ಸಿಎಂ ಅಧ್ಯಕ್ಷತೆಯಲ್ಲಿ ಜಿಬಿಎ 2ನೇ ಸಭೆ ಇಂದು

Contributed bynagappa.narayanappa@timesgroup.com|Vijaya Karnataka
2nd meeting of greater bengaluru authority important resolutions under cms chairmanship
ವಿಕ ಸುದ್ದಿಲೋಕ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಎರಡನೇ ಸಭೆಯು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿಕೇಂದ್ರ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿಗುರುವಾರ ನಡೆಯಲಿದ್ದು, ನಗರದ ಅಭಿವೃದ್ಧಿ ಹಾಗೂ ಇನ್ನಿತರೆ ಮೂಲಸೌಕರ್ಯಗಳ ಕುರಿತಂತೆ ಮಹತ್ವದ ಚರ್ಚೆಗಳು ನಡೆಯಲಿವೆ.
ಜಿಬಿಎ ರಚನೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಕಾಯಿದೆ ಅನ್ವಯ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಾಧಿಕಾರ ಸಭೆ ನಡೆಸಬೇಕಿದೆ. ಆದರೆ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ2025ರ ಅ.10ರಂದು ಮೊದಲ ಸಭೆ ನಡೆದಿತ್ತು. ಆನಂತರ ಸಭೆ ನಡೆದಿರಲಿಲ್ಲ. ಈಗ 10 ತಿಂಗಳ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿಎರಡನೇ ಸಭೆ ಕರೆಯಲಾಗಿದೆ.

ಪ್ರತಿಪಕ್ಷ ಬಿಜೆಪಿಯ ಬಹುತೇಕ ಶಾಸಕರು, ಸಂಸದರು ಪಾದಯಾತ್ರೆಯಲ್ಲಿಪಾಲ್ಗೊಂಡಿದ್ದು, ಸಭೆಗೆ ಗೈರಾಗುವ ಸಾಧ್ಯತೆ ಇದೆ. ಕಳೆದ ಸಭೆಯಲ್ಲೂಪ್ರತಿಪಕ್ಷ ನಾಯಕ ಆರ್ .ಅಶೋಕ್ ಸೇರಿದಂತೆ ಬಿಜೆಪಿಯ ಯಾರೊಬ್ಬರೂ ಸಭೆಯಲ್ಲಿಭಾಗವಹಿಸಿರಲಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿನಗರದ ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಹಲವು ಅಧಿಕಾರಿಗಳನ್ನೊಳಗೊಂಡಂತೆ 84 ಸದಸ್ಯರಿದ್ದಾರೆ.

ವೈಟ್ ಟಾಪಿಂಗ್ , ರಸ್ತೆ ಮತ್ತು ಇತರೆ ಮೂಲಭೂತ ಸೌಕರ್ಯ ಯೋಜನೆಗಳು, ರಾಜಕಾಲುವೆ ಬಫರ್ ವಲಯದಲ್ಲಿಸಂಪರ್ಕ ರಸ್ತೆಗಳ ನಿರ್ಮಾಣ, ಸುರಂಗ ಮಾರ್ಗ, ಹೊರವರ್ತುಲ ರಸ್ತೆ ಅಭಿವೃದ್ಧಿ, ಎಲಿವೇಟೆಡ್ ಕಾರಿಡಾರ್ ಗಳು, ರಾಜಕಾಲುವೆ, ಕೆರೆಗಳ ಅಭಿವೃದ್ಧಿ, ಆರೋಗ್ಯ, ಸಮಗ್ರ ಸಂಚಾರ ಯೋಜನೆ, ಘನತ್ಯಾಜ್ಯ ನಿರ್ವಹಣೆ, ಕಂದಾಯ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಭೆಯಲ್ಲಿಚರ್ಚಿಸುವ ಸಾಧ್ಯತೆಗಳಿವೆ.

ಇದಲ್ಲದೆ, 2026-27ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ, ಪ್ರಾಧಿಕಾರದ ಹಣಕಾಸು ನಿರ್ವಹಣೆಗಾಗಿ ಅಭಿವೃದ್ಧಿಪಡಿಸಿರುವ ಐಎಫ್ ಎಂಎಸ್ ಅಳವಡಿಕೆ ಇನ್ನಿತರೆ ಪ್ರಸ್ತಾವನೆಗಳಿಗೆ ಸಭೆಯ ಅನುಮೋದನೆ ಪಡೆಯಲು ಉದ್ದೇಶಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿನಾಗರಿಕ ಮೂಲಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕರ್ನಾಟಕ ಯೋಜನಾ ಪ್ರಾಧಿಕಾರಗಳ (ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ) ನಿಯಮಗಳು-2016 ಅನ್ನು ಅಳವಡಿಸಿಕೊಳ್ಳಲು, ಪಾಲಿಕೆಗಳ ಅಧಿಕಾರಿ, ನೌಕರರ ನಿವೃತ್ತ ವೇತನ ಹಾಗೂ ಕುಟುಂಬ ಪಿಂಚಣಿಯನ್ನು ಮಾಸಿಕವಾಗಿ ಜಿಬಿಎ ವತಿಯಿಂದ ಪಾವತಿಸಲು, ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವುದೂ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವುಗಳಿಗೆ ಸಭೆಯಲ್ಲಿಅನುಮೋದನೆ ದೊರಕುವ ಸಾಧ್ಯತೆಗಳಿವೆ.

-----------

ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ15.22 ಕೋಟಿ ರೂ. ಬಿಡ್ ಸಲ್ಲಿಸಿ, ಆಯ್ಕೆಯಾಗಿರುವ ಐಬಿಐ ಗ್ರೂಪ್ ಇಂಡಿಯಾ ಪ್ರೈ.ಲಿ.ಗೆ ಗುತ್ತಿಗೆ ನೀಡಲು, ಪರಿಷ್ಕೃತ ಮಹಾಯೋಜನೆಯಲ್ಲಿನ ಪ್ರಸ್ತಾಪಿತ ರಸ್ತೆ ಸಂಪರ್ಕ ಜಾಲಗಳನ್ನೂ ಒಳಗೊಂಡಂತೆ ತಯಾರಿಸಿರುವ ಪರಿಚಲನಾ ಜಾಲದ ನಕ್ಷೆಗಳಿಗೆ ಅನುಮೋದನೆ ಕೋರಲಾಗಿದೆ.