ವಿಕ ಸುದ್ದಿಲೋಕ ಶಿವಮೊಗ್ಗ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ ಯನ್ನು ಸಾರ್ವಜನಿಕ ವಿಶ್ವವಿದ್ಯಾಲಯ ಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ನಿರಾಕರಿಸಿರುವುದು ತಾರತಮ್ಯ ನಡೆಯಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಖಂಡಿಸಿದೆ. ರಾಜ್ಯ ಸರಕಾರ 2006ರ ಒಳಗೆ ಅರ್ಜಿ ಸಲ್ಲಿಸಿ ನಂತರ ನೇಮಕವಾದ ರಾಜ್ಯ ಸರಕಾರಿ ನೌಕರರು ಹಾಗೂ ಪದವಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆ ವಿಸ್ತರಿಸಿರುವುದು ಹಾಗೂ ಎಲ್ಲಸರಕಾರಿ ನೌಕರರಿಗೂ ಇದನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಇದನ್ನು ನಿರಾಕರಿಸುವುದು ಸರಕಾರದ ತಾರತಮ್ಯ ನಡೆ ಹಾಗೂ ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ ಎಂದು ಸಂಘ ಪ್ರಕಟಣೆಯಲ್ಲಿತಿಳಿಸಿದೆ. ಸರಕಾರದ 31.03.2006ರ ಆದೇಶದ ಮೂಲಕ ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್ ) ಜಾರಿ ಮಾಡುವಾಗ ‘ಸರಕಾರಿ ನೌಕರರು’ ಎಂದು ಮಾತ್ರ ಉಲ್ಲೇಖಿಸಿದ್ದರೂ ಸಹ, ಅದನ್ನು ಈ ಹಿಂದೆ ಹಳೆ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದ ವಿವಿಗಳ ನೌಕರರಿಗೂ ಅನ್ವಯಿಸಿದೆ. ಇದು ಸರಕಾರವೇ ವಿವಿ ನೌಕರರನ್ನು ರಾಜ್ಯ ಸರಕಾರಿ ನೌಕರರಿಗೆ ಸಮಾನರೆಂದು ಪರಿಗಣಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಆದರೆ, ಒಪಿಎಸ್ ಜಾರಿ ಮಾಡುವಾಗ ವಿವಿ ನೌಕರರನ್ನು ಹೊರಗಿಟ್ಟಿರುವುದು ನ್ಯಾಯಸಮ್ಮತವಲ್ಲಎಂದು ಪ್ರಕಟಣೆ ತಿಳಿಸಿದೆ. ಉನ್ನತ ಶಿಕ್ಷಣ ಇಲಾಖೆ ಆದೇಶದಂತೆ ಸರಕಾರಿ ಪದವಿ ಕಾಲೇಜುಗಳ ಹಾಗೂ ಸಾರ್ವಜನಿಕ ವಿವಿ ಅಧ್ಯಾಪಕರಿಗೆ ಯುಜಿಸಿ 7ನೇ ವೇತನ ಆಯೋಗದ ಶಿಫಾರಸ್ಸುಗಳು ಸಮಾನವಾಗಿ ಅನ್ವಯಿಸಿವೆ. ಈ ಆದೇಶದಂತೆ ಪಿಂಚಣಿ ಸೇರಿದಂತೆ ಎಲ್ಲಸೇವಾ ಸೌಲಭ್ಯಗಳು ರಾಜ್ಯ ಸರಕಾರದ ನಿಯಮದಂತೆ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದನ್ನೆ ರಾಜ್ಯಪಾಲರಿಂದ ಅನುಮೋದಿತ ಕುವೆಂಪು ವಿವಿ ಪರಿನಿಯಮ ಗಳು-2022ರಲ್ಲಿಯೂ ತಿಳಿಸಿದೆ. ಪಂಜಾಬ್ ಮತ್ತು ಹರಿಯಣ ಹೈಕೋರ್ಟ್ ಇಂತಹುದೆ ಪ್ರಕರಣದಲ್ಲಿವಿವಿ ನೌಕರರ ಪರವಾಗಿ ತೀರ್ಪು ನೀಡಿ, ಅಲ್ಲಿನ ಸರಕಾರದ ಕ್ರಮವನ್ನು ಕಾನೂನುಬಾಹಿರ ಎಂದು ತಿಳಿಸಿದೆ. ಜತೆಗೆ ನೌಕರರನ್ನು ಅನಗತ್ಯವಾಗಿ ನ್ಯಾಯಾಲಯಕ್ಕೆ ಎಳೆದಿದ್ದಕ್ಕೆ 5 ಲಕ್ಷ ರೂ. ವೆಚ್ಚ ಸರಕಾರವೆ ಭರಿಸುವಂತೆ ಆದೇಶಿಸಿದೆ. ರಾಜ್ಯದಲ್ಲಿಇಂತಹ ಸ್ಥಿತಿ ನಿರ್ಮಾಣವಾಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಸಂಘ ಆಗ್ರಹಿಸಿದೆ. ಈ ಹಿನ್ನೆಲೆ ವಿವಿಗಳ ಅರ್ಹ ಬೋಧಕ ಹಾಗೂ ಬೋಧಕೇತರ ನೌಕರರಿಗೂ ಒಪಿಎಸ್ ವಿಸ್ತರಿಸುವಂತೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಸರಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಘ ಮನವಿ ಮಾಡಿದ್ದು, ತಾರತಮ್ಯ ಸರಿಪಡಿಸದಿದ್ದಲ್ಲಿಹೋರಾಟ ಹಾದಿ ತುಳಿಯುವ ಜತೆಗೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿಎಚ್ಚರಿಸಿದೆ.

