ಬೇಸಿಗೆಗೆ ಹಿತ ಬೊಟಾನಿಕಲ್ ಐಸ್ ಕ್ಯೂಬ್
---
ಇಂಟ್ರೊ: ಹೂವು, ಸಸ್ಯಗಳನ್ನು ಒಳಗೊಂಡ ಐಸ್ ಕ್ಯೂಬ್ ಗಳು ಬೇಸಿಗೆಯ ಪಾನೀಯಗಳ ಆಕರ್ಷಣೆ ಹೆಚ್ಚಿಸುತ್ತವೆ.
---
ಲವಲವಿಕೆ ಸುದ್ದಿಲೋಕ
--
ತಂಪು ಪಾನೀಯಗಳ ಅಂದವನ್ನು ಹೆಚ್ಚಿಸುವ ಮತ್ತು ಹೊಸ ಸ್ವಾದ ನೀಡುವ ಬೊಟಾನಿಕಲ್ ಐಸ್ ಕ್ಯೂಬ್ ಬೇಸಿಗೆಯ ಹಾಟ್ ಫುಡ್ ಟ್ರೆಂಡ್ .
ಇತ್ತೀಚಿನ ದಿನಗಳಲ್ಲಿಆಹಾರವನ್ನು ಕೇವಲ ರುಚಿಗಷ್ಟೇ ಅಲ್ಲದೆ, ಅಲಂಕಾರಿಕವಾಗಿಯೂ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿಐಸ್ ಕ್ಯೂಬ್ ಗಳು ವರ್ಣರಂಜಿತವಾಗಿ ಸಿಂಗಾರಗೊಂಡು ಸೆಳೆಯುತ್ತಿವೆ. ಮದುವೆ, ಹುಟ್ಟುಹಬ್ಬದಂತಹ ಸಮಾರಂಭಗಳಲ್ಲಿನೀಡುವ ಪಾನೀಯಗಳ ಜೊತೆಗೆ ಸುಂದರ ಸಂಯೋಜನೆಯಾಗಿ ಬೊಟಾನಿಕಲ್ ಐಸ್ ಕ್ಯೂಬ್ ಗಳು ಮುದ ನೀಡುತ್ತವೆ.
ವೈವಿಧ್ಯಮಯ ಸಂಯೋಜನೆ
ಕೆಲವು ತಂಪು ಪಾನೀಯಗಳಿಗೆ ಐಸ್ ಕ್ಯೂಬ್ ಗಳನ್ನು ಹಾಕಿಕೊಂಡು ಇನ್ನಷ್ಟು ತಂಪಾಗಿಸಿಕೊಂಡು ಸವಿಯುವುದು ಕೆಲವರಿಗೆ ಅಭ್ಯಾಸ. ಆದರೆ ಕೆಲವು ಹೂವು, ಸಸ್ಯ, ಹಣ್ಣುಗಳನ್ನು ಸೇರಿಸಿ ತಯಾರಿಸಿದ ಐಸ್ ಕ್ಯೂಬ್ ಗಳು ಪಾನೀಯಕ್ಕೆ ಹೊಸ ಸ್ವಾದ ನೀಡುವುದರ ಜೊತೆಗೆ ಆರೋಗ್ಯಕರವೂ ಹೌದು.
ಮಾವಿನ ಹಣ್ಣಿನ ಜ್ಯೂಸ್ ಅಥವಾ ಮಾಕ್ಟೇಲ್ ಗಳಿಗಾಗಿ ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಐಸ್ ಕ್ಯೂಬ್ ನಲ್ಲಿಫ್ರೀಜ್ ಮಾಡಿ. ಇದು ಕುಡಿಯುವಾಗ ಹಂತ ಹಂತವಾಗಿ ವಿಭಿನ್ನ ರುಚಿ ನೀಡುತ್ತದೆ. ಪುದೀನಾ ಎಲೆಗಳ ಜೊತೆ ಸಣ್ಣ ನಿಂಬೆ ಹಣ್ಣಿನ ಹೋಳು ಅಥವಾ ದಾಳಿಂಬೆ ಕಾಳುಗಳನ್ನು ಸೇರಿಸಿ. ಇದು ನೋಡಲು ಬಣ್ಣಬಣ್ಣವಾಗಿ ಕಾಣುವುದಲ್ಲದೆ, ರಿಫ್ರೆಶಿಂಗ್ ಅನುಭವ ನೀಡುತ್ತದೆ. ನಿಂಬೆ ಹಣ್ಣಿನ ಶರಬತ್ತಿಗೆ ಪುದೀನಾ ಅಥವಾ ನೀಲಿ ಬಣ್ಣದ ಶಂಖಪುಷ್ಪದ ದಳಗಳನ್ನು ಬಳಸಿದರೆ ನೋಡಲು ಆಕರ್ಷಕ. ದೇಹಕ್ಕೆ ತಂಪು.
ಆಕರ್ಷಕ ಅಲಂಕಾರ
ಐಸ್ ಕ್ಯೂಬ್ ತಯಾರಿಸುವ ನೀರಿಗೆ ದ್ರವ ರೂಪದ ಸ್ವಾದ ಸೇರಿಸುವ ಬದಲು ಇಡಿಯಾದ ಹೂವು, ಹಣ್ಣು ಅಥವಾ ಬೇಕಾದ ಪದಾರ್ಥವನ್ನು ನೀರಿನ ಮೇಲೆ ಇಡುವುದರಿಂದ ಬಳಸಿದ ಪದಾರ್ಥ ಅದರದ್ದೇ ನೈಸರ್ಗಿಕ ಬಣ್ಣ, ಆಕಾರದಲ್ಲಿಕಾಣಿಸುತ್ತದೆ. ಹೀಗಾಗಿ ಇಲ್ಲಿಆಕರ್ಷಣೆಯೇ ಪ್ರಧಾನ. ಐಸ್ ಕ್ಯೂಬ್ ಗಳು ಹರಳುಗಳಂತೆ ಪಾರದರ್ಶಕವಾಗಿ ಕಾಣಬೇಕೆಂದರೆ ಕುದಿಸಿ ಆರಿಸಿದ ನೀರು ಬಳಸಿ. ಇದರಿಂದ ನೀರಿನಲ್ಲಿರುವ ಗಾಳಿಯ ಗುಳ್ಳೆಗಳು ಕಡಿಮೆಯಾಗಿ ಐಸ್ ಸ್ಪಷ್ಟವಾಗಿ ಕಾಣುತ್ತದೆ. ಗುಲಾಬಿ, ಸೌತೆಕಾಯಿ, ಶಂಖ ಪುಷ್ಪ, ಮಲ್ಲಿಗೆ, ಪುದೀನಾ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಬಾಕ್ಸ್
ಆರೋಗ್ಯಕರ ಗುಣ
ಬೊಟಾನಿಕಲ್ ಐಸ್ ಗಾಗಿ ಬಳಸುವ ಹೂವುಗಳು ಕೇವಲ ಅಲಂಕಾರಕ್ಕಷ್ಟೇ ಅಲ್ಲದೆ, ಅವುಗಳದ್ದೇ ಆದ ಔಷಧಿಧೀಯ ಗುಣಗಳನ್ನು ಹೊಂದಿರುತ್ತವೆ. ಬಳಸಿದ ಹೂವುಗಳು ನೀರಿನಲ್ಲಿಕರಗುತ್ತಾ ಹೋದಂತೆ ಅವುಗಳಲ್ಲಿರುವ ನೈಸರ್ಗಿಕ ಸತ್ವಗಳು ಪಾನೀಯವನ್ನು ಸೇರುತ್ತವೆ. ಗುಲಾಬಿ ದಳಗಳು ಅಥವಾ ಮಲ್ಲಿಗೆಯಂತಹ ಹೂವುಗಳ ಸೌಮ್ಯ ಸುಗಂಧವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ. ದಾಸವಾಳದ ಹೂವುಗಳು ದೇಹವನ್ನು ತಂಪಾಗಿಸಲು ನೆರವಾಗುತ್ತವೆ. ಶಂಖಪುಷ್ಪವು ಪಾನೀಯಕ್ಕೆ ಸುಂದರವಾದ ನೀಲಿ ಬಣ್ಣವನ್ನು ನೀಡುತ್ತದೆ. ಲಾವೆಂಡರ್ ಆಹ್ಲಾದಕರ ಪರಿಮಳಕ್ಕೆ ಹೆಸರುವಾಸಿ. ಈಗಾಗಲೇ ಖ್ಯಾತವಾಗಿರುವ ಇನ್ ಫ್ಯೂಸ್ಡ್ ವಾಟರ್ ಅಂದರೆ ಕುಡಿಯುವ ನೀರಿಗೆ ಗಿಡಮೂಲಿಕೆ, ಹಣ್ಣು, ತರಕಾರಿಗಳನ್ನು ಸೇರಿಸಿಕೊಂಡು ನೀರನ್ನು ಸೇವಿಸುವ ವಿಧಾನದಂತೆ ಬೊಟಾಲಿಕಲ್ ಐಸ್ ನ ಪ್ರಯೋಜನ ಪಡೆಯಬಹುದು.

