ವೃತ್ತಿಜೀವನದ ಗೊಂದಲ
ಇದು ಬಿಕ್ಕಟ್ಟಲ್ಲ, ಬದಲಾವಣೆಯ ಸಂಕೇತ
ಇಂಟ್ರೋ
ವೃತ್ತಿಜೀವನ ಎಂಬುದು ಕೇವಲ ಹಣ ಗಳಿಸುವ ಅವಧಿಯಲ್ಲಿ. ಅದು ಜೀವನದ ಬಹುಪಾಲು ಸಮಯವನ್ನು ಆಕ್ರಮಿಸಿಕೊಳ್ಳುವ ಪ್ರಮುಖ ಭಾಗ. ಈ ಪಯಣದಲ್ಲಿಎದುರಾಗುವ ದೊಡ್ಡ ಅಡೆತಡೆಯೇ ‘ಕರಿಯರ್ ಕ್ರೈಸಿಸ್ ’. ಇದರ ಕುರಿತಾದ ವಿವರಣೆ ಇಲ್ಲಿದೆ.
ದಶಕಗಳ ಹಿಂದೆ, ಒಮ್ಮೆ ಕೆಲಸಕ್ಕೆ ಸೇರಿದರೆ ನಿವೃತ್ತಿಯವರೆಗೆ ಅದೇ ಕ್ಷೇತ್ರದಲ್ಲಿಮುಂದುವರಿಯುವುದು ವಾಡಿಕೆಯಾಗಿತ್ತು. ಆದರೆ ಇಂದು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಪ್ರಪಂಚ ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಆಟೊಮೇಷನ್ ಹಳೆಯ ಉದ್ಯೋಗಗಳನ್ನು ನುಂಗಿ ಹಾಕುತ್ತಿವೆ. ಇದು ಅನೇಕರಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾಗುವಂತೆ ಮಾಡಿದೆ.
ಓರ್ವ ವ್ಯಕ್ತಿ ತನ್ನ ಕೆಲಸ ಅಥವಾ ವೃತ್ತಿಜೀವನದ ಹಾದಿಯ ಬಗ್ಗೆ ತೀವ್ರವಾದ ಅಸಮಾಧಾನ, ಗೊಂದಲ ಅಥವಾ ಅನಿಶ್ಚಿತತೆಯನ್ನು ಅನುಭವಿಸುವ ಹಂತವನ್ನು ವೃತ್ತಿಜೀವನದ ಬಿಕ್ಕಟ್ಟು ಅಥವಾ ಕರಿಯರ್ ಕ್ರೈಸಿಸ್ ಎಂದು ಕರೆಯಲಾಗುತ್ತದೆ. ಮಾಡುತ್ತಿರುವ ಉದ್ಯೋಗವು ಜೀವನದ ಗುರಿಗಳು, ಆಸಕ್ತಿಗಳು ಅಥವಾ ಮೌಲ್ಯಗಳಿಗೆ ಹೊಂದಿಕೆಯಾಗುತ್ತಿಲ್ಲಎಂದು ಅನಿಸಿದಾಗ ಉಂಟಾಗುವ ಮಾನಸಿಕ ಸಂಘರ್ಷ ಇದಾಗಿದೆ. ಈ ಮಾನಸಿಕ ಸ್ಥಿತಿಯು ಸಾಮಾನ್ಯವಾಗಿ ವೃತ್ತಿಜೀವನದ ಮಧ್ಯಭಾಗದಲ್ಲಿಅಥವಾ ಆರಂಭಿಕ ಹಂತದಲ್ಲಿಕಾಣಿಸಿಕೊಳ್ಳಬಹುದು.
ವೃತ್ತಿಜೀವನದ ಗೊಂದಲದ ಪ್ರಮುಖ ಲಕ್ಷಣಗಳು
- ಒಳ್ಳೆಯ ಶಿಕ್ಷಣ ಪಡೆದು, ಒಳ್ಳೆಯ ಕೆಲಸಕ್ಕೆ ಸೇರಿದರೂ ಕೊನೆಯಲ್ಲಿತಮಗೆ ಸಲ್ಲದ ಜಾಗಕ್ಕೆ ಬಂದಿದ್ದೇವೆ ಎಂಬ ಭಾವನೆ ಹುಟ್ಟುವುದು.
- ಕೆಲಸದಲ್ಲಿಎಷ್ಟೇ ಯಶಸ್ವಿಯಾಗಿದ್ದರೂ, ಆ ಕೆಲಸವನ್ನು ಮುಂದುವರಿಸಲು ಶಕ್ತಿಯೇ ಇಲ್ಲದಂತಾಗುವುದು. ಕೆಲಸವು ಅರ್ಥಪೂರ್ಣವಾಗಿದ್ದರೂ ಅದನ್ನು ಮುಂದುವರಿಸಲು ಏನೂ ಕಾರಣಗಳಿಲ್ಲಎಂದು ಅನಿಸುವುದು.
- ಕಷ್ಟಪಟ್ಟು ಓದು, ಪದವಿ ಪಡೆ, ನಿಷ್ಠೆಯಿಂದ ಕೆಲಸ ಮಾಡು ಆಗ ಜೀವನ ಸುಖವಾಗಿರುತ್ತದೆ ಎಂಬ ಹಳೆಯ ನಿಯಮಗಳು ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಫಲ ನೀಡುತ್ತಿಲ್ಲಎಂದು ಅರಿವಾಗುವುದು.
- ತಿಳಿಯದ ಕ್ಷೇತ್ರಗಳಲ್ಲಿತೊಡಗಿಸಿಕೊಳ್ಳುವ ಆಸೆ ಹೆಚ್ಚಾಗುವುದು.
- ಕಂಪನಿಗಳು ಕಷ್ಟಕಾಲದಲ್ಲಿನಮ್ಮನ್ನು ಕೈಬಿಡುತ್ತವೆ ಎಂಬ ಅರಿವು ಮೂಡಿದಾಗ, ನೌಕರರು ಕೆಲಸಕ್ಕಿಂತ ತಮ್ಮ ವೈಯಕ್ತಿಕ ಬೆಳವಣಿಗೆ ಅಥವಾ ಬ್ಯಾಕಪ್ ಪ್ಲಾನ್ ಕಡೆಗೆ ಹೆಚ್ಚು ಗಮನ ನೀಡುವುದು.
- ಹಳೆಯ ಕೆಲಸದ ಮೇಲೆ ಆಸಕ್ತಿ ಇಲ್ಲ, ಆದರೆ ಹೊಸದು ಏನು ಎಂದು ಇನ್ನೂ ತಿಳಿದಿಲ್ಲ ಎಂಬಂತಹ ತ್ರಿಶಂಕು ಸ್ಥಿತಿಯಲ್ಲಿಸಿಕ್ಕಿಹಾಕಿಕೊಂಡ ಭಾವನೆಯಲ್ಲಿಒದ್ದಾಡುವುದು.
ಈ ಗೊಂದಲಕ್ಕೆ ಪ್ರಮುಖ ಕಾರಣಗಳು
ಆರ್ಥಿಕ ಲೆಕ್ಕಾಚಾರದ ವ್ಯತ್ಯಾಸ: ಹಿಂದಿನ ತಲೆಮಾರಿನಲ್ಲಿಒಬ್ಬ ವ್ಯಕ್ತಿಯ ಸಂಬಳ ಇಡೀ ಕುಟುಂಬವನ್ನು ಸಾಕಿ, ಮನೆ ಕಟ್ಟಿ, ಮಕ್ಕಳನ್ನು ಓದಿಸಲು ಸಾಕಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸಂಬಳ ಹೆಚ್ಚಳಕ್ಕಿಂತ ಜೀವನ ವೆಚ್ಚ ವೇಗವಾಗಿ ಏರುತ್ತಿದೆ.
ಸಾಲದ ಹೊರೆ: ಶಿಕ್ಷಣಕ್ಕಾಗಿ ಮಾಡಿದ ದೊಡ್ಡ ಮೊತ್ತದ ಸಾಲವನ್ನು ತೀರಿಸಲು, ಇಷ್ಟವಿಲ್ಲದಿದ್ದರೂ ಒತ್ತಡದ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇಂದು ಇದೆ.
ನಂಬಿಕೆ ಮತ್ತು ನಿಷ್ಠೆಯ ಕೊರತೆ: ಹಿಂದೆ ಕಂಪನಿಗಳಿಗೆ ನಿಷ್ಠರಾಗಿದ್ದರೆ, ಕಂಪನಿಗಳು ನೌಕರರ ಜೀವನಪೂರ್ತಿ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದವು. ಆದರೆ ಈಗ ಕಂಪನಿಗಳು ಲಾಭಕ್ಕಾಗಿ ಯಾವುದೇ ಕ್ಷಣದಲ್ಲಿನೌಕರರನ್ನು ಕೆಲಸದಿಂದ ತೆಗೆಯಬಹುದು. ಇದು ನೌಕರರಲ್ಲಿ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ಕೆಲಸದ ಒತ್ತಡ: ಇಂದಿನ ಕಾಲದಲ್ಲಿಕೆಲಸವು ಕೇವಲ ಹಣ ನೀಡುವುದಷ್ಟೇ ಅಲ್ಲದೆ ವ್ಯಕ್ತಿಯ ಗುರುತು, ಬದುಕಿನ ಅರ್ಥ ಮತ್ತು ಸಾಮಾಜಿಕ ಗೌರವವನ್ನೂ ನೀಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಯಾವಾಗ ಒಂದು ಕೆಲಸ ಇವೆಲ್ಲವನ್ನೂ ನೀಡಲು ವಿಫಲವಾಗುತ್ತದೆಯೋ, ಆಗ ವ್ಯಕ್ತಿಗೆ ಅದು ಕೇವಲ ವೃತ್ತಿಪರ ಸೋಲಾಗಿ ಕಾಣದೆ ಅಸ್ತಿತ್ವದ ಬಿಕ್ಕಟ್ಟಾಗಿ ಕಾಡುತ್ತದೆ.
ಬಾಕ್ಸ್
ವೃತ್ತಿಜೀವನದ ಗೊಂದಲವನ್ನು ಮೀರಿ ಬೆಳೆಯುವುದು ಹೇಗೆ?
1. ಹೊಸದನ್ನು ಆರಂಭಿಸಿ: ಅನೇಕರು ನನಗೆ ಏನು ಇಷ್ಟ ಎಂದು ಯೋಚಿಸುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ಸ್ಪಷ್ಟತೆಯು ಕ್ರಿಯೆಯಿಂದ ಬರುತ್ತದೆ. ಹೊಸ ವಿಷಯಗಳನ್ನು ಸಣ್ಣ ಮಟ್ಟದಲ್ಲಿಪ್ರಯೋಗಿಸಲು ಮುಂದಾಗಬೇಕು. ಉದಾಹರಣೆಗೆ ವಾರಾಂತ್ಯದ ಕೋರ್ಸ್ ಗಳು, ಸಣ್ಣ ಪ್ರಾಜೆಕ್ಟ್ಗಳು ಇತ್ಯಾದಿ
2. ಮಧ್ಯಂತರ ಸ್ಥಿತಿ ಒಪ್ಪಿಕೊಳ್ಳಿ: ಹಳೆಯ ವೃತ್ತಿಜೀವನ ಮುಗಿದು ಹೊಸತು ಇನ್ನೂ ಆರಂಭವಾಗದ ಸಮಯವನ್ನು ಮಧ್ಯಂತರ ಸ್ಥಿತಿ ಎನ್ನಲಾಗುತ್ತದೆ. ಈ ಸಮಯದಲ್ಲಿಭಯವಾಗುವುದು ಸಹಜ. ಈ ಗೊಂದಲವನ್ನು ಸೋಲು ಎಂದು ಭಾವಿಸದೆ ಪರಿವರ್ತನಾ ಹಂತ ಎಂದು ತಿಳಿದು ಸಮಾಧಾನದಿಂದಿರಬೇಕು.
3.ವೃತ್ತಿಜೀವನದ ಗುರುತನ್ನು ಮರುರೂಪಿಸಿ: ನಾನು ಒಬ್ಬ ಶಿಕ್ಷಕ ಅಥವಾ ನಾನು ಒಬ್ಬ ಎಂಜಿನಿಯರ್ ಎಂಬ ಹಳೆಯ ಚೌಕಟ್ಟಿನಿಂದ ಹೊರಬನ್ನಿ. ನಿಮ್ಮನ್ನು ಕೇವಲ ಒಂದು ಉದ್ಯೋಗಕ್ಕೆ ಸೀಮಿತಗೊಳಿಸದೆ ನಿಮ್ಮಲ್ಲಿರುವ ಕೌಶಲಗಳು ಬೇರೆ ಎಲ್ಲೆಲ್ಲಿಬಳಕೆಯಾಗಬಹುದು ಎಂದು ಸಂಶೋಧಿಸಿ. ಕೆಲಸವು ನಿಮ್ಮ ಜೀವನದ ಒಂದು ಭಾಗವೇ ಹೊರತು, ಅದೇ ಸಂಪೂರ್ಣ ಜೀವನವಲ್ಲಎಂದು ಮನದಟ್ಟು ಮಾಡಿಕೊಳ್ಳಿ.
4.ಆರ್ಥಿಕ ಸುರಕ್ಷತೆ ನಿರ್ಮಿಸಿ: ಸಾಲ ಮತ್ತು ಜೀವನ ವೆಚ್ಚದ ನಡುವೆ ವೃತ್ತಿ ಬದಲಾವಣೆ ಕಷ್ಟವಾಗಬಹುದು. ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಣ್ಣ ಉಳಿತಾಯ ಮಾಡಿ ಅಥವಾ ಸೈಡ್ ಹಸಲ… (sಜಿdಛಿ h್ಠsಠ್ಝಿಛಿ )ಮೂಲಕ ಪರ್ಯಾಯ ಆದಾಯದ ದಾರಿ ಹುಡುಕಿ. ಇದರಿಂದ ಹೊಸ ಪ್ರಯೋಗ ಮಾಡುವಾಗ ಆರ್ಥಿಕ ಭಯ ಕಡಿಮೆ ಇರುತ್ತದೆ.
5. ಸಂಪರ್ಕ ಬೆಳೆಸಿ: ಗೊಂದಲದಲ್ಲಿದ್ದಾಗ ನಾವು ಒಂಟಿ ಎಂದು ಭಾವಿಸುತ್ತೇವೆ. ಆದರೆ ಸಾವಿರಾರು ಮಂದಿ ಇದೇ ಸ್ಥಿತಿಯಲಿರುತ್ತಾರೆ. ನಿಮ್ಮ ಆಲೋಚನೆಗಳನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಿ. ಹೊಸ ಕ್ಷೇತ್ರಗಳ ಜನರೊಂದಿಗೆ ಮಾತನಾಡಿ. ಇತರರ ಅನುಭವಗಳು ನಿಮಗೆ ಹೊಸ ದಾರಿ ತೋರಿಸಬಹುದು.
6. ಅತಿಯಾದ ನಿರೀಕ್ಷೆ ಬೇಡ: ಕೆಲಸವೇ ನಮಗೆ ಹಣ, ಗೌರವ, ಅರ್ಥ ಮತ್ತು ಸಂತೋಷ ಎಲ್ಲವನ್ನೂ ನೀಡಬೇಕು ಎಂದು ನಾವು ಬಯಸುತ್ತೇವೆ. ಇದು ಕೆಲಸದ ಮೇಲೆ ಅತಿಯಾದ ಒತ್ತಡ ಹೇರುತ್ತದೆ. ಜೀವನದ ಅರ್ಥವನ್ನು ಕೇವಲ ಆಫೀಸ್ ಕೆಲಸದಲ್ಲಿಹುಡುಕಬೇಡಿ. ಹವ್ಯಾಸಗಳು, ಕುಟುಂಬ ಮತ್ತು ಸಮುದಾಯದ ಸೇವೆಗಳಲ್ಲೂಸಂತೋಷವನ್ನು ಹುಡುಕಿ. ಆಗ ಕೆಲಸದಲ್ಲಿಅಲ್ಪಸ್ವಲ್ಪ ಏರುಪೇರಾದರೂ ಜೀವನ ಹಳಿ ತಪ್ಪುವುದಿಲ್ಲಎಂಬ ಭಾವನೆ ಬರುತ್ತದೆ.
ವೃತ್ತಿಜೀವನದ ಬಿಕ್ಕಟ್ಟು ಎನ್ನುವುದು ಕೇವಲ ಸಮಸ್ಯೆಯಲ್ಲ, ಬದಲಿಗೆ ಅದು ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಬೇಕಾದ ಹೊಸ ಬದಲಾವಣೆಯ ಮುನ್ಸೂಚನೆಯೂ ಆಗಿರಬಹುದು.

