10ಮಹೇಶ5
‘ಶಾಂತರಂಗ’ ನಾಟಕಕಾರ ಪ್ರಶಸ್ತಿ ಪ್ರದಾನ
ವಿಕ ಸುದ್ದಿಲೋಕ ಧಾರವಾಡ
ಕನ್ನಡದ ಆದ್ಯ ನಾಟಕಕಾರ, ಕವಿ ಹಾಗೂ ಕೀರ್ತನಕಾರ ಶಾಂತಕವಿ ಸಕ್ಕರಿ ಬಾಳಾಚಾರ್ಯ ಅವರ 106ನೇ ಪುಣ್ಯತಿಥಿ ಹಾಗೂ ಶಾಂತಕವಿಗಳ ಹೆಸರಿನಲ್ಲಿಸಂಸ್ಥೆ ಸ್ಥಾಪಿಸಿರುವ ‘ಶಾಂತರಂಗ’ ನಾಟಕಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾ. 12ರಂದು ಸಂಜೆ 5:30ಕ್ಕೆ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿಆಯೋಜಿಸಲಾಗಿದೆ ಎಂದು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಕಾರ್ಯದರ್ಶಿ ಹನುಮೇಶ ಸಕ್ಕರಿ ಹೇಳಿದರು.
ನಗರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾರ್ಯಕ್ರಮದಲ್ಲಿಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಅಧ್ಯಕ್ಷ ಎಸ್ . ಬಾಬುರಾವ್ ಅಧ್ಯಕ್ಷತೆ ವಹಿಸುವರು. ರಂಗಕರ್ಮಿ ಪ್ರಜ್ಞಾ ಮತ್ತಿಹಳ್ಳಿ ಮುಖ್ಯ ಅತಿಥಿಗಳಾಗಿದ್ದು, ತೀರ್ಪುಗಾರರ ಅಭಿಪ್ರಾಯ ತಿಳಿಸಲಿದ್ದಾರೆ. ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದರು.
ನೀನಾಸಂ ಹೆಗ್ಗೂಡು ರಂಗ ನಿರ್ದೇಶಕ ಹಾಗೂ ಅಧ್ಯಕ್ಷ ಕೆ.ವಿ. ಅಕ್ಷರ ಪ್ರಶಸ್ತಿ ಪ್ರದಾನ ಮಾಡುವರು.ಬೆಳಗಾವಿಯ ಶಿರೀಶ್ ಜೋಶಿ ಅವರು ಕಂಠಿಹಾರ ನಾಟಕ ರಚಿಸಿ ಶಾಂತರಂಗ ನಾಟಕಕಾರ ಪ್ರಶಸ್ತಿ-2025ಕ್ಕೆ ಭಾಜನರಾಗಿದ್ದಾರೆ. ಕೊಪ್ಪಳದ ಈಶ್ವರ ಹತ್ತಿ,ಬೆಂಗಳೂರಿನ ಎನ್ . ಧೀರೇಂದ್ರ ಅವರ ಕೃತಿಗೆ ಬಹುಮಾನ ನೀಡಲಾಗುವುದು ಎಂದರು.
ಅಂತಿಮ ಆಯ್ಕೆ ಸಮಿತಿ ಸದಸ್ಯ ಕೇಂದ್ರಿಯ ವಿವಿಯ ಡಾ. ಬಸವರಾಜ ಡೋಣೂರ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಡಾ. ವೆಂಕಟರಮಣ ಐತಾಳ, ಡಾ. ಪ್ರಜ್ಞಾ ಮತ್ತಿಹಳ್ಳಿ ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.
ಪ್ರಥಮ ಪ್ರಶಸ್ತಿಯ ಮೊತ್ತ 15,000 ರೂ. ಗಳನ್ನು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ವತಿಯಿಂದ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕೃತಿಗಳಿಗೆ ತಲಾ 2,500 ರೂ. ಗಳನ್ನು ಅಭಿನಯ ಭಾರತಿ ಧಾರವಾಡ ಅವರು ಕೊಡುತ್ತಾರೆ ಎಂದರು.ಸುದ್ದಿಗೋಷ್ಠಿಯಲ್ಲಿಸಮೀರ ಜೋಶಿ, ಡಾ. ಶಶಿಧರ ನರೇಂದ್ರ ಇದ್ದರು.

