ಕದನ ವಿರಾಮ ಮಾತುಕತೆ ಮುರಿದ ಬಳಿಕ ಅಮೆರಿಕ-ಇರಾನ್ ನಡುವೆ ಹರ್ಮುಜ್ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನಗಳು ಶತ್ರು ದೇಶವನ್ನು ಮಾರಕ ಸುಳಿಗೆ ಸಿಲುಕಿಸಿ, ಮುಳುಗಿಸಲಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಜಲಸಂಧಿ ಮೇಲೆ ಹಿಡಿತ ಸಾಧಿಸುವಂತೆ ನೌಕಾಪಡೆಗೆ ಆದೇಶ ನೀಡಿದ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕೆಂಡಾಮಂಡಲವಾಗಿರುವ ಇರಾನ್ ನ ಐಆರ್ ಜಿಸಿ ನೌಕಾಪಡೆ, ‘‘ಹರ್ಮುಜ್ ಜಲಮಾರ್ಗ ನಮ್ಮ ನಿಯಂತ್ರಣದಲ್ಲಿದೆ. ರೆವಲ್ಯೂಷನರಿ ಗಾರ್ಡ್ ಕಾಫ್ಸ್ ರ್ ಹಡಗುಗಳ ಸಂಚಾರ ನಿರ್ವಹಣೆ ಮಾಡುತ್ತಿದೆ. ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡುವ ಯಾವುದೇ ಪಡೆಗಳು ಸಾಗರದಲ್ಲಿರುವ ಮಾರಕ ಸುಳಿಗೆ ಸಿಲುಕಲಿವೆ,’’ ಎಂದು ಎಚ್ಚರಿಸಿದೆ.
ಜಲಮಾರ್ಗದಲ್ಲಿಸಂಚರಿಸುವ ಹಡಗುಗಳಿಂದ ಶುಲ್ಕ ವಸೂಲಿ ಮಾಡಲು ಇರಾನ್ ಗೆ ಬಿಡುವುದಿಲ್ಲ. ಮುಕ್ತ ಸಂಚಾರ ಖಾತರಿಪಡಿಸಲು ಜಲಮಾರ್ಗ ನಿಯಂತ್ರಿಸಿ ಎಂದು ಅಮೆರಿಕ ನೌಕಾಪಡೆಗೆ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದರು.

