ಆದಿವಾಸಿಗಳ ಪಾರಂಪರಿಕ ಹಕ್ಕು ರಕ್ಷಿಸಿ

Contributed by: vkhnataraj@gmail.com|Vijaya Karnataka•
urgent measures to protect indigenous rights
ಆದಿವಾಸಿಗಳ ಪಾರಂಪರಿಕ ಹಕ್ಕು ರಕ್ಷಿಸಿ

ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಿಗೆ ಆದಿವಾಸಿ ಮುಖಂಡರ ಮನವಿ
ವಿಕ ಸುದ್ದಿಲೋಕ ಹುಣಸೂರು

ಪಶ್ಚಿಮ ಘಟ್ಟ ರಕ್ಷಣೆಗಾಗಿ ಕಸ್ತೂರಿರಂಗನ್ ವರದಿ ಚರ್ಚೆಗೂ ಮೊದಲು ಆದಿವಾಸಿ ಸಮುದಾಯಗಳ ಪಾರಂಪರಿಕ ಹಕ್ಕುಗಳಾದ ಅರಣ್ಯ ಹಕ್ಕು, ನೆಲಸುಗಳ ಹಕ್ಕು, ಸ್ವಯಂ ನಿರ್ಣಯ ಹಕ್ಕು ಗೌರವಿಸಲು ಅವರ ಅರಣ್ಯ ಹಾಗೂ ವಾಸಸ್ಥಳಗಳನ್ನು 5ನೇ ಅನುಸೂಚಿತ ಪ್ರದೇಶ ಎಂದು ಮೊದಲು ಘೋಷಿಸುವಂತೆ ಆದಿವಾಸಿ ಮುಖಂಡರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಡೀಡ್ ಸಂಸ್ಥೆ ಕಚೇರಿಯಲ್ಲಿನಡೆದ ಸಭೆಯಲ್ಲಿ ಭಾಗವಹಿಸಿದ್ದ ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲನಾಣಚಿ, ಬುಡಕಟ್ಟು ಕೃಷಿಕರ ಸಂಘದ ಜಯಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಣ್ಣ, ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿ, ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ಶಿವಣ್ಣ, ವಿಜಯಗಿರಿ ಭೂಮಿದಾರರ ಅಧ್ಯಕ್ಷ ಬಸವರಾಜ್ , ಡೀಡ್ ನ ಡಾ.ಎಸ್ .ಶ್ರೀಕಾಂತ್ , ಪ್ರಕಾಶ್ ಮತ್ತಿತರರು ನಡೆಸಿದ ಸಭೆಯಲ್ಲಿಚರ್ಚಿಸಿದರು.

‘‘ಕಸ್ತೂರಿರಂಗನ್ ವರದಿ ಜಾರಿಗೆ ಮೊದಲು ಆದಿವಾಸಿಗಳ ಪರಂಪರೆಯ ಅರಣ್ಯ ಹಕ್ಕಿನ ಕಾಯಿದೆ-2006, ಪೆಸಾ/ಆದಿವಾಸಿ ಪಂಚಾಯತ್ ಕಾಯಿದೆ-1996, ಹೈಕೋರ್ಟ್ ಆದೇಶ 2009ರ ಅನ್ವಯ ಗೌರವಿಸಿ. ಜನವಸತಿಗಳಿಲ್ಲದ ಪಶ್ಚಿಮಘಟ್ಟ ಕಾಡುಗಳನ್ನು ರಕ್ಷಿಸುವಂತೆ ಕೋರಿದ್ದಾರೆ. ಈಗ ಕಸ್ತೂರಿರಂಗನ್ ವರದಿ ವಿವೇಚನೆ ಇಲ್ಲದೆ ಜಾರಿಗೊಳಿಸಿದರೆ ಆದಿವಾಸಿಗಳಿಗೆ ಹಾಗೂ ರೈತರಿಗೆ ಅನಾಹುತವಾಗುತ್ತದೆ. ಜನರ ಸಹ ಭಾಗಿತ್ವವಿಲ್ಲದೆ ಪಶ್ಚಿಮ ಘಟ್ಟ ರಕ್ಷಣೆ ಅಸಾಧ್ಯ ಎಂದಿರುವ ಇವರು ಅದಿವಾಸಿ ಅಭಿವೃದ್ಧಿಗೆ, ಪಶ್ಚಿಮ ಘಟ್ಟ ನಿರ್ವಹಣೆಗೆ ಸ್ಥಳೀಯರನ್ನೊಳಗೊಂಡ ಮಂಡಳಿಗಳನ್ನು ರಚಿಸಿ ಅರಣ್ಯ, ಬುಡಕಟ್ಟು, ಸಮಾಜ ಕಲ್ಯಾಣ, ಕಂದಾಯ, ಶಿಕ್ಷಣ, ಮಹಿಳಾ ಕಲ್ಯಾಣ ಕೃಷಿ, ತೋಟಗಾರಿಕೆ ಇಲಾಖೆಗಳನ್ನೊಳಗೊಂಡು ಕಾರ್ಯ ನಿರ್ವಹಿಸಬೇಕು,’’ ಎಂದು ಸಲಹೆ ನೀಡಿದ್ದಾರೆ.

ಮರು ಜೀವನ ಕಟ್ಟಿಕೊಳ್ಳಲು ನೆರವಾಗಿ: ಪಶ್ಚಿಮಘಟ್ಟ ಪ್ರದೇಶದ 9 ಜಿಲ್ಲೆಗಳ 38 ತಾಲೂಕಿನ ಅರಣ್ಯದೊಳಗೆ ಹಾಗೂ ಕಾಡಂಚಿನಲ್ಲಿವಾಸವಿರುವ 12ಆದಿವಾಸಿ ಸಮುದಾಯಗಳ 4ಲಕ್ಷ ಕಾಡುಕುಡಿಗಳಲ್ಲದೆ ಕರ್ನಾಟಕ ಹೈಕೋರ್ಟ್ ಆದೇಶ ಹಾಗೂ ಅಸಾದಿ ವರದಿಗಳನ್ವಯ ಕಾಡಿಂದ ಮೊದಲೇ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಯಿಂದ ಕಾನೂನು ಬಾಹಿರವಾಗಿ ಹೊರಹಾಕಿರುವ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ಇದರಿಂದ ಕರ್ನಾಟಕದಲ್ಲಿಕಾಡಿನಿಂದ ಹೊರಹಾಕಿರುವ 20ಸಾವಿರ ಕುಟುಂಬಗಳಿಗೆ ಸ್ವತಂತ್ರವಾಗಿ ಮರುಜೀವನ ಕಟ್ಟಿಕೊಳ್ಳಲು ನೆರವಾಗಲಿದೆ. ಕರ್ನಾಟಕ, ಕೇರಳಂ, ತಮಿಳು ನಾಡು ರಾಜ್ಯಗಳು ಕೂಡುವ ಜಿಲ್ಲೆಗಳ ಘಟ್ಟ ಪ್ರದೇಶದಲ್ಲಿಇದ್ದ ಆದಿವಾಸಿ ತಾಯಿ ನಾಡು ಕಾಟುನಾಡನ್ನು ಭಾಷಾವಾರು ಪ್ರಾಂತ್ಯ ಮಾಡುವಾಗ ನಾಶಗೊಳಿಸಿರುವುದನ್ನು ಮರುಸ್ಥಾಪಿಸಿ ಆದಿವಾಸಿಗಳ ರಾಜ್ಯ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಮನವಿಯನ್ನು ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ಬುಡಕಟ್ಟು ಸಚಿವಾಲಯ, ಅರಣ್ಯಇಲಾಖೆ ಅಧಿ ಕಾರಿಗಳಿಗೂ ಸಲ್ಲಿಸಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿತಿಳಿಸಿದ್ದಾರೆ.

ಪೊಟೋ

24ಎಚ್ ಯುಎನ್ -2ಹುಣಸೂರಿನ ಡೀಡ್ ಸಂಸ್ಥೆ ಕಚೇರಿಯಲ್ಲಿನಡೆದ ಸಭೆಯಲ್ಲಿಭಾಗವಹಿಸಿದ್ದ ಆದಿವಾಸಿ ಮುಖಂಡರು.