ನಮ್ಮ ದೇಶ ಜಾಗತಿಕ ಮಟ್ಟದಲ್ಲಿಮುಂಚೂಣಿಗೆ ಬರಬೇಕಾದರೆ ಚೀನಾ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಸಾಧಿಸಿದ ಅಭಿವೃದ್ಧಿಯ ಮಾದರಿಯನ್ನು ಗಂಭೀರವಾಗಿ ಅಳವಡಿಸಿಕೊಳ್ಳಬೇಕಿದೆ.ಅದಕ್ಕಾಗಿ ಆಡಳಿತ ಯಂತ್ರದ ಪ್ರತಿಯೊಂದು ಹಂತದಲ್ಲೂಬೇರೂರಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕಿದೆ. ಸರಕಾರದ ಸೌಲಭ್ಯಗಳು, ಅನುದಾನಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನಸಾಮಾನ್ಯರಿಗೆ ತಲುಪುವ ಪಾರದರ್ಶಕ ವ್ಯವಸ್ಥೆ ನಿರ್ಮಾಣವಾಗಬೇಕು.
ಅಭಿವೃದ್ಧಿ ಕೇವಲ ನಗರ ಕೇಂದ್ರಿತವಾಗದೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಹಳ್ಳಿ ಹಳ್ಳಿಗೂ ಗುಣಮಟ್ಟದ, ದೀರ್ಘ ಬಾಳಿಕೆಯ ಡಾಂಬರ್ ರಸ್ತೆಗಳ ಸಂಪರ್ಕ ಕಲ್ಪಿಸುವುದು ಅತ್ಯಗತ್ಯ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲೂಆಧುನಿಕ ವೈದ್ಯಕೀಯ ಉಪಕರಣಗಳು, ಅಗತ್ಯ ಔಷಧ ಹಾಗೂ ನುರಿತ ವೈದ್ಯರನ್ನೊಳಗೊಂಡ ಸುಸಜ್ಜಿತ ಸರಕಾರಿ ಆಸ್ಪತ್ರೆಗಳು ತಲೆಯೆತ್ತಬೇಕು.