ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಶರಣಗೌಡ ಕಂದಕೂರ
ಪರಿಹಾರ ಘೋಷಣೆಯಲ್ಲಿಸಿಎಂ ತಾರತಮ್ಯ
ವಿಕ ಸುದ್ದಿಲೋಕ ಯಾದಗಿರಿ
ದುರ್ಘಟನೆಗಳಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡುವಲ್ಲಿಮಲತಾಯಿ ಧೋರಣೆಯನ್ನು ಸಿಎಂ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಶಾಸಕರು, ಮಾರ್ಚ್ 29ರಂದು ಬಿಸಿಲಿನ ತಾಪದ ಕಾರಣ ಕೃಷಿ ಹೊಂಡದಲ್ಲಿಈಜಾಡಲು ಹೋಗಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಂದೇ ಕುಟುಂಬದ 4 ಮಕ್ಕಳು ಮೃತಪಟ್ಟಿದ್ದಾರೆ. ಅದೇ ರೀತಿ ಏ.17ರಂದು ಸುರಪುರ ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನದ ದರ್ಶನಕ್ಕೆ ಹೋಗಿದ್ದ ರಾಯಚೂರು ಜಿಲ್ಲೆಯ ಸಿರವಾರ ಗ್ರಾಮದ ಒಂದೇ ಕುಟುಂಬದ 9 ಜನರು ರಸ್ತೆ ಅಪಘಾತದಲ್ಲಿಸಜೀವ ದಹನಗೊಂಡಿದ್ದಾರೆ. ಆದರೆ ಮೊದಲನೆ ಘಟನೆ ನಡೆದು 20 ದಿನಗಳು ಮತ್ತು ಎರಡನೇ ದುರ್ಘಟನೆ ನಡೆದ 4 ದಿನಗಳು ಕಳೆದರೂ ಮೃತಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡುವುದಾಗಲಿ ಅಥವಾ ಕನಿಷ್ಠ ಸಾಂತ್ವನ ತಿಳಿಸುವುದಾಗಲಿ ಮಾಡದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಏ.19ರಂದು ಸಿಎಂ ಸ್ವಂತ ಜಿಲ್ಲೆಯಾದ ಮೈಸೂರಲ್ಲಿಬಿಸಿಲಿನ ತಾಪದಿಂದ ಕೆರೆಯಲ್ಲಿಈಜಾಡಲು ಹೋಗಿ 6 ಜನ ಮೃತಪಟ್ಟ ತಕ್ಷಣವೇ ಸಾಮಾಜಿಕ ಜಾಲತಾಣದ ಮೂಲಕ ಸಾಂತ್ವಾನ ತಿಳಿಸಿ, ಮೃತರ ಕುಟುಂಬಗಳಿಗೆ ತಲಾ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಇಂಥ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ಇವರು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳೋ ಎನ್ನುವ ಅನುಮಾನ ಮೂಡುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿ ಸಾಂತ್ವನ ಹೇಳಬೇಕು ಎಂದು ಆಗ್ರಹಿಸಿದ್ದಾರೆ.

