ಅಧಿಕಾರಿಗಳ ಗೈರು ಖಂಡಿಸಿ ಗ್ರಾಮ ಸಭೆಗೆ ಬಹಿಷ್ಕಾರ

Contributed byarunraxidi1@gmail.com|Vijaya Karnataka
protest against absentee officials villagers boycott village meeting
ವಿಕ ಸುದ್ದಿಲೋಕ ಸಕಲೇಶಪುರ

ಗ್ರಾಮ ಸಭೆಗೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದನ್ನು ಖಂಡಿಸಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.
2026-27ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ವಳಲಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಾಧಿ ಕಾರಿ ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿ ಕಾರಿ ಆರ್ .ಚಂದ್ರಶೇಖರ್ ಅಧ್ಯಕ್ಷತೆಯಲ್ಲಿನಡೆಸಲಾಯಿತು. ಮೊದಲಿಗೆ ಸಭೆಯನ್ನು ಗ್ರಾಮಸಭೆ ನೋಡಲ್ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂದಿರಾ ಉದ್ಘಾಟಿಸಿ ಮಾತನಾಡಿ, ಸರಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಗ್ರಾಮ ಪಂಚಾಯಿತಿಯ ಆಡಳಿತದಲ್ಲಿಪಾರದರ್ಶಕತೆ ಇರಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾಯೋಜನೆ ರೂಪಿಸುವ ಉದ್ದೇಶದಿಂದ ಗ್ರಾಮಸಭೆ ನಡೆಸಲಾಗುತ್ತದೆ ಎಂದು ಹೇಳಿದರು.

ಗ್ರಾಮಸಭೆಯಲ್ಲಿತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಲು ಗ್ರಾಮಸ್ಥರು ತಮ್ಮ ಕೆಲಸಗಳನ್ನು ಬದಿಗೊತ್ತಿ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದರು. ಆದರೆ ಬೆರಳೆಣಿಕೆಯಷ್ಟು ಇಲಾಖೆಗಳ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗಿದ್ದರು. ಪಿಡಬ್ಲ್ಯೂಡಿ, ಕಂದಾಯ ಸೇರಿದಂತೆ 20ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಇದನ್ನು ಅರಿತ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಕಲೇಶಪುರ ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ವೀರೇಶ್ ವಳಲಹಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಆದರೆ ತಾಲೂಕು ಮಟ್ಟದ ಸಂಬಂಧಪಟ್ಟ ಅಧಿ ಕಾರಿಗಳೇ ಗ್ರಾಮಸಭೆಗೆ ಹಾಜರಾಗಿಲ್ಲ. ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ಅಧಿ ಕಾರಿಗಳು ಗ್ರಾಮಸಭೆಗೆ ಬಾರದಿರುವುದು ಬೇಸರದ ಸಂಗತಿ. ತಾಪಂ ಕಾರ್ಯನಿರ್ವಹಣಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರು ಈ ಬಗ್ಗೆ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಸಭೆಗಳಿಗೆ ಹಾಜರಾಗುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಕಳೆದ ಮೂರು ವರ್ಷಗಳಿಂದ ಗ್ರಾಮಸಭೆಗಳು ಸಮರ್ಪಕವಾಗಿ ನಡೆಯದಿರುವುದರಿಂದ ರೈತರು, ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸಭೆಗೆ ಕಡ್ಡಾಯವಾಗಿ ಹಾಜರಾಗಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಇಲ್ಲದಿದ್ದರೆ ತಾಲೂಕು ಪಂಚಾಯಿತಿ ಕಚೇರಿ ಎದುರೇ ಗ್ರಾಮಸಭೆ ನಡೆಸಿ ನಮ್ಮ ಸಮಸ್ಯೆಗಳನ್ನು ಅಲ್ಲಿಯೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ವಳಲಹಳ್ಳಿ ರುದ್ರೇಶ್ ಮಾತನಾಡಿ, ಪ್ರತಿ ಗ್ರಾಮಸಭೆಯಲ್ಲೂತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ನಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವ ನಿರೀಕ್ಷೆಯಲ್ಲಿರುತ್ತೇವೆ. ಆದರೆ ಇಂದು ಗ್ರಾಮಸಭೆಗೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಬಂದಿದ್ದಾರೆ. ಗ್ರಾಮಸ್ಥರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳನ್ನು ಕರೆಸಿ ಸಭೆ ನಡೆಸಬೇಕು. ಈ ಭಾಗದಲ್ಲಿಅನೇಕ ಸಮಸ್ಯೆಗಳಿದ್ದು, ಹಳೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಸಣ್ಣಪುಟ್ಟ ವಿಚಾರಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ. ಹೀಗಾಗಿ ಗ್ರಾಮಸಭೆಯನ್ನು ಬಹಿಷ್ಕರಿಸಿರಿಸುವುದಾಗಿ ಹೇಳಿದರು.

ತಾಪಂ ಮಾಜಿ ಉಪಾಧ್ಯಕ್ಷ ಕೆ.ಪಿ. ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿ, ಗ್ರಾಮಸಭೆ ಎಂದರೆ ಜನರು ತಮ್ಮ ಕೆಲಸಗಳನ್ನು ಬಿಟ್ಟು ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವ ವೇದಿಕೆ. ಆದರೆ ಸಂಬಂಧಪಟ್ಟ ಅಧಿಕಾರಿಗಳೇ ಹಾಜರಿಲ್ಲದಿದ್ದರೆ ಜನರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು. ಅಧಿಕಾರಿಗಳ ಗೈರುಹಾಜರಿಯಿಂದ ರೈತರು ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿಗ್ರಾಮಸ್ಥರು ಒಗ್ಗಟ್ಟಾಗಿ ಸಭೆಯಿಂದ ಹೊರನಡೆದು ಗ್ರಾಮಸಭೆಯನ್ನು ಬಹಿಷ್ಕರಿಸಿದರು. ಮುಂದಿನ ಗ್ರಾಮಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿತಾಲೂಕು ಮಟ್ಟದ ಅಧಿ ಕಾರಿಗಳು ಕಡ್ಡಾಯವಾಗಿ ಹಾಜರಾಗಿ ರೈತರು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಫೋಟೋ(ಊಓ8ಏ4)-

ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆಗೆ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರಾಗಿದ್ದನ್ನು ಖಂಡಿಸಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರನಡೆದು ಆಕ್ರೋಶ ವ್ಯಕ್ತಪಡಿಸಿದರು.