Intense Rivalry Between Rajanna And S Ravi Whats At Stake For The Apex Bank Presidency
(ಪ್ರಮುಖ..) ಮಾಜಿ ಸಚಿವ ರಾಜಣ್ಣ, ಎಂಎಲ್ ಸಿ ರವಿ ನಡುವೆ ತೀವ್ರ ಪೈಪೋಟಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಾದಿ: ಅಧಿಕಾರ ಹಂಚಿಕೆ ಸೂತ್ರ
Contributed by: Girish J.R|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಅಧ್ಯಕ್ಷಗಾದಿಗೆ ಆಡಳಿತಾರೂಢ ಕಾಂಗ್ರೆಸ್ ನಲ್ಲಿಪೈಪೋಟಿ ತೀವ್ರಗೊಂಡಿದ್ದು, ಪಕ್ಷದ ಹೈಕಮಾಂಡ್ ಅಧಿಕಾರ ಹಂಚಿಕೆಯ ಸೂತ್ರ ರೂಪಿಸಿದೆ.ಅಪೆಕ್ಸ್ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ (ಸೆ.10) ಚುನಾವಣೆ ನಡೆಯಲಿದ್ದು, ಮಾಜಿ ಸಚಿವ ಕೆ.ಎನ್ .ರಾಜಣ್ಣ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋದರ ಸಂಬಂಧಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎಸ್ .ರವಿ ಅವರು ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ನಡೆಸಿದ್ದಾರೆ.
ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷರಾಗಿರುವ ರಾಜಣ್ಣ ವರಿಷ್ಠರ ಮಟ್ಟದಲ್ಲಿಲಾಬಿ ನಡೆಸಿದ್ದಾರೆ. ಈಗಾಗಲೇ ದಿಲ್ಲಿಗೆ ಹೋಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯ ಎಸ್ .ರವಿ ಅವರು ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಚುನಾವಣಾ ಕಣ ರೋಚಕ ಘಟ್ಟ ತಲುಪಿದೆ.
ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಗೆ ಈ ಹಿಂದೆ ಜ.29ರಂದು ಚುನಾವಣೆ ನಿಗದಿಯಾಗಿತ್ತು. ಆಗಲೂ ಕೆ.ಎನ್ .ರಾಜಣ್ಣ ಮತ್ತು ಎಸ್ .ರವಿ ನಡುವೆ ಪೈಪೋಟಿ ನಡೆದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕರ ಸಭೆ ನಡೆಸಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಿದ್ದರು. ಆದರೆ, ನಿರ್ದೇಶಕರಲ್ಲಿಒಮ್ಮತ ಮೂಡದೆ ಸಭೆ ವಿಫಲವಾಗಿತ್ತು. ಹೀಗಾಗಿ, ಕೊನೆ ಕ್ಷಣದಲ್ಲಿಚುನಾವಣೆಯನ್ನು ಮುಂದೂಡಲಾಗಿತ್ತು.
ಹಿಂದಿನ ಬೆಳವಣಿಗೆಗಳು ಮರುಕಳಿಸದಂತೆ ಎಚ್ಚರ ವಹಿಸಿರುವ ಕಾಂಗ್ರೆಸ್ ವರಿಷ್ಠರು, ಅಧಿಕಾರ ಹಂಚಿಕೆ ಸೂತ್ರದ ಮೂಲಕ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದಾರೆ. ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಾವಧಿ 5 ವರ್ಷವಿದ್ದು, ರವಿ ಮತ್ತು ರಾಜಣ್ಣ ಅವರಿಗೆ ತಲಾ ಎರಡೂವರೆ ವರ್ಷದ ಅವಧಿಗೆ ಅಧಿಕಾರ ಹಂಚಿಕೆ ಮಾಡಲು ವರಿಷ್ಠರ ಮಟ್ಟದಲ್ಲಿತೀರ್ಮಾನವಾಗಿದೆ. ಅದರಂತೆ ಚುನಾವಣೆಗೆ ಸ್ವಲ್ಪ ಸಮಯಕ್ಕೂ ಮುನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಿ, ಅವಿರೋಧ ಆಯ್ಕೆಗೆ ಸಿದ್ಧತೆಯಾಗಿದೆ.
ಅಪೆಕ್ಸ್ ಬ್ಯಾಂಕ್ ನ ಒಟ್ಟಾರೆ 21 ನಿರ್ದೇಶಕರ ಪೈಕಿ, ಬಾಗಲಕೋಟೆ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಹೊರತುಪಡಿಸಿ ಉಳಿದ 19 ಡಿಸಿಸಿ ಬ್ಯಾಂಕ್ ಗಳು ನಾಮನಿರ್ದೇಶಿತರನ್ನು ನಿಯೋಜಿಸಿವೆ. 19 ನಿರ್ದೇಶಕರ ಪೈಕಿ 15 ಮಂದಿ ಕಾಂಗ್ರೆಸ್ ಬೆಂಬಲಿಗರಾಗಿದ್ದು, ಮೂವರು ಬಿಜೆಪಿ (ಕೊಡಗು-ಕೊಡಂದೇರ ಪಿ.ಗಣಪತಿ, ಚಿಕ್ಕಮಗಳೂರು- ಬೆಳ್ಳಿ ಪ್ರಕಾಶ್ , ಧಾರವಾಡ, ಹಾವೇರಿ ಮತ್ತು ಗದಗ ಡಿಸಿಸಿ ಬ್ಯಾಂಕ್ - ಶಿವಕುಮಾರ್ ಗೌಡ ಎಸ್ .ಪಾಟೀಲ್ ) ಮತ್ತು ಒಬ್ಬರು ಜೆಡಿಎಸ್ (ಹಾಸನ- ಸೂರಜ್ ರೇವಣ್ಣ) ಬೆಂಬಲಿತರಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಕೈ ಪಾಳಯವು ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತವಾಗಿದೆ.