ಕೊಳ ಸ್ವಚ್ಛತೆ, ನವೀಕರಣ ಅಭಿಯಾನ

Contributed by: Mahadev Swamy|Vijaya Karnataka•
cleanliness campaign in marayyanahundi village preserving the wetland
ಕೊಳ ಸ್ವಚ್ಛತೆ, ನವೀಕರಣ ಅಭಿಯಾನ

ವಿಕ ಸುದ್ದಿಲೋಕ ಮೈಸೂರು
ನಗರದ ಶೇಷಾದ್ರಿಪುರಂ ಪದವಿ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಎನ್ ಎಸ್ ಎಸ್ ಘಟಕದ ಸಹಯೋಗದೊಂದಿಗೆ 57ನೇ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ಮೈಸೂರು ತಾಲೂಕಿನ ಮರಯ್ಯನಹುಂಡಿ ಗ್ರಾಮದ ನಾಮದಕೊಳ ಸ್ವಚ್ಛತೆ ಮತ್ತು ನವೀಕರಣ ಅಭಿಯಾನ ನಡೆಸಲಾಯಿತು.

ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಗ್ರಾಮದ ಅರಣ್ಯ ಪ್ರದೇಶದ ಬಳಿ ಇರುವ 300 ವರ್ಷಗಳಿಗೂ ಹಳೆಯದಾದ ಕೊಳವನ್ನು ಸ್ವಚ್ಛಗೊಳಿಸುವ ಮತ್ತು ಪುನಶ್ಚೇತನಗೊಳಿಸುವ ಕಾರ್ಯದಲ್ಲಿಕಾಲೇಜಿನ ಎನ್ ಎಸ್ ಎಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದರು. ಕೆರೆಯಲ್ಲಿತುಂಬಿದ್ದ ಹೂಳು, ತ್ಯಾಜ್ಯ, ಕಳೆ ಮತ್ತು ಇತರ ಅವಶೇಷಗಳನ್ನು ತೆಗೆದುಹಾಕಲಾಯಿತು.

ಜತೆಗೆ ಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು ಸುಧಾರಿಸುವುದು ಮತ್ತು ಸುತ್ತಮುತ್ತಲಿನ ಪರಿಸರವನ್ನು ಮರುಸ್ಥಾಪಿಸುವುದು, ಜಲಮೂಲಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮುದಾಯದಲ್ಲಿಜಾಗೃತಿ ಮೂಡಿಸುವುದು ಹಾಗೂ ಸಕ್ರಿಯ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಯಿತು.

ಅಭಿಯಾನದಲ್ಲಿಕಾಲೇಜಿನ 74 ಎನ್ ಎಸ್ ಎಸ್ ಸ್ವಯಂಸೇವಕರು ಮತ್ತು ಮೂವರು ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಗ್ರಾಮಸ್ಥರಾದ ಮೋಹನ್ ಕುಮಾರ್ , ಎಲ್ . ನಿಂಗರಾಜು, ಶಶಿಕುಮಾರ್ ಉತ್ತಮ ಬೆಂಬಲವನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಭಾಗಿಯಾದರು.

ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಗುರುಮೂರ್ತಿ ಭಟ್ .ಪಿ.ಆರ್ , ಸಹಾಯಕರಾದ ಸತ್ಯನಾರಾಯಣ ಟಿ.ಜಿ., ಚಾಲಕ ವಿವೇಕ್ ಭಾಗವಹಿಸಿದ್ದರು.

ಫೋಟೋ

ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್ ಎಸ್ ಎಸ್ ವತಿಯಿಂದ ಮೈಸೂರು ತಾಲೂಕಿನ ಮರಯ್ಯನಹುಂಡಿ ಗ್ರಾಮದ ನಾಮದಕೊಳ ಸ್ವಚ್ಛತೆ ಮತ್ತು ನವೀಕರಣ ಅಭಿಯಾನ ನಡೆಸಲಾಯಿತು.