದರೆ, ಸಮಾಜದ ಯಾವ ಮಾತುಗಳಿಗೂ ಕಿವಿಗೊಡದೆ ಹೊಲದಲ್ಲೇ ಹೀರೋ ಆದ ಹೊಸ ತಲೆಮಾರಿನ ರೈತರ ಸಾಹಸಗಾಥೆಯಿದು. ವಿದೇಶದ ವೇತನ, ನಗರದ ಸೌಕರ್ಯ- ಸೆಳೆತಗಳೆಲ್ಲವನ್ನೂ ಬಿಟ್ಟು ಮಣ್ಣಿನ ಮಡಿಲಿಗೆ ಮರಳಿದರು. ತಮ್ಮ ಓದು, ತಂತ್ರಜ್ಞಾನ, ಮಾರುಕಟ್ಟೆ ಜಾಣ್ಮೆಯನ್ನೇ ಬ್ರ್ಯಾಂಡ್ ಮಾಡಿಕೊಂಡರು. ಇವರಿಗೆಲ್ಲರೈತ ಬದುಕೇ ನೆಮ್ಮದಿ.

- - -
1. ಜರ್ಮನಿಯ ಸಂಬಳ ಈಗ ಸಾಲೋಟಗಿಯ ಹೊಲದಲ್ಲಿ!

ರೈತ ದಂಪತಿ: ಶಿವರಾಜ್ ಪಾರಗೊಂಡ, ಪುಷ್ಪಲತಾ, ವಿಜಯಪುರ

ಕೃಷಿ ಸಾಹಸ: ಬೆಳೆದ ಫಸಲನ್ನೇ ಬ್ರ್ಯಾಂಡ್ ಮಾಡಿದರು

ಜರ್ಮನಿಯಲ್ಲಿಕೈ ತುಂಬ ಸಂಬಳದ ನೌಕರಿ. ಆದರೆ ಮನಸ್ಸು ಮಾತ್ರ ಸಾವಯವ, ನೈಸರ್ಗಿಕ ಕೃಷಿಯತ್ತ ಸೆಳೆಯುತ್ತಿತ್ತು. ಆ ಸೆಳೆತಕ್ಕೆ ಮಣಿದ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಎಂಜಿನಿಯರ್ ದಂಪತಿ ಶಿವರಾಜ್ ಪಾರಗೊಂಡ ಹಾಗೂ ಪುಷ್ಪಲತಾ ತವರಿಗೆ ಮರಳಿದರು. ಹಿರಿಯರ ವಿರೋಧವನ್ನೂ ಲೆಕ್ಕಿಸದೆ 8 ಎಕರೆಯಲ್ಲಿಕೃಷಿ ಆರಂಭಿಸಿದರು. ಕಳೆದ ಏಳೆಂಟು ವರ್ಷಗಳ ಸಾವಯವ ಕೃಷಿ ಇಂದು ಬೆರಗು ಮೂಡಿಸಿದೆ.

ನಿಂಬೆ, ಪೇರಳೆ ಸೇರಿದಂತೆ ಬಹುವಾರ್ಷಿಕ ಬೆಳೆಗಳು, ಕಬ್ಬು, ಸೀತಾಫಲ, ಕರಿಬೇವು, ಮರಗೆಣಸು, ತೊಗರಿ, ಸಿರಿಧಾನ್ಯ, ಅಲ್ಪಾವಧಿ ಬೆಳೆ, ಸೊಪ್ಪು, ತರಕಾರಿ ಅವರ ಹೊಲದಲ್ಲಿನಳನಳಿಸುತ್ತಿವೆ. ನೀರಿಗಾಗಿ ಹಳೆಯ ಬಾವಿಯನ್ನು ಪುನಶ್ಚೇತನಗೊಳಿಸಿದ್ದಾರೆ. ಹೊಲಕ್ಕೆ ಹೆಬ್ಬೇವು, ಮಹಾಗನಿಯ ನೈಸರ್ಗಿಕ ಬೇಲಿ ಬೆಳೆಸಿದ್ದಾರೆ. ಗ್ರಾಹಕರಿಗೆ ನೇರ ಪೂರೈಕೆಯ ಮಾರುಕಟ್ಟೆ ಜಾಲ ರೂಪಿಸಿಕೊಂಡಿದ್ದಾರೆ. ಕಡಿಮೆ ಖರ್ಚು, ಹೆಚ್ಚು ಆದಾಯ ಎಂಬುದೇ ಅವರ ಯಶಸ್ಸಿನ ಗುಟ್ಟು.

ಜಿಐ ಟ್ಯಾಗ್ ಪಡೆದ ಕಾಗ್ಜಿ ನಿಂಬೆಹಣ್ಣನ್ನು ಕತ್ತರಿಸಿ, ಉಪ್ಪು ಸೇರಿಸಿ, ಟೆಟ್ರಾಪ್ಯಾಕ್ ನಲ್ಲಿಮುಂಬಯಿ ಮತ್ತಿತರ ನಗರಗಳಿಗೆ ರವಾನಿಸುತ್ತಿದ್ದಾರೆ. ಗುಣಮಟ್ಟದ ನಿಂಬೆಯನ್ನು ಕೊಲ್ಲಿರಾಷ್ಟ್ರಗಳಿಗೆ ರಫ್ತು ಮಾಡಲೂ ಮುಂದಾಗಿದ್ದಾರೆ.

- - -

2. ಒಂದೂವರೆ ಎಕರೆ, 27 ಟನ್ ! ಕಿತ್ತೂರು ರೈತನ ತಾಳೆ ಕಹಳೆ

ರೈತ: ಸುರೇಶ ಬಸಪ್ಪ ಹುಬ್ಬಳ್ಳಿ, ಹುಣಶಿಕಟ್ಟಿ, ಕಿತ್ತೂರು, ಬೆಳಗಾವಿ

ಕೃಷಿ ಸಾಹಸ: ಮಲೇಷ್ಯಾದಿಂದ ಬಂದ ಸಲಹೆ, ಹೊಲದಲ್ಲಿತಾಳೆ ಕ್ರಾಂತಿ

ಕಬ್ಬು, ಗೋವಿನಜೋಳ ಬೆಳೆದರೂ ನಿರೀಕ್ಷಿತ ಲಾಭ ಕೈಗೆಟುಕುತ್ತಿರಲಿಲ್ಲ. ಆಗ ಮಲೇಷ್ಯಾಕ್ಕೆ ಹೋಗಿ ಬಂದಿದ್ದ ಸಂಬಂಧಿಕರೊಬ್ಬರು ನೀಡಿದ ಒಂದು ಸಲಹೆ ಸುರೇಶ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. 2006-07ರಲ್ಲಿತಮ್ಮ ಜಮೀನಿನಲ್ಲಿ‘ತೆನೆರಾ’ ಜಾತಿಯ ತಾಳೆ ಸಸಿ ನಾಟಿ ಮಾಡಿದರು.

ನಾಲ್ಕನೇ ವರ್ಷದಿಂದ ಇಳುವರಿ ಶುರುವಾಯಿತು. ಮೊದಲ ವರ್ಷ 6 ಟನ್ . ಅಲ್ಲಿಂದ ವರ್ಷದಿಂದ ವರ್ಷಕ್ಕೆ ಏರುತ್ತ ಸಾಗಿದ ಇಳುವರಿ, 2025-26ನೇ ಸಾಲಿನಲ್ಲಿಕೇವಲ 1 ಎಕರೆ 20 ಗುಂಟೆಯಲ್ಲಿಬರೋಬ್ಬರಿ 27 ಟನ್ 177 ಕೆಜಿ ತಲುಪಿದೆ!

ಕೇವಲ 25 ಸಾವಿರ ರೂ. ಖರ್ಚು ಮಾಡಿರುವ ಸುರೇಶ ಅವರು ಎಣ್ಣೆ ಉತ್ಪಾದನಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಂಪನಿಯವರೇ ಹೊಲಕ್ಕೆ ಬಂದು ಉತ್ಪನ್ನ ಖರೀದಿಸುತ್ತಾರೆ. ಪ್ರತಿ ಟನ್ ಗೆ ಸುಮಾರು 16,500 ರೂ. ದರ ಸಿಕ್ಕಿದ್ದು, ಒಟ್ಟು 4.5 ಲಕ್ಷ ರೂ. ಆದಾಯ ರೈತನ ಕೈಸೇರಿದೆ.

ಧಿ- ನೀರಾವರಿ ನೀತಿ: ಸಾವಯವದ ಜತೆಗೆ ಅಗತ್ಯ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಬೋರ್ ವೆಲ್ ಮೂಲಕ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಬೇಸಿಗೆಯಲ್ಲಿನಿತ್ಯ ನೀರು ಹಾಯಿಸಬೇಕು, ಮಳೆಗಾಲದಲ್ಲಿಅಗತ್ಯವಿಲ್ಲ. ಒಮ್ಮೆ ನಾಟಿ ಮಾಡಿದರೆ 35 ವರ್ಷಗಳವರೆಗೆ ನಿರಂತರ ಇಳುವರಿ.

- - -

3. ಕೊರೊನಾ ಹಳ್ಳಿಗೆ ಕಳಿಸಿದ್ದಕ್ಕೆ ಕೋಟ್ಯಧಿಪತಿಯಾದ ಅಣ್ತಮ್ಮ

ರೈತರು: ಟಿ.ಎಲ್ . ಅಶೋಕ್ ಕುಮಾರ್ , ಅಜಿತ್ ಕುಮಾರ್ , ಅಬ್ಬೇನಹಳ್ಳಿ, ಚಿತ್ರದುರ್ಗ

ಕೃಷಿ ಸಾಹಸ: 1.5 ಕೋಟಿ ವ್ಯವಹಾರ, 25 ಜನರಿಗೆ ಉದ್ಯೋಗ

ಕೊರೊನಾ ಆಘಾತದಿಂದ ಬೆಂಗಳೂರಿನಿಂದ ಸ್ವಲ್ಪ ಕಾಲಕ್ಕೆಂದು ಊರಿಗೆ ಬಂದವರು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ 10 ಕಿ.ಮೀ. ದೂರದ ಅಬ್ಬೇನಹಳ್ಳಿಯ ರೈತ ಟಿ.ಎಲ್ . ಲಿಂಗಪ್ಪ ಅವರ ಹಿರಿಯ ಮಗ ಅಶೋಕ್ ಕುಮಾರ್ ಎಲೆಕ್ಟ್ರಿಕಲ್ ಎಂಜಿನಿಯರ್ , ಕಿರಿಯ ಮಗ ಅಜಿತ್ ಕುಮಾರ್ ಮೆಕ್ಯಾನಿಕಲ್ ಎಂಜಿನಿಯರ್ . ‘‘ಇದೇ ಊರಲ್ಲಿಬದುಕು ಕಟ್ಟಿಕೊಳ್ಳಿ,’’ ಎಂಬ ತಂದೆಯ ಮಾತೇ ಅವರಿಗೆ ಪ್ರೇರಣೆಯಾಯಿತು.

ಸುತ್ತಲಿನ ಪ್ರದೇಶದಲ್ಲಿಬೆಳೆಯುವ ಗೋಡಂಬಿಗೆ ಮಾರುಕಟ್ಟೆ ಕೊರತೆ ಇರುವುದನ್ನು ಸಹೋದರರು ಮನಗಂಡರು. ಸಂಸ್ಕರಣ ಘಟಕಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಸುಮಾರು ಒಂದೂವರೆ ವರ್ಷ ಘಟಕದ ಸಮಸ್ಯೆ, ಪರಿಹಾರಗಳ ಅಧ್ಯಯನ ನಡೆಸಿದರು. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆಯ ಆರ್ಥಿಕ ನೆರವು ಹಾಗೂ ತಂದೆಯ ಸಹಾಯ ಸೇರಿ ಒಟ್ಟು 20 ಲಕ್ಷ ರೂ. ಬಂಡವಾಳದಲ್ಲಿ2022ರಲ್ಲಿಗೋಡಂಬಿ ಸಂಸ್ಕರಣ ಘಟಕ ಆರಂಭಿಸಿದರು.

ಅತ್ಯಾಧುನಿಕ ಯಂತ್ರಗಳು, ಉತ್ತಮ ಪ್ಯಾಕಿಂಗ್ , ರಾಜಿಯಿಲ್ಲದ ಗುಣಮಟ್ಟ ಇವರ ಮಂತ್ರ. ಸುತ್ತಲಿನ ಜಿಲ್ಲೆಗಳ ಬೆಳೆಗಾರರಿಂದ ಕಚ್ಚಾ ಗೋಡಂಬಿ ಖರೀದಿಸುತ್ತಾರೆ. ಇಂದು ಘಟಕ 1.5 ಕೋಟಿ ರೂ. ವ್ಯವಹಾರ ನಡೆಸುತ್ತ, 25 ಜನರಿಗೆ ಉದ್ಯೋಗ ನೀಡಿದೆ. ತಮ್ಮ 6 ಎಕರೆಯಲ್ಲೂಗೋಡಂಬಿ ಬೆಳೆದಿರುವ ಸಹೋದರರು, ಬರಪೀಡಿತ ಪ್ರದೇಶಕ್ಕೆ ಸೂಕ್ತವಾದ ಈ ಬೆಳೆಯ ಬಗ್ಗೆ ರೈತರಿಗೆ ಮಾಹಿತಿ, ತರಬೇತಿ ನೀಡುತ್ತಿದ್ದಾರೆ.

- - -

4. ವಿದೇಶ ತೊರೆದವರ ಉಪ್ಪಿನಕಾಯಿಗೆ ಫಾರಿನ್ನಲ್ಲೆಲ್ಲಬೇಡಿಕೆ

ರೈತ ಉದ್ಯಮಿ: ಸಂದೀಪ್ , ಹಾಲೇಕಲ್ಲು, ದಾವಣಗೆರೆ ಜಿಲ್ಲೆ

ಸಾಹಸ: ಹುಟ್ಟೂರಲ್ಲಿಉಪ್ಪಿನಕಾಯಿ ಘಟಕ ತೆರೆದರು.

ಎಐ ರೊಬಾಟಿಕ್ಸ್ ನಲ್ಲಿಎಂಜಿನಿಯರಿಂಗ್ ಮುಗಿಸಿ, ಯುಕೆಯಲ್ಲಿಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೈ ತುಂಬ ಸಂಬಳ ಪಡೆಯುತ್ತಿದ್ದರು ಸಂದೀಪ್ . ಆದರೆ, ಕೃಷಿ ಹಿನ್ನೆಲೆಯ ಅವರ ಮನದಲ್ಲಿಆಹಾರೋದ್ಯಮ ಸ್ಥಾಪಿಸುವ ಕನಸು ಜೀವಂತವಾಗಿತ್ತು.

2013ರಲ್ಲಿಯುಕೆಯಿಂದ ಹಿಂತಿರುಗಿದರು. 2014ರಲ್ಲಿಕೂಡ್ಲಿಗಿಯಲ್ಲಿಗರ್ಕಿನ್ ಸೌತೆಕಾಯಿಯ ಉಪ್ಪಿನಕಾಯಿ ಉದ್ಯಮ ಆರಂಭಿಸಿದರು. ಕೆಲವು ವರ್ಷ ನಡೆಸಿ ಆ ಘಟಕವನ್ನು ಮಾರಾಟ ಮಾಡಿ, ಹುಟ್ಟೂರು ಹಾಲೇಕಲ್ಲಿಗೆ ಮರಳಿ 2017ರಲ್ಲಿ‘ನ್ಯಾಚುರಲಾ ಪಿಕಲ್ಸ್ ’ ಆರಂಭಿಸಿದರು. ಅಂದು ಒಂದಿದ್ದ ಘಟಕ ಇಂದು ಮೂರಾಗಿದೆ. ವಿದೇಶ ಬಿಟ್ಟು ಬಂದವರ ಉಪ್ಪಿನಕಾಯಿಗೆ ಇಂದು ವಿದೇಶದಲ್ಲೇ ಭಾರಿ ಬೇಡಿಕೆ! ಅಮೆರಿಕ, ರಷ್ಯಾ, ಯುರೋಪ್ ದೇಶಗಳಿಗೆ ರಫ್ತಾಗುತ್ತಿದೆ.

ಕಂಪನಿ ವಾರ್ಷಿಕ 15ರಿಂದ 20 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದು, ಶೇ.5ರಿಂದ 6ರಷ್ಟು ಲಾಭ ಇರುತ್ತದೆ ಎನ್ನುತ್ತಾರೆ ಸಂದೀಪ್ . 500- 600 ಜನರಿಗೆ ನೇರ ಉದ್ಯೋಗ, ಸೌತೆ ಬೆಳೆಯುವ 1,500- 2,000 ರೈತರಿಗೆ ಪರೋಕ್ಷ ಉದ್ಯೋಗ ನೀಡಿದ್ದಾರೆ.

- - -

5. ಸಿಟಿ ಕೆಲಸಕ್ಕಿಂತ ಕೃಷಿ ಕೆಲಸದಲ್ಲೇ ಸಂತೃಪ್ತಿ

ರೈತೆ: ತೇಜಸ್ವಿನಿ, ಮಾನ್ವಿ, ರಾಯಚೂರು

ಕೃಷಿ ಸಾಹಸ: 14 ತಳಿಯ ಮಾವು, ಸಹಪಾಠಿಗಳ ಸಂಬಳ ಮೀರಿಸಿದ ಆದಾಯ

ಉದ್ಯೋಗಕ್ಕಿಂತ ಸ್ವಂತ ಜಮೀನಿನ ಕೃಷಿಯೇ ನೆಮ್ಮದಿ, ಸಂತೃಪ್ತಿ ನೀಡುತ್ತದೆ ಎಂಬುದನ್ನು ತೇಜಸ್ವಿನಿ ಸಾಬೀತುಪಡಿಸಿದ್ದಾರೆ. ಎಂಎಸ್ಸಿ ಕೃಷಿ ಪದವಿಯ ನಂತರ ಒಂದು ವರ್ಷ ಖಾಸಗಿ ಕಂಪನಿಯಲ್ಲಿಕೆಲಸ ಮಾಡಿದರು. ಹಣ ಸಿಕ್ಕರೂ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಕೃಷಿಯಲ್ಲೇ ತೊಡಗಿದ್ದಾರೆ.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ತೇಜಸ್ವಿನಿ ಅವರ ಅಣ್ಣ ಹೊರ ರಾಜ್ಯದಲ್ಲಿಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿದ್ದಾರೆ. ಕುಟುಂಬದ ಕೃಷಿಯ ಸಂಪೂರ್ಣ ಜವಾಬ್ದಾರಿ ತೇಜಸ್ವಿನಿ ಅವರ ಹೆಗಲ ಮೇಲಿದೆ.

6 ಎಕರೆಯಲ್ಲಿದಶೇರಿ, ಮಲ್ಲಿಕಾ, ಸುವರ್ಣರೇಖ, ಮಲ್ಗೋಬಾ, ಬೇನಿಷನ್ ಸೇರಿ 14 ತಳಿಯ ಮಾವು ಬೆಳೆಸಿದ್ದು, ತೋಟದಿಂದ ವಾರ್ಷಿಕ 8ರಿಂದ 10 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಜತೆಗೆ ಮೊಟ್ಟೆಗಾಗಿ ಕಾವೇರಿ ತಳಿ, ಮಾಂಸಕ್ಕಾಗಿ ಹಸೀಲ್ ತಳಿ ಸೇರಿ 130 ಕೋಳಿ ಸಾಕಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

ಸಹಪಾಠಿಗಳು ತಿಂಗಳಿಗೆ 60- 70 ಸಾವಿರ ರೂ. ವೇತನ ಪಡೆಯುತ್ತಿರುವಾಗ, ತೇಜಸ್ವಿನಿ ಕೃಷಿಯಲ್ಲೇ ಅದಕ್ಕಿಂತ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಆಸಕ್ತಿ, ಪರಿಶ್ರಮ, ವೈಜ್ಞಾನಿಕ ವಿಧಾನ ಇದ್ದರೆ ಕೃಷಿ ಕೈಹಿಡಿಯುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ.

- - -

6. ವಿಷಮುಕ್ತ ಅನ್ನಕ್ಕಾಗಿ ಹೊಲಕ್ಕಿಳಿದ ಎಂಬಿಎ ಪದವೀಧರ

ರೈತ: ಬಿ. ರವಿಕುಮಾರ್ , ಇಬ್ರಾಹಿಂಪುರ, ಬಳ್ಳಾರಿ

ಕೃಷಿ ಸಾಹಸ: ಸಾವಯವ ಬೆಳೆ, ನೇರ ಮಾರಾಟ, ಕಬ್ಬಿನ ಜ್ಯೂಸ್ ನಲ್ಲಿಮೌಲ್ಯವರ್ಧನೆ

2013ರಲ್ಲಿಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿಉತ್ತಮ ವೇತನ ಪಡೆಯುತ್ತಿದ್ದ ರವಿಕುಮಾರ್ , 2018ರಲ್ಲಿಉದ್ಯೋಗ ತೊರೆದು ಊರಿಗೆ ಮರಳಿದರು. ಗುರಿ ಒಂದೇ... ವಿಷಮುಕ್ತ ಆಹಾರ ಉತ್ಪಾದನೆ! ಇಂದು ಬೆಳೆದ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ ವರ್ಷಕ್ಕೆ 5ರಿಂದ 10 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಸ್ವಂತ 8 ಎಕರೆ ಜಮೀನೇ ಅವರ ಕೃಷಿ ಪ್ರಯೋಗಶಾಲೆ. ಒಂದು ಎಕರೆಯಲ್ಲಿಕಬ್ಬು, ಐದು ಎಕರೆಯಲ್ಲಿಪಪ್ಪಾಯ, ಎರಡು ಎಕರೆಯಲ್ಲಿಅಂಜೂರ, ನುಗ್ಗೆ, ಸ್ವೀಟ್ ಕಾರ್ನ್ ಬೆಳೆಯುತ್ತಿದ್ದಾರೆ. ಉಳಿದ ಅರ್ಧ ಎಕರೆಯಲ್ಲಿತರಕಾರಿ, ಕಾಯಿಪಲ್ಲೆಗಾಗಿ ವ್ಯವಸ್ಥಿತ ಬೆಡ್ ಗಳನ್ನು ನಿರ್ಮಿಸಿದ್ದಾರೆ.

ರಾಸಾಯನಿಕ ಗೊಬ್ಬರ, ಕೀಟನಾಶಕಕ್ಕೆ ಇಲ್ಲಿಜಾಗವಿಲ್ಲ. ಎರೆಹುಳು ಗೊಬ್ಬರ, ಜೀವಾಮೃತ ಸೇರಿ ನೈಸರ್ಗಿಕ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಕಾಪಾಡುತ್ತಿದ್ದಾರೆ. ಬಹುಬೆಳೆ ಪದ್ಧತಿಯಿಂದ ವರ್ಷವಿಡೀ ಆದಾಯ ಹರಿಯುತ್ತಿದೆ. ಹೊಲದ ಕಬ್ಬಿನಿಂದ ಜ್ಯೂಸ್ ತಯಾರಿಸಿ, ಬಳ್ಳಾರಿ ತಾಲೂಕು ಪಂಚಾಯಿತಿ ಕಚೇರಿ ಬಳಿ ಹಾಗೂ ತಾಳೂರು ರಸ್ತೆಯಲ್ಲಿಮಾರಾಟ ಮಾಡುತ್ತಾರೆ.

- - -

7. ಶ್ರೀಗಳ ಒಂದು ಭಾಷಣ, ಎಂಜಿನಿಯರ್ ನ ಬದುಕೇ ಬದಲು!

- ರೈತ: ರಾಕೇಶ ಭೂಮಕ್ಕನವರ, ಅಸುಂಡಿ, ಗದಗ ತಾಲೂಕು

- ಕೃಷಿ ಸಾಹಸ: 11 ಎಕರೆಯಲ್ಲಿಸಾವಿರಾರು ಗಿಡ-ಮರ, ತ್ಯಾಜ್ಯವೇ ಸಂಪನ್ಮೂಲ

ಬಳ್ಳಾರಿಯ ಪ್ರತಿಷ್ಠಿತ ಕಂಪನಿಯಲ್ಲಿದಶಕಗಳ ಕಾಲ ಸಿವಿಲ್ ಎಂಜಿನಿಯರ್ . ಅಲ್ಲಿರುವಾಗಲೇ ಕಾಡಸಿದ್ದೇಶ್ವರ ಶ್ರೀಗಳ ಭಾಷಣ ಕೇಳಿದ ರಾಕೇಶ ಅವರಲ್ಲಿಕೃಷಿಯ ಬಗ್ಗೆ ಹೊಸ ಆಸಕ್ತಿ ಮೊಳೆಯಿತು. ‘ಕೃಷಿಯೇ ಭವಿಷ್ಯ’ ಎಂಬ ಅರಿವಿನೊಂದಿಗೆ ಉದ್ಯೋಗಕ್ಕೆ ವಿದಾಯ ಹೇಳಿ ಮಣ್ಣಿನ ಮಡಿಲಿಗೆ ಮರಳಿದರು.

ಅಮೆರಿಕದಲ್ಲಿಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಹೋದರ ನವೀನ್ ಭೂಮಕ್ಕನವರ ಸಹಕಾರದೊಂದಿಗೆ ಜಮೀನು ಖರೀದಿಸಿದರು. ಕೃಷಿಯನ್ನು ಕೇವಲ ಆದಾಯದ ಮೂಲವಾಗಿ ನೋಡದೆ, ಕುಟುಂಬ ಹಾಗೂ ಸಮಾಜಕ್ಕೆ ಆರೋಗ್ಯಕರ ಆಹಾರ ಒದಗಿಸುವ ಜವಾಬ್ದಾರಿ ಎಂದು ಪರಿಗಣಿಸಿದ್ದಾರೆ.

ಅಸುಂಡಿ ಸಮೀಪದ ಕುರ್ತಕೋಟಿ ಗ್ರಾಮ ವ್ಯಾಪ್ತಿಯ 11 ಎಕರೆಯಲ್ಲಿಇಂದು ಹಸಿರಿನ ಸಾಮ್ರಾಜ್ಯವೇ ನಿರ್ಮಾಣವಾಗಿದೆ. 200 ತೆಂಗು, 200 ಮಹಾಗನಿ ಹಾಗೂ ಹೆಬ್ಬೇವು, 1,200 ಪೇರಳೆ, 800 ಸೀತಾಫಲ, 1,800 ಶ್ರೀಗಂಧ, 50 ಮಾವು, 20 ಚಿಕ್ಕು, 100 ನೇರಳೆ ಹಣ್ಣು, 50 ನಿಂಬೆ ಹಾಗೂ 100 ಅಡಕೆ ಮರಗಳು. ಮನೆ ಬಳಕೆಗೆ ಬೇಕಾದಷ್ಟು ಬಾಳೆಯೂ ಇದೆ. ಹೈನುಗಾರಿಕೆ, ಕುರಿ-ಕೋಳಿ, ಜೇನು ಸಾಕಣೆಯೂ ಜತೆಗಿದೆ. ಸುಮಾರು 10ರಿಂದ 15 ದನಕರುಗಳಿವೆ.

- - -

8. ಕೆಮಿಕಲ್ ಬಿಟ್ಟು ಗೀರ್ ಹಸುವಿನ ತುಪ್ಪದತ್ತ

ರೈತ: ಅಭಿನಂದನ್ , ಗಂಪದಕೋಡಿ, ಇಂದಬೆಟ್ಟು, ಬೆಳ್ತಂಗಡಿ, ದಕ್ಷಿಣ ಕನ್ನಡ

ಕೃಷಿ ಸಾಹಸ: ಹೈನುಗಾರಿಕೆ, ಮೌಲ್ಯವರ್ಧಿತ ಹಾಲಿನ ಉತ್ಪನ್ನ, ಹೊರರಾಜ್ಯಕ್ಕೂ ಪೂರೈಕೆ

ಹತ್ತು ವರ್ಷ ಬೆಂಗಳೂರಿನಲ್ಲಿಕೆಮಿಕಲ್ ಎಂಜಿನಿಯರ್ ಆಗಿ ಕೈ ತುಂಬ ಸಂಪಾದನೆ. ಆದರೆ, ನಗರದ ಬದುಕು ರೋಸಿಹೋಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಸಿಟಿ ಲೈಫ್ ಗೆ ವಿದಾಯ ಹೇಳಿದ ಅಭಿನಂದನ್ , ಊರಿಗೆ ಮರಳಿ ಕೃಷಿಗೆ ಕೈಹಾಕಿದರು. ಜತೆಗೆ ಗೀರ್ ತಳಿಯ ಹಸುಗಳನ್ನು ಸಾಕಿ ಹೈನುಗಾರಿಕೆ ಆರಂಭಿಸಿದರು.

ಇಂದು ಭರ್ಜರಿ ಹಾಲು ಪಡೆಯುತ್ತಿದ್ದು, ತುಪ್ಪ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಗುಣಮಟ್ಟ ಮತ್ತು ನೈಸರ್ಗಿಕತೆಯನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮದೇ ಟ್ರೆಂಡ್ ರೂಪಿಸಿಕೊಂಡಿದ್ದಾರೆ. ಅವರ ಉತ್ಪನ್ನಗಳು ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೂ ಸರಬರಾಜಾಗುತ್ತಿವೆ.

ಹಸುಗಳ ಆರೈಕೆಯಿಂದ ಹಿಡಿದು ಹಾಲು ಉತ್ಪಾದನೆ, ಉತ್ಪನ್ನ ತಯಾರಿಕೆ, ಮಾರುಕಟ್ಟೆಯವರೆಗೆ ಎಲ್ಲವನ್ನೂ ಸ್ವತಃ ನಿರ್ವಹಿಸುತ್ತಾರೆ. ಹಳ್ಳಿಯ ನೆಮ್ಮದಿ, ಸ್ವಾವಲಂಬಿ ಬದುಕಿನ ಖುಷಿ, ಕುಟುಂಬದೊಂದಿಗಿನ ಒಡನಾಟ ತಮ್ಮ ಬದುಕನ್ನು ಬದಲಿಸಿದೆ ಎನ್ನುತ್ತಾರೆ ಅಭಿನಂದನ್ .

- - -

9. ಯುಟ್ಯೂಬ್ ಗುರು, ಸಾವಯವ ಶಿಷ್ಯ!

ರೈತ: ಪೃಥ್ವಿರಾಜ್ ಡಿ.ವಿ. (42), ವರಗೋಡು, ವರುಣ ಹೋಬಳಿ, ಮೈಸೂರು ತಾ.

ಕೃಷಿ ಸಾಹಸ: ಐಟಿ ಉದ್ಯೋಗ ಬಿಟ್ಟು 9 ಎಕರೆಯಲ್ಲಿಸಮಗ್ರ ಬೇಸಾಯ

ಅಪ್ಪ ಗಳಿಸಿದ ಜಮೀನನ್ನು ಉಳಿಸಿಕೊಳ್ಳಬೇಕು, ಕೃಷಿಯಲ್ಲಿನೆಮ್ಮದಿ ಕಾಣಬೇಕು. ಈ ಎರಡು ಆಸೆ ಬಿ. ಟೆಕ್ ಪದವೀಧರ ಪೃಥ್ವಿರಾಜ್ ಅವರನ್ನು ಐಟಿ ಉದ್ಯೋಗದಿಂದ ಹಳ್ಳಿಗೆ ಕರೆತಂದಿತು. ಯಶಸ್ವಿ ಸಾವಯವ ರೈತರ ಯುಟ್ಯೂಬ್ ವಿಡಿಯೊಗಳನ್ನು ನೋಡುತ್ತಲೇ 2016ರಲ್ಲಿಕೃಷಿ ಬದುಕು ಆರಂಭಿಸಿದರು. ಇಂದು 9 ಎಕರೆಯಲ್ಲಿಸಮಗ್ರ ಕೃಷಿ ನಡೆಸುತ್ತಿದ್ದಾರೆ. ಬಾಳೆ, ತರಕಾರಿ, ತೆಂಗಿನ ತೋಟಕ್ಕೆ ಬೇಕಾದ ಜೀವಾಮೃತ, ಪಂಚಗವ್ಯವನ್ನು ತಾವೇ ತಯಾರಿಸುತ್ತಾರೆ. ಎರೆಹುಳು ತೊಟ್ಟಿ ಕಟ್ಟಿಕೊಂಡಿದ್ದಾರೆ. ಭತ್ತ, ರಾಗಿ ಬೆಳೆಯುತ್ತಾರೆ. ನಾಟಿ ಕೋಳಿ ಸಾಕಣೆ ಜತೆಗೆ 12 ಮಲೆನಾಡು ಗಿಡ್ಡ ಹಸುಗಳಿವೆ. ವಾರ್ಷಿಕ 8 ಲಕ್ಷ ರೂ. ವರಮಾನ ಗಳಿಸುತ್ತಿದ್ದಾರೆ.

- - -

ವಿದೇಶ ಸಂಬಳಕ್ಕೆ ಗುಡ್ ಬೈ, ಮಣ್ಣಿನ ಬದುಕಿಗೆ ಸೈ

- ರೈತ: ಯೋಗೇಶ್ ಪ್ರಭುಸ್ವಾಮಿ, ವೆಂಕಟಯ್ಯನ ಛತ್ರದ ಹೊಸೂರು, ಚಾಮರಾಜನಗರ

- ಕೃಷಿ ಸಾಹಸ: ನ್ಯಾಚುರಲ್ ಫಾಮ್ ರ್ ನಲ್ಲಿ50ಕ್ಕೂ ಹೆಚ್ಚು ವಿದೇಶಿ ಹಣ್ಣಿನ ಕೃಷಿ

ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರ ಯೋಗೇಶ್ , ಜರ್ಮನಿಯಂಥ ಮುಂದುವರಿದ ದೇಶದಲ್ಲಿಬರೋಬ್ಬರಿ 10 ವರ್ಷ ಲಕ್ಷಾಂತರ ರೂ. ವೇತನದ ಐಷಾರಾಮಿ ಉದ್ಯೋಗದಲ್ಲಿದ್ದರು. ಆದರೆ ವಿದೇಶಿ ಜೀವನದ ಆಕರ್ಷಣೆಗಿಂತ ಹುಟ್ಟೂರಿನ ಮಣ್ಣಿನ ಸೆಳೆತವೇ ಗೆದ್ದಿತು. ಉದ್ಯೋಗ ತೊರೆದು ಸ್ವಗ್ರಾಮಕ್ಕೆ ಮರಳಿ ಪೂರ್ಣಪ್ರಮಾಣದ ಕೃಷಿಕರಾದರು.

ತಾಯಿ, ಅಜ್ಜಿ, ಪತ್ನಿ, ಮಗಳೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ ಅವರು, 8.5 ಎಕರೆಯಲ್ಲಿ‘ಶಿವಪ್ರಭು ನ್ಯಾಚುರಲ್ ಫಾಮ್ ರ್ ’ ಆರಂಭಿಸಿ ನೀರಾವರಿ ಆಧಾರಿತ ಸಾವಯವ ಕೃಷಿ ಕೈಗೊಂಡಿದ್ದಾರೆ. ಬಾಳೆ, ತೆಂಗು, ಅಡಕೆ, ಪರಂಗಿ, ನುಗ್ಗೆಯ ಜತೆಗೆ 50ಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ನೇರವಾಗಿ ಗ್ರಾಹಕರಿಗೆ ಮಾರುತ್ತಾರೆ. ಸ್ವಂತ ನರ್ಸರಿ, ವಾಣಿಜ್ಯ ಕಾಂಪೋಸ್ಟ್ ಘಟಕ ಸ್ಥಾಪಿಸಿ 20ಕ್ಕೂ ಹೆಚ್ಚು ಸಾವಯವ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದ್ದಾರೆ. ಈ ವೈಜ್ಞಾನಿಕ, ಸಮಗ್ರ ಕೃಷಿಯಿಂದ ಇಂದು ವಾರ್ಷಿಕ 10 ಲಕ್ಷ ರೂ.ಗೂ ಅಧಿಕ ಲಾಭ ಗಳಿಸುತ್ತಿದ್ದಾರೆ.

ಧಿ - - -

11. ಮಲೆನಾಡ ತೋಟದಲ್ಲಿನ ಖುಷಿ ಬೆಂಗಳೂರಿಗಿಂತ ದುಪ್ಪಟ್ಟು

ರೈತ ದಂಪತಿ: ಲಿಂಗರಾಜ್ , ಕ್ಷಮಾ ಕಟ್ಟೆ, ಯೋಗಿನರಸೀಪುರ, ತೀರ್ಥಹಳ್ಳಿ

ಕೃಷಿ ಸಾಹಸ: ಅಡಕೆಯೊಂದಿಗೆ ಸಮಗ್ರ ಕೃಷಿ, ವಾಟ್ಸ್ ಆ್ಯಪ್ ಮೂಲಕ ನೇರ ಮಾರಾಟ

ಉನ್ನತ ವ್ಯಾಸಂಗದಿಂದ ಬೆಂಗಳೂರಿನಲ್ಲಿಒಳ್ಳೆಯ ಕೆಲಸ, ಕೈ ತುಂಬ ವೇತನ, ಕಾರು, ಬೈಕು, ವಾರಾಂತ್ಯದ ಜಾಲಿ ರೈಡ್ , ಪಿಕ್ ನಿಕ್ ... ಬಿಂದಾಸ್ ಲೈಫಿನಂತಿದ್ದರೂ ಆದರೂ ಮನಸ್ಸಿಗೆ ಶಾಂತಿ ಇರಲಿಲ್ಲ. ಟ್ರಾಫಿಕ್ , ಕೆಲಸದ ಒತ್ತಡ, ಪ್ರವಾಸದಿಂದ ಬಂದ ಮರುದಿನವೇ ಕಚೇರಿಗೆ ಹೋಗುವ ಬೇಸರ. ಒತ್ತಡದ ಬದುಕು. ಇನ್ನೊಂದೆಡೆ, ಮಲೆನಾಡಿನ ಊರಿಗೆ ಬಂದಾಗ ಅದೇನೋ ಅಪಾರ ನೆಮ್ಮದಿ. ಹುಡುಕುತ್ತಿದ್ದ ನಿಧಿಯೇ ಸಿಕ್ಕಿದಂಥ ಸಂತೃಪ್ತಿ. ಕೊನೆಗೂ ಆ ದಂಪತಿ ನಿರ್ಧಾರ ಮಾಡಿಯೇಬಿಟ್ಟರು.

ಬೆಂಗಳೂರಿನಲ್ಲಿ10 ವರ್ಷ ಇದ್ದ ಲಿಂಗರಾಜ್ ಮತ್ತು ಕ್ಷಮಾ ಕಟ್ಟೆ, 6 ಅಂಕೆಯ ವೇತನ ಬಿಟ್ಟು 10 ವರ್ಷಗಳ ಹಿಂದೆ ಊರಿಗೆ ಮರಳಿದರು. ಆರಂಭದಲ್ಲಿಎಡವಿದರು, ಹಣ ಸುರಿದು ಕೈ ಸುಟ್ಟುಕೊಂಡರು. ಆದರೂ ಛಲ ಬಿಡಲಿಲ್ಲ. ಇಂದು ಅದೇ ಕೃಷಿ ಅವರ ಕೈಹಿಡಿದಿದೆ; ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

6 ಎಕರೆಯಲ್ಲಿಅಡಕೆ, ತೆಂಗು, ಕಾಳುಮೆಣಸು, ಬಾಳೆ, ವೆನಿಲಾ, ಕಾಫಿ, ಭತ್ತ, ವಿವಿಧ ತರಕಾರಿ, ಹಣ್ಣುಗಳು; 20 ಗುಂಟೆ ಪಾಲಿಹೌಸ್ ನಲ್ಲಿಬಗೆಬಗೆಯ ಹೂವು. ಜತೆಗೆ ಜೇನು, ಶೆಡ್ ನಲ್ಲಿಕುರಿ, ನಾಟಿ ಕೋಳಿ. ಮಧ್ಯವರ್ತಿಗಳನ್ನು ಅವಲಂಬಿಸದೆ ವಾಟ್ಸಾ ್ಯಪ್ ಗ್ರೂಪ್ ಗಳ ಮೂಲಕ ನೇರವಾಗಿ ಗ್ರಾಹಕರಿಗೆ ಉತ್ಪನ್ನ ತಲುಪಿಸುತ್ತಾರೆ. ಬೆಂಗಳೂರಿನಲ್ಲಿಗಳಿಸುತ್ತಿದ್ದ ವೇತನಕ್ಕಿಂತ 2 ಪಟ್ಟು ಹೆಚ್ಚು ಆದಾಯ ಇಂದು ಅವರದು. ಆಗಾಗ್ಗೆ ಹೊರರಾಜ್ಯ, ವಿದೇಶ ಪ್ರವಾಸಕ್ಕೂ ಹೋಗಿಬರುವಷ್ಟು ಬದುಕು ಸಂತೃಪ್ತಿ. ನಗರದಲ್ಲಿಹುಡುಕುತ್ತಿದ್ದ ನೆಮ್ಮದಿ ಮಲೆನಾಡಿನ ತೋಟದಲ್ಲಿಸಿಕ್ಕಿದೆ.