ಹೆಸ್ಕಾಂಗೆ ಪಾವತಿ ಮಾಡದ 32 ಗ್ರಾಪಂಗಳು
8 ಕೋಟಿ ರೂ. ಬಿಲ್ ಬಾಕಿ
ವಿಕ ವಿಶೇಷ ಇಂಡಿ
ಕುಡಿಯುವ ನೀರು ಪೂರೈಕೆ ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡ ಪರಿಣಾಮ ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ( ಹೆಸ್ಕಾಂ ) ಆರ್ಥಿಕ ನಷ್ಟ ಅನುಭವಿಸುತ್ತದೆ.
ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ32 ಗ್ರಾಪಂಗಳು ಎಂಟು ಕೋಟಿ ರೂ.ಗೂ ಅಧಿಕ ಬಿಲ್ ಪಾವತಿಸಬೇಕಿದೆ. ಅಥರ್ಗಾ 90 ಲಕ್ಷ ರೂ., ಹಿರೇರೂಗಿ 34 ಲಕ್ಷ ರೂ., ಹಿರೇಬೇವನೂರ 35 ಲಕ್ಷ ರೂ., ಖೇಡಗಿ 46 ಲಕ್ಷ ರೂ., ಲಾಳಸಂಗಿ 23 ಲಕ್ಷ ರೂ., ಸಾಲೋಟಗಿ 1.10 ಕೋಟಿ ರೂ., ಗುಬ್ಬೇವಾಡ 49 ಲಕ್ಷ ರೂ., ಇಂಗಳಗಿ 31 ಲಕ್ಷ ರೂ., ಲಚ್ಯಾಣ 67 ಲಕ್ಷ, ಪಡನೂರ 36 ಲಕ್ಷ, ಮಿರಗಿ 63 ಲಕ್ಷ, ತಾಂಬಾ 20 ಲಕ್ಷ ರೂ. ಹೀಗೆ ಒಟ್ಟು 32 ಗ್ರಾಪಂಗಳಿಂದ ಹೆಸ್ಕಾಂಗೆ ಎಂಟು ಕೋಟಿ ರೂ.ಗೂ ಅಧಿಕ ವಿದ್ಯುತ್ ಬಿಲ್ ಪಾವತಿ ಆಗಬೇಕಿದೆ. ಈಗಾಗಲೇ ಹೆಸ್ಕಾಂನ ಹಣಕಾಸು ಸ್ಥಿತಿ ಸರಿ ಇಲ್ಲ, ಹೀಗಾಗಿ ನಿರ್ವಹಣೆ ಮತ್ತಷ್ಟು ಕಷ್ಟವಾಗುತ್ತಿದೆ.
ವಾದ-ಪ್ರತಿವಾದ:
ಬಿಲ್ ಪಾವತಿ ವಿಚಾರವಾಗಿ ಹೆಸ್ಕಾಂ ಮತ್ತು ಗ್ರಾಮ ಪಂಚಾಯಿತಿಗಳು ಹೇಳುವುದೇ ಬೇರೆ. ಹೆಸ್ಕಾಂದವರು ಸೋಲಾರ್ , ಸಕ್ಕರೆ ಕಾರ್ಖಾನೆ, ಥರ್ಮಲ್ , ವಿಂಡ್ ಸೇರಿ ಇತರೆ ಕಡೆಯಿಂದ ವಿದ್ಯುತ್ ಖರೀದಿಸಿ ಗ್ರಾಮ ಪಂಚಾಯಿತಿಗಳಿಗೆ ಪೂರೈಸುತ್ತೇವೆ. ಸಮರ್ಪಕ ಬಿಲ್ ಪಾವತಿಸಿದರೆ ಅನುಕೂಲವಾಗಲಿದೆ ಎಂದರೆ, ಗ್ರಾಪಂದವರು 15 ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ 2025-26 ನೇ ಸಾಲಿನ ಅನುದಾನ ಬಂದಿಲ್ಲ. ಹೀಗಾಗಿ ಬಿಲ್ ಪಾವತಿ ಸಾಧ್ಯವಾಗುತ್ತಿಲ್ಲಎನ್ನುತ್ತಾರೆ.
ಸಂಬಳ ಪಾವತಿಯೇ ಕಷ್ಟವಾಗಿದೆ:
ಕರ ವಸೂಲಾತಿಯಲ್ಲಿಶೇ.40 ರಷ್ಟು ಸಿಬ್ಬಂದಿ ವೇತನ, ಶೇ.34 ರಷ್ಟು ಸೆಸ್ ಪಾವತಿಸಬೇಕು. ಉಳಿದ ಕರ ಬಳಕೆ ಮಾಡುವುದು ಕಡಿಮೆ. ಸಿಬ್ಬಂದಿ ಸಂಬಳ, ದಿನಗೂಲಿ ನೌಕರರ, ವಿದ್ಯುತ್ ಸಂಬಂಧಿತ ನೌಕರರ ಸಂಬಳ ಮಾಡಬೇಕು. ಹೀಗಾಗಿ ಗ್ರಾಪಂ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ಪಿಡಿಒ ಒಬ್ಬರು ಹೇಳಿದರು.
---
ವಿದ್ಯುತ್ ಬಿಲ್ ಕಟ್ಟಲು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಲಾಗಿದೆ. ನೋಟಿಸ್ ಕೂಡ ನೀಡಲಾಗಿದೆ. ಆದಷ್ಟು ಬೇಗ ಬಿಲ್ ಕಟ್ಟಿದರೆ ನಮಗೂ ಅನುಕೂಲ.
-ಎಸ್ .ಆರ್ .ಮೆಂಡೆಗಾರ ಎಇಇ, ಹೆಸ್ಕಾಂ, ಇಂಡಿ
---
15 ನೇ ಹಣಕಾಸು ಆಯೋಗದ ಹಣ ಗ್ರಾಮ ಪಂಚಾಯಿತಿಗಳಿಗೆ ಬಂದಿಲ್ಲ. ಬಂದರೆ ಬಾಕಿ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಲಿದೆ. ಇಲ್ಲದಿದ್ದರೆ ಹೆಸ್ಕಾಂಗೆ ಬಿಲ್ ಪಾವತಿ ಕಷ್ಟವಾಗಲಿದೆ.
-ಬಸವರಾಜ ಬಬಲಾದ ಪಿಡಿಒ, ರೂಗಿ ಗ್ರಾಪಂ
ಫೋಟೊ
19 ಇಂಡಿ 01
ಹೆಸ್ಕಾಂ ಇಂಡಿ
ಬಬಲಾದ ಗ್ರಾ.ಪಂ

