ಗವ್ವಲು
ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನಪ್ರಿಯ ಸಾಂಪ್ರದಾಯಿಕ ಸಿಹಿ ತಿನಿಸು ಗವ್ವಲು ನೋಡುವಾಗ ಕವಡೆಯಂತೆ ಕಾಣುತ್ತದೆ. ಅತಿ ಕಡಿಮೆ ಸಾಮಗ್ರಿಗಳಿಂದ ತಯಾರಿಸಲಾಗುವ ಇದನ್ನು ಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿಮಾಡಲಾಗುತ್ತದೆ. ಗವ್ವಲ ಚೆಕ್ಕದಲ್ಲಿ(ಮರದ ಮಣೆ) ಕವಡೆ ಆಕಾರ ಮೂಡಿಸುವುದು ಈ ತಿಂಡಿಯ ಆಕರ್ಷಣೆ.
ಸಾಮಗ್ರಿ: ಗೋಧಿ ಹಿಟ್ಟು-2 ಕಪ್ , ಚಿರೋಟಿ ರವೆ-ಕಾಲು ಕಪ್ , ಬೆಲ್ಲ-1 ಕಪ್ , ತುಪ್ಪ-3 ಚಮಚ, ಉಪ್ಪು-ಕಾಲು ಚಮಚ.
ವಿಧಾನ: ಗೋಧಿ ಹಿಟ್ಟಿಗೆ ಚಿರೋಟಿ ರವೆ, ಉಪ್ಪು, ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಮುಚ್ಚಿಡಿ. ನಂತರ ಈ ಹಿಟ್ಟನ್ನು ಮತ್ತೊಮ್ಮೆ ನಾದಿ ಚಿಕ್ಕ ಚಿಕ್ಕ ಗೋಲಿಗಳನ್ನು ಮಾಡಿಡಿ. ನಂತರ ಒಂದೊಂದೇ ಗೋಲಿಯನ್ನು ಮಣೆಯ ಮೇಲಿಟ್ಟು ಹೆಬ್ಬೆಟ್ಟಿನಿಂದ ತೀಡಿ ಸುರುಳಿದರೆ ಕವಡೆ ಆಕಾರ ಬರುತ್ತದೆ. ಮಣೆ ಇಲ್ಲದಿದ್ದರೆ ಹಪ್ಪಳ ತೆಗೆಯುವ ಕಂಬಿ ಜಾಲರಿಯ ಮೇಲೆ ಒತ್ತಿ ತೆಗೆಯಬಹುದು. ಹೀಗೆ ತಯಾರಾದ ಕವಡೆಗಳನ್ನು ಕಾದ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಬಾಣಲೆಯಲ್ಲಿಬೆಲ್ಲಹಾಕಿ ಕಾಲು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಇದು ಒಂದೆಳೆ ಪಾಕ ಬಂದಾಗ ಉರಿ ಆರಿಸಿ ಕರಿದಿಟ್ಟ ಕವಡೆಗಳನ್ನು ಪಾಕದಲ್ಲಿಹಾಕಿ ಚೆನ್ನಾಗಿ ಹೊರಳಿಸಿ. ತಣಿದ ನಂತರ ಒಂದೊಂದೇ ಕವಡೆಗಳನ್ನು ಬೇರ್ಪಡಿಸಿದರೆ ಸಿಹಿಯಾದ ಗರಿಗರಿ ಗವ್ವಲು ರೆಡಿ.

