ವಿಕ ಸುದ್ದಿಲೋಕ ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಪುರಲೆ, ನವುಲೆ, ಗೋಪಿಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಹಳ್ಳಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕಾಲ ಕೂಡಿಬಂದಿದೆ. ಕೇಂದ್ರ ಪುರಸ್ಕೃತ ಅಮೃತ -2.0 ಯೋಜನೆಯಡಿ ನಗರದ ಐದು ಜಲಮೂಲಗಳನ್ನು ಪುನಶ್ಚೇತನಗೊಳಿಸಲು 20.50 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಅದರಲ್ಲಿಪುರಲೆ, ನವುಲೆ, ತ್ಯಾವರಚಟ್ನಹಳ್ಳಿ ಮತ್ತು ಗೋಪಿಶೆಟ್ಟಿಕೊಪ್ಪ ಕೆರೆಗಳಿಗೆ ಅನುದಾನ ನಿಗದಿಪಡಿಸಲಾಗಿದೆ. ಆದರೆ, ಹರಿಗೆ ಕೆರೆಯು ನಗರ ವ್ಯಾಪ್ತಿಯಿಂದ ಹೊರಗುಳಿದ ಕಾರಣಕ್ಕೆ ಅನುದಾನ ಒದಗಿಸಿಲ್ಲ. ಹೀಗಾಗಿ ಹರಿಗೆ ಕೆರೆಯನ್ನು ಯೋಜನೆಯಿಂದ ಕೈಬಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಭದ್ರಾವತಿ ನಗರಸಭೆ ವ್ಯಾಪ್ತಿಯ ಜಲಮೂಲಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿಸ್ತೃತ ಯೋಜನಾ ವರದಿಗಳ ಪರಿಶೀಲನಾ ಸಭೆಯಲ್ಲಿಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ಕೆರೆಗಳ ಸ್ಥಳಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿರುವುದರಿಂದ ಡಿಪಿಆರ್ ಅಂದಾಜು ಮೊತ್ತವು ಅನುಮೋದಿತ ಕ್ರಿಯಾ ಯೋಜನೆ ಮೊತ್ತಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿ ಮೊತ್ತವನ್ನು ಮಹಾನಗರ ಪಾಲಿಕೆ ಅನುದಾನದಡಿ ಭರಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರ ಸಲಹೆಯನ್ನು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮುಂದಿನ ಎರಡು ದಶಕಗಳ ಅವಧಿಯಲ್ಲಿಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು. ಪ್ರತಿ ಕೆರೆಯ ಅಭಿವೃದ್ಧಿ ಕೈಗೆತ್ತಿಕೊಳ್ಳುವ ಮುನ್ನ ಕೆರೆಯ ಸುತ್ತಲು ಇರುವ ಒಳಚರಂಡಿ ಜಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿ ಪುರುಷೋತ್ತಮ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ಆಶಾ ಕುಮಾರಿ, ಪಾಲಿಕೆ ಎಂಜಿನಿಯರ್ ತೇಜೂಪ್ರಸಾದ್ , ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಶಿಲ್ಪಾ ಮತ್ತಿತರರು ಇದ್ದರು.

