ನಾನು ಓದಿದ

Contributed byshubha.hegde@timesgroup.com|Vijaya Karnataka
coffee king the intriguing life and suicide of vg siddhartha
ಕುತೂಹಲ ಹುಟ್ಟಿಸುವ ಕಾಫಿ ಕಿಂಗ್

ಎನ್ . ಸಚ್ಚಿದಾನಂದ
ಕರ್ನಾಟಕವನ್ನು ಇತ್ತೀಚಿನ ದಿನಗಳಲ್ಲಿಸೂಜಿಗಲ್ಲಿನಂತೆ ಸೆಳೆದ ವ್ಯಕ್ತಿಗಳಲ್ಲಿಒಬ್ಬರು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ . ಉದ್ಯಮಿ ಹಾಗೂ ಎಸ್ .ಎಂ. ಕೃಷ್ಣ ಅವರ ಅಳಿಯರಾಗಿದ್ದ ಅವರು ಏಳು ವರ್ಷಗಳ ಹಿಂದೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು ಅಘಾತ ಉಂಟು ಮಾಡಿತ್ತು. ಆಗ ಎಲ್ಲರ ತಲೆಯಲ್ಲೂಬಂದ ಮೊದಲ ಪ್ರಶ್ನೆ ‘ಆಗರ್ಭ ಶ್ರೀಮಂತನಿಗೆ ಅಂಥದ್ದೇನಾಯ್ತು? ಯಾಕವರು ಈ ಕಠಿಣ ನಿರ್ಧಾರ ಕೈಗೊಂಡರು?’ ಎಂಬುದು.

ಈ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಈ ‘ಕಾಫಿ ಕಿಂಗ್ ’ ಪುಸ್ತಕ. ಸಿದ್ಧಾರ್ಥ ಏಕೆ ಆತ್ಮಹತ್ಯೆ ಮಾಡಿಕೊಂಡರು? ಜಗಮಗಿಸುತ್ತಿದ್ದ ಕಾಫಿ ಡೇ ಒಳಗೆ ನಿಜಕ್ಕೂ ಏನು ನಡೆದಿತ್ತು? ಈ ಪ್ರಶ್ನೆಗಳಿಗೆ ಹುಡುಕುತ್ತಾ ಹೊರಟ ಲೇಖಕರಾದ ರುಕ್ಮಿಣಿ ರಾವ್ ಹಾಗೂ ಪ್ರೊಸೇನ್ ಜಿತ್ ದತ್ತಾ ಅವರು, ತಾವು ಕಂಡುಕೊಂಡ ಸತ್ಯಗಳನ್ನು ಹಸಿಹಸಿಯಾಗಿ ಈ ಪುಸ್ತಕದಲ್ಲಿದಾಖಲಿಸಿದ್ದಾರೆ. ಈ ಕೃತಿಯನ್ನು ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆ ಕನ್ನಡಕ್ಕೆ ತಂದಿದ್ದು, ಕಾರ್ತಿಕಾದಿತ್ಯ ಬೆಳ್ಗೋಡು ಸೊಗಸಾಗಿ ಅನುವಾದಿಸಿದ್ದಾರೆ.

2019ರ ಜುಲೈ 29ರಂದು ನೇತ್ರಾವತಿ ನದಿಯ ಸೇತುವೆ ಮೇಲೆ ವಿ.ಜಿ. ಸಿದ್ಧಾರ್ಥ ಕಾಣೆಯಾದ ನಂತರ ಅವರ ಚಾಲಕ ನೀಡಿದ ದೂರಿನ ಪ್ರತಿಯಿಂದಲೇ ಈ ಪುಸ್ತಕ ತೆರೆದುಕೊಳ್ಳುತ್ತದೆ. ನಂತರ ಕಥೆಯು ನೇರವಾಗಿ ಚಿಕ್ಕಮಗಳೂರಿನ ಶಂಕರಕೂಡಿಗೆಗೆ ಹೊರಳುತ್ತದೆ. ಅವರ ಮೂಲ ಕುಟುಂಬ, ಕಾಫಿ ಕೃಷಿಯನ್ನು ವಿವರಿಸುತ್ತಲೇ, ಗಂಗಯ್ಯ ಹೆಗ್ಡೆಯವರ ಪುತ್ರ ಸಿದ್ಧಾರ್ಥರ ಬೆಳೆವಣಿಗೆಯನ್ನು ಲೇಖಕರು ಕಟ್ಟಿಕೊಡುತ್ತಾರೆ. ಸಿದ್ಧಾರ್ಥ ಅವರ ಬೆಳವಣಿಗೆ ಎಂದರೆ ಅದು ಅವರ ಉದ್ಯಮ ಸಾಮ್ರಾಜ್ಯದ ಗರ್ಭಾವಸ್ಥೆ, ಜನನ, ಮತ್ತು ಬೃಹತ್ ಬೆಳವಣಿಗೆಯ ಕತೆಯೂ ಹೌದು. ಕೊನೆಗೆ, ಉದ್ಯಮ ಜಗತ್ತಿನಲ್ಲಿಸಿದ್ಧಾರ್ಥ ಮಾಡಿದ ತಪ್ಪುಗಳು ಮತ್ತು ಅವರು ಸಾಲದ ಸುಳಿಯಲ್ಲಿಸಿಲುಕಿಕೊಂಡ ಬಗೆಯನ್ನು ಓದುಗರ ಮುಂದೆ ಬಿಚ್ಚಿಡುತ್ತಾರೆ. ಹಣಕಾಸು ಜಗತ್ತಿನ ಅರಿವು ಹಾಗೂ ಷೇರು ಮಾರುಕಟ್ಟೆಯ ಪರಿಚಯ ಇದ್ದವರಿಗೆ ಈ ಪುಸ್ತಕ ಥ್ರಿಲ್ಲರ್ ಅನುಭವ ನೀಡುತ್ತದೆ. ‘ಕಾಫಿ ಡೇ ಎಂಟರ್ ಪ್ರೈಸಸ್ ನಿಂದ ಮಾಯವಾದ 3,000 ಕೋಟಿ ರೂ.ಗೂ ಹೆಚ್ಚಿನ ಹಣದಲ್ಲೇ ಎಲ್ಲಾಪ್ರಶ್ನೆಗಳಿಗೆ ಉತ್ತರ ಅಡಗಿದೆ’ ಎನ್ನುವುದರೊಂದಿಗೆ ಈ ಪುಸ್ತಕ ಕೊನೆಯಾಗುತ್ತದೆ.

ಕಾಫಿ ಕಿಂಗ್

ಮೂಲ ಲೇ: ರುಕ್ಮಿಣಿ ರಾವ್ , ಪ್ರೊಸೇನ್ ಜಿತ್ ದತ್ತಾ

ಕನ್ನಡಕ್ಕೆ: ಕಾರ್ತಿಕಾದಿತ್ಯ ಬೆಳ್ಗೋಡು

ಪ್ರ: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ

ಪುಟ: 280

ದರ: 350 ರೂ.