ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ
ವಿಕ ಸುದ್ದಿಲೋಕ ಗೋಕಾಕಸುಣಧೋಳಿ ಮತ್ತು ಇತರೆ ಸುತ್ತಲಿನ ನಾಲ್ಕು ಗ್ರಾಮಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಸುಣಧೋಳಿ ಗ್ರಾಮದಲ್ಲಿದೊಡ್ಡ ಕೆರೆ ನಿರ್ಮಿಸಲಾಗುವುದು ಅರಬಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ಇಲ್ಲಿನ ಎನ್ ಎಸ್ ಎಫ್ ಕಚೇರಿಗೆ ಬುಧವಾರ ಆಗಮಿಸಿದ್ದ ಸುಣಧೋಳಿ, ಲಕ್ಷ್ಮೇಶ್ವರ, ಹೊಸಟ್ಟಿ ಮತ್ತು ಬೈರನಟ್ಟಿ ಗ್ರಾಮಗಳ ನಿಯೋಗದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ‘‘ಕುಡಿಯುವ ನೀರಿನ ಸಂಬಂಧ ಅಗತ್ಯವಿರುವ ಎಲ್ಲಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು,’’ ಎಂದು ತಿಳಿಸಿದರು.
‘‘ನಾಲ್ಕೂ ಗ್ರಾಮಗಳ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಅಗತ್ಯವಾಗಿದೆ. ಈ ಹಿನ್ನೆಲೆ ಸುಣಧೋಳಿ ಗ್ರಾಮದ ರಿ.ಸ. ನಂ. 120ರಲ್ಲಿಬರುವ ಸುಮಾರು 25 ಎಕರೆ ಸರಕಾರಿ ಜಾಗ ಪಡೆದು ಸಾರ್ವಜನಿಕ ಹಿತದೃಷ್ಟಿಯಿಂದ ನೀರಾವರಿ ಇಲಾಖೆಯಿಂದ ದೊಡ್ಡ ಕೆರೆ ನಿರ್ಮಾಣ ಮಾಡಲಾಗುವುದು. ಕೆರೆ ನಿರ್ಮಾಣವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಬೋರ್ ವೆಲ್ , ಬಾವಿಗಳು ಭರ್ತಿಯಾಗುತ್ತವೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತದೆ,’’ ಎಂದು ತಿಳಿಸಿದರು.
ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ ಮತ್ತು ನಿಂಗಪ್ಪ ಕುರಬೇಟ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಪೋಟೊ 09ಜಿಕೆಕೆ4-1: ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.