ಬೆಂಗಳೂರು: ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಬೌರಿಂಗ್ ಆಸ್ಪತ್ರೆಗೆ ಡಿಸಿಎಂ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮರಗಳು, ಕೊಂಬೆಗಳು ಬಿದ್ದು ವಾಹನಗಳಿಗೂ ಹಾನಿಯಾಗಿದೆ. ಗುರುವಾರದಿಂದಲೇ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿರುವೆ. ನಗರದಲ್ಲಿನೂರಕ್ಕೂ ಹೆಚ್ಚು ಕಡೆ ಮರ ಬಿದ್ದಿದ್ದು, ಅಪಾಯಕಾರಿಯಾಗಿರುವ ಮರ ಹಾಗೂ ಕೊಂಬೆಗಳನ್ನು ಗುರುತಿಸಿ, ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೇರಳದ ಕುಟುಂಬಶ್ರೀ ಸಂಘಟನೆಯ ಮುಖಾಂತರ 56 ಮಂದಿ ಪ್ರವಾಸಕ್ಕೆ ಬಂದಿದ್ದರು . ಕಮರ್ಷಿಯಲ್ ಸ್ಟ್ರೀಟ್ ಅಲ್ಲಿಶಾಪಿಂಗ್ ಗೆ ಬಂದಿದ್ದರು. ಆಗ ಮಳೆ ಬಂದಿದೆ. ಆಗ ಅವರು ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ಹೋಗಿದ್ದಾಗ ಅನಾಹುತ ಸಂಭವಿಸಿದೆ. ಅಧಿಕಾರಿಗಳು ಸಹ ಇವರ ಜೊತೆ ಬಂದಿದ್ದಾರೆ. ಕೇರಳ ಸರಕಾರಕ್ಕೂ ನಾವು ಮಾಹಿತಿ ನೀಡುತ್ತೇವೆ. ಶವ ಪರೀಕ್ಷೆ ನಡೆಸಿ ಇಲ್ಲಿಂದಲೇ ಗೌರವಯುತವಾಗಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
‘‘ಅಧಿಕಾರಿಗಳ ವಿರುದ್ಧ ಗರಂ ಆಗಿದ್ದೀರಿ ಎಂದು ಕೇಳಿದಾಗ, ಇಂತಹ ಪರಿಸ್ಥಿತಿಯಲ್ಲಿಯಾರಾದರೂ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈಗ ಅರೋಪ ಮಾಡುವ ಸಮಯವಲ್ಲ. ಪರಿಹಾರ ಕಂಡುಕೊಳ್ಳುವುದು ಮುಖ್ಯ,’’ ಎಂದು ತಿಳಿಸಿದರು.

