ಒಂದು ಸುಂದರ ನಗರದಲ್ಲಿಜಗತ್ಪ್ರಸಿದ್ಧ ವೀರ ಯೋಧರಾದ ಹಾರ್ದಿಕ್ ಮತ್ತು ಅಶ್ವತ್ ವಾಸಿಸುತ್ತಿದ್ದರು. ಇವರಲ್ಲಿಹಾರ್ದಿಕ್ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಓಡುವ, ದೈವಿಕ ಮಂತ್ರ ಹಾಗೂ ಭಾರಿ ಬಲವನ್ನು ಹೊಂದಿದ ಮಹಾವೀರನಾಗಿದ್ದನು.ಒಂದು ದಿನ ಇಬ್ಬರೂ ಗೆಳೆಯರು ಮಾಯಾವಿ ಮಂದಿರದಲ್ಲಿನಿದ್ರಿಸುತ್ತಿರುವಾಗ, ಹಾರ್ದಿಕ್ ಗೆ ಒಂದು ಭಯಾನಕ ಕನಸು ಬಿದ್ದಿತು. ಅದರಲ್ಲಿ ತಕ್ಷಕ ಲೋಕದ ಮಹಾಶಕ್ತಿಶಾಲಿ ನಾಗಿನಿಯಾದ ತಕ್ಷಿಕಾ ಆಕ್ರಮಣ ಮಾಡುತ್ತಿರುವುದು ಕಂಡಿತು. ತಕ್ಷಣ ಎಚ್ಚರಗೊಂಡ ಹಾರ್ದಿಕ್ , ಆಕೆಯನ್ನು ತಡೆಯಲು ನೇರವಾಗಿ ತಕ್ಷಕ ಲೋಕಕ್ಕೆ ಧಾವಿಸಿದನು.
ಅಲ್ಲಿತಕ್ಷಿಕಾ ಅರ್ಧ ಮನುಷ್ಯ, ಅರ್ಧ ನಾಗಿನಿಯ ರೂಪದಲ್ಲಿಪ್ರತ್ಯಕ್ಷಳಾದಳು. ಆಕೆಗೆ ಕೆಂಪು ಬಣ್ಣದ ದೊಡ್ಡ ಬಾಲವಿತ್ತು ಹಾಗೂ ಹಿಂಭಾಗದಲ್ಲಿಐದು ಹೆಡೆಯ ಸರ್ಪಗಳು ಭೀಕರವಾಗಿ ಭುಸುಗುಡುತ್ತಿದ್ದವು.
ಹಾರ್ದಿಕ್ ಆಕೆಯನ್ನು ನೋಡಿ ಗರ್ಜಿಸಿದನು, ‘ಯಾರು ನೀನು? ಇಲ್ಲಿಗೆ ಏಕೆ ಬಂದೆ?’
ಆಗ ತಕ್ಷಿಕಾ ಅಟ್ಟಹಾಸದಿಂದ, ‘ನಾನು ನಾಗಿನಿಯರ ನಾಗಿನಿ, ಸರ್ವಶ್ರೇಷ್ಠ ಮಹಾಶಕ್ತಿಶಾಲಿ ತಕ್ಷಿಕಾ! ನಿನ್ನ ಶಕ್ತಿ ನನ್ನ ಮುಂದೆ ಏನು ನಡೆಯದು‘ ಎನ್ನುತ್ತಾ ತನ್ನ ಬೃಹತ್ ಕೆಂಪು ಬಾಲದಿಂದ ಹಾರ್ದಿಕ್ ನನ್ನು ಗಟ್ಟಿಯಾಗಿ ಸುರುಳಿ ಸುತ್ತಿ ಬಂಧಿಧಿಸಿದಳು.
ಆದರೆ, ಹಾರ್ದಿಕ್ ಧೃತಿಗೆಡಲಿಲ್ಲ. ತಕ್ಷಿಕಾ ತನ್ನ ಅಹಂಕಾರದಿಂದ ಬೀಗುತ್ತಾ ಮೈಮರೆತಿದ್ದ ಆ ಕ್ಷಣವನ್ನೇ ಹಾರ್ದಿಕ್ ಕಾಯುತ್ತಿದ್ದನು. ಆಕೆ ತನ್ನನ್ನು ಸುರುಳಿ ಬಂಧನದಲ್ಲಿಬಿಗಿಗೊಳಿಸಿದಾಗ, ಹಾರ್ದಿಕ್ ತನ್ನ ದೈವಿಕ ಮಂತ್ರ ಶಕ್ತಿಯನ್ನು ಜಾಗೃತಗೊಳಿಸಿ, ತನ್ನ ದೇಹದ ಉಷ್ಣತೆಯನ್ನು ಸೂರ್ಯನಂತೆ ತೀವ್ರವಾಗಿ ಹೆಚ್ಚಿಸಿಕೊಂಡನು. ಹಾರ್ದಿಕನ ದೇಹದಿಂದ ಹೊರಹೊಮ್ಮಿದ ಅಗ್ನಿಯ ಜ್ವಾಲೆಗೆ ತಕ್ಷಿಕಾಳ ಬಾಲವು ಸುಡಲಾರಂಭಿಸಿತು.
ನೋವಿನಿಂದ ತಕ್ಷಿಕಾ ಸುರುಳಿಯನ್ನು ಸಡಿಲಗೊಳಿಸುತ್ತಿದ್ದಂತೆ, ಹಾರ್ದಿಕ್ ಜಗತ್ತಿನಲ್ಲೇ ಅತ್ಯಂತ ವೇಗದ ತನ್ನ ವಿಶಿಷ್ಟ ಶಕ್ತಿಯನ್ನು ಬಳಸಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಆಕೆಯ ಬಂಧನದಿಂದ ಜಿಗಿದು ಹೊರಬಂದನು. ಆಕೆ ಚೇತರಿಸಿಕೊಳ್ಳುವ ಮುನ್ನವೇ, ಹಾರ್ದಿಕ್ ವಾಯುವಿನ ವೇಗದಲ್ಲಿತಕ್ಷಿಕಾಳ ಐದು ಹೆಡೆಯ ಸುತ್ತಲೂ ಸುತ್ತುತ್ತಾ, ತನ್ನ ದೈವಿಕ ಅಸ್ತ್ರದಿಂದ ಆಕೆಯ ಶಕ್ತಿಯ ಮೂಲವಾಗಿದ್ದ ಮಂತ್ರದಂಡವನ್ನು ಮುರಿದುಹಾಕಿದನು.
ತನ್ನ ಸರ್ವಶ್ರೇಷ್ಠ ಮಾಯಾವಿ ಶಕ್ತಿಗಳು ಕ್ಷೀಣಿಸುತ್ತಿದ್ದಂತೆ ತಕ್ಷಿಕಾ ನೆಲಕ್ಕೆ ಬಿದ್ದಳು. ಹಾರ್ದಿಕನ ಚಾಣಾಕ್ಷತನ ಮತ್ತು ಅಪ್ರತಿಮ ವೀರತ್ವದ ಮುಂದೆ ಆಕೆಯ ಅಹಂಕಾರ ಸಂಪೂರ್ಣವಾಗಿ ಧೂಳೀಪಟವಾಯಿತು. ಜಗತ್ತನ್ನು ಆಕ್ರಮಿಸುವ ಆಕೆಯ ಗರ್ವಭಂಗವಾಯಿತು.
ಶತ್ರುವು ಎಷ್ಟೇ ಪ್ರಬಲನಾಗಿದ್ದರೂ ಮತ್ತು ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ, ಧೈರ್ಯಗೆಡದೆ ಸಮಯಪ್ರಜ್ಞೆ ಹಾಗೂ ಚಾಣಾಕ್ಷತನದಿಂದ ಹೋರಾಡಿದರೆ ಎಂತಹ ಮಹಾ ಅಹಂಕಾರಿಯನ್ನಾದರೂ ಸೋಲಿಸಬಹುದು.