ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವತಿಯಿಂದ ಸೆ.27 ಮತ್ತು ಅ.2 ರಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾಳಜಿಯ ಎರಡು ನೃತ್ಯ-ನಾಟಕಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.ವಾದಿರಾಜರ ಕೊಡುಗೆ ಪಾಂಡಿತ್ಯ ಮತ್ತು ಭಕ್ತಿಗೆ ಮಾತ್ರ ಸೀಮಿತಾಗಿರಲಿಲ್ಲ. ಉಡುಪಿಯ ಶ್ರೀ ಕೃಷ್ಣ ಮಠದ ವ್ಯವಸ್ಥೆ ಮತ್ತು ಆಚರಣೆಗಳಲ್ಲಿಬದಲಾವಣೆಗಳನ್ನು ತಂದ ಅವರು, ಅಷ್ಟಮಠಗಳ ಮೂಲಸೌಕರ್ಯ ಅಭಿವೃದ್ಧಿಗೂ ಕೊಡುಗೆ ನೀಡಿದರು. ಅವರ ಜೀವನ, ಭಕ್ತಿ ಹಾಗೂ ಪವಾಡಗಳ ಲೋಕವನ್ನು ಅನಾವರಣಗೊಳಿಸುವ ‘ಸ್ವಪ್ನ ವೃಂದಾವನ’ ನೃತ್ಯ-ನಾಟಕವನ್ನು ಸೆ.27ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿಪ್ರದರ್ಶಿಸಲಾಗುತ್ತಿದೆ. 85 ನಿಮಿಷಗಳ ಅದ್ಧೂರಿ ದೃಶ್ಯಕಾವ್ಯ ಇದಾಗಿದೆ. ಭರತ್ ಪ್ರಭಾತ್ ಹಾಗೂ ಶರತ್ ಪ್ರಭಾತ್ ಅವರು ಇದನ್ನು ರಚಿಸಿ ನಿರ್ದೇಶಿಸಿದ್ದಾರೆ. ಸಾಂಪ್ರದಾಯಿಕ ನೃತ್ಯ-ರೂಪಕದ ಜತೆಗೆ ಆಕಾಶದಲ್ಲಿಹಾರುವ ತಂತ್ರಗಳು ಹಾಗೂ ಆಧುನಿಕ ರಂಗ ತಂತ್ರಜ್ಞಾನದ ಬಳಕೆ ಇದರಲ್ಲಿದೆ.
ಅ.2ರಂದು ಕೋಣನಕುಂಟೆಯ ಪಿಸಿಪಿಎ ಸಭಾಂಗಣದಲ್ಲಿಮಹಾಭಾರತದ 18 ದಿನಗಳ ಕುರುಕ್ಷೇತ್ರ ಯುದ್ಧದ ಕಥಾನಕ ಆಧರಿಸಿದ ‘18 ಡೇಸ್ ’ ರಂಗ ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ರೋಟರಿ 3191 ಹಾಗೂ ಪ್ರಭಾತ್ ಆರ್ಟ್ಸ್ ಸಹಯೋಗದಲ್ಲಿಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.