ಇಂಟ್ರೋ: ಹಿಂದೂ ಧರ್ಮದಲ್ಲಿಪವಿತ್ರ ಆಚರಣೆಗಳಲ್ಲಿಜನಿವಾರ ಧಾರಣೆಯೂ ಒಂದು. ಜನಿವಾರಕ್ಕೆ ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲ, ವೈಜ್ಞಾನಿಕ ಮಹತ್ವವೂ ಇದೆ. ಜನಿವಾರವನ್ನು ಧರಿಸಲು ಅದರದ್ದೇ ಆದ ವಿಧಿ ವಿಧಾನಗಳಿವೆ.
----
ವಾರುಣಿ ಮೈಸೂರು
======
ಹಿಂದೂ ಧರ್ಮದಲ್ಲಿಒಬ್ಬ ವ್ಯಕ್ತಿಯ ಜನದಿಂದ ಹಿಡಿದು ಮರಣದವರೆಗೆ 16 ವಿಧಿಗಳನ್ನು ಅಳವಡಿಸಲಾಗಿದೆ. ಅದನ್ನು ಷೋಡಶ ಸಂಸ್ಕಾರಗಳು ಎನ್ನುತ್ತೇವೆ. ಈ ವಿಧಿಗಳು ಜೀವನದಲ್ಲಿಮಹತ್ತರ ಪಾತ್ರವನ್ನು ವಹಿಸಿದೆ. ಈ 16 ವಿಧಿಗಳಲ್ಲಿಜನಿವಾರ ಧಾರಣ ಸಂಸ್ಕಾರ ಅಥವಾ ಉಪನಯನ ಸಂಸ್ಕಾರವೂ ಒಂದು. ಇದನ್ನು ಯಜ್ಞೋಪವೀತ ಎಂದೂ ಕರೆಯಲಾಗುತ್ತದೆ. ಅಂದರೆ ಯಜ್ಞವನ್ನು ನಡೆಸಬಲ್ಲಸಂಪೂರ್ಣ ಹಕ್ಕನ್ನು ಹೊಂದಿದವನು ಎಂದರ್ಥ. ಜನಿವಾರ ಧಾರಣೆಯನ್ನೇ ಸಂಸ್ಕೃತದಲ್ಲಿಯಜ್ಞೋಪವೀತವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಜ್ಞೋಪವೀತ ಧರಿಸದೇ ಯಾರಿಗೂ ಕೂಡ ವೇದಗಳನ್ನು ಪಠಿಸುವ ಅಥವಾ ಗಾಯತ್ರಿ ಮಂತ್ರವನ್ನು ಜಪಿಸುವ ಹಕ್ಕಿರುವುದಿಲ್ಲಎನ್ನುತ್ತವೆ ಶಾಸ್ತ್ರಗಳು.
ಹೆಸರು ಹಲವು:
ಯಜ್ಞೋಪವೀತವನ್ನು ಬ್ರಹ್ಮಸೂತ್ರ, ವ್ರತಬಂಧ, ಬಲಬಂಧ ಮತ್ತು ಯಜ್ಞಸೂತ್ರವೆಂದು ಕರೆಯಲಾಗುತ್ತದೆ. ಕನ್ನಡದಲ್ಲಿಯಜ್ಞೋಪವೀತಕ್ಕೆ ಸರಳವಾಗಿ ಜನಿವಾರ ಎಂಬ ಹೆಸರಿದೆ. ಉಪನಯನದ ನಂತರ ಜನಿವಾರವನ್ನು ಧರಿಸುವುದು ಒಂದು ಪದ್ಧತಿ.
ಈ ವಿಧಾನದ ಆಚರಣೆಗೆ ಉಪನಯನ ಎಂಬ ಹೆಸರು ಇದೆ. ಇದರ ಅರ್ಥ ಹತ್ತಿರಕ್ಕೆ ತರುವುದು ಎಂದು ಜನಿವಾರವನ್ನು ಧರಿಸಿದ ವ್ಯಕ್ತಿಯು ಬ್ರಹ್ಮಜ್ಞಾನ ಪಡೆಯಲು ಹತ್ತಿರ ಆಗುತ್ತಾನೆ. ಈತ ಅನುಷ್ಠಾನಗಳಿಂದ ಬ್ರಹ್ಮನಿಗೆ ಹತ್ತಿರವಾಗುತ್ತಾರೆಂಬ ನಂಬಿಕೆ ಇದೆ.
ಯಜ್ಞೋಪವೀತಕ್ಕೆ ಕನ್ನಡದಲ್ಲಿಜನಿವಾರ ಎಂಬ ಹೆಸರು ಇದೆ. ಜನಿವಾರ ಅಥವಾ ಯಜ್ಞೋಪವೀತವನ್ನು ಯಾವಾಗಿನಿಂದ ಧರಿಸುವ ಪದ್ಧತಿ ಆರಂಭವಾಯಿತು ಎಂದು ತಿಳಿದಿಲ್ಲ. ಆದರೆ ಪುರಾಣ ಕಾಲದ ನಂತರ ಜನಿವಾರ ಧರಿಸುವ ಪದ್ಧತಿ ಜಾರಿಗೆ ಬಂದಿರಬಹುದು ಎನ್ನಲಾಗಿದೆ.
ಯಜ್ಞ + ಉಪವೀತ ಎಂದರೆ ಯಜ್ಞೋಪವೀತ . (ಕನ್ನಡದಲ್ಲಿ: ಜನ್ನ + ದಾರ =ಜನ್ನದಾರ= ಜನಿವಾರ/ ಜನ್ನ ಎಂದರೆ ಯಜ್ಞ). ಯಾವುದೇ ದೊಡ್ಡ ಯಜ್ಞವನ್ನು ಆರಂಭಿಸುವಾಗ ಯಜ್ಞೋಪವೀತವನ್ನು ಹೊಸದಾಗಿ ಧರಿಸಿಕೊಳ್ಳುವ ಪದ್ಧತಿ ಈಗಲೂ ಜಾರಿಯಲ್ಲಿದೆ. ಯಜ್ಞೋಪವೀತ ಧಾರಣೆ ಎಂಬುದನ್ನು ಒಂದು ದೀಕ್ಷೆಯನ್ನು ಪಡೆದ ಸಂಕೇತವೆಂದು ಸರಳವಾಗಿ ವ್ಯಾಖ್ಯಾನಿಸಬಹುದು. ಗಾಯತ್ರಿ ಮಂತ್ರ ಉಪದೇಶ ಪಡೆದು ಅದರ ಅನಷ್ಠಾನ-ಮತ್ತು ವೇದಾಧ್ಯಯನದ ದೀಕ್ಷೆಯ ಸಂಕೇತವಾಗಿ ಉಪನಯನದ ದಿನ ವಟುವಿಗೆ (ಬಾಲಕನಿಗೆ) ಯಜ್ಞೋಪವೀತವನ್ನು ಶಾಸ್ತ್ರ ವಿಧಿಯಂತೆ ಧರಿಸಲಾಗುವುದು.
*
ನಿಯಮ ಪಾಲನೆ ಕಡ್ಡಾಯ
ಸಾಮಾನ್ಯವಾಗಿ ವಿಪ್ರರು, ವೈಶ್ಯರು, ಕ್ಷತ್ರಿಯರು ಯಜ್ಞೋಪವೀತ ಧಾರಣೆ ಮಾಡಿಕೊಳ್ಳುತ್ತಾರೆ. ಈ ಜನಿವಾರ ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಅದನ್ನು ಧರಿಸದೇ ಇರುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಧಿಗಳ ಪ್ರಕಾರವೇ ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ. ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.
ಯಜ್ಞೋಪವೀತದಲ್ಲಿಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋುಣ, ಪಿತೃ ಋುಣ, ಋುಷಿ ಋುಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ.
ಮೂರು ಪ್ರಮುಖ ಎಳೆಗಳಲ್ಲಿಒಂದೊಂದರಲ್ಲಿಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು 9 ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೈ ಯಜ್ಞೋಪವೀತವೂ ಸಹ 9 ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೈ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಸ್ತು ಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ಮಾತುಗಳನ್ನೇ ಕೇಳ ಬೇಕೆಂಬ ತತ್ವವನ್ನೂ ಈ ಯಜ್ಞೋಪವೀತ ವಿಧಿಯು ಸಾರುತ್ತದೆ ಎಂಬುದನ್ನು ತಿಳಿಯಬೇಕು.
**
ಉಪಾಕರ್ಮ:
ವರ್ಷಕ್ಕೊಮ್ಮೆ ಶ್ರಾವಣ ಮಾಸದಲ್ಲಿಬರುವ ಉಪಾಕರ್ಮ ವಿಧಿಯಲ್ಲಿಎಲ್ಲರೂ ಹಳೆಯ ಜನಿವಾರ ತೆಗೆದು ಹೊಸ ಜನಿವಾರ ಧರಿಸುತ್ತಾರೆ. ಉಪಾಕರ್ಮ ವಿಧಿಗಳು ಹೆಚ್ಚು ವಿಸ್ತಾರವಾಗಿವೆ. ಇದು ವೇದ ಅಧ್ಯಯನ ಆರಂಭಿಸುವ, ಕಳೆದ ವರ್ಷ ನಡೆಸಿದ ಅಧ್ಯಯನಗಳ ಸಮರ್ಪಣೆ ಮತ್ತು ಈ ವರ್ಷದ ಹೊಸ ವಿಷಯಗಳ ಅಧ್ಯಯನಕ್ಕೆ ಚಾಲನೆ ನೀಡುವ ಶುಭ ಕಾಲವಾಗಿದೆ.
ಈ ಸಂದರ್ಭ ಹೋಮಗಳನ್ನು ಮಾಡಿ ಋುಷಿಗಳ ಪೂಜೆ ಮಾಡಿ ವಿಶೇಷ ಕರ್ಮಗಳೊಂದಿಗೆ ಯಜ್ಞೋಪವೀತ ಧಾರಣೆ ಮಾಡುವ ಪದ್ಧತಿ ಇದೆ. ಋುಗ್ವೇದಿಗಳು ಶ್ರಾವಣ ಶುದ್ಧದಲ್ಲಿಶ್ರವಣ ನಕ್ಷತ್ರವಿರುವ ದಿನ ಉಪಾಕರ್ಮ ವಿಧಿಮಾಡಿಕೊಂಡು ಜನಿವಾರ ಧರಿಸುತ್ತಾರೆ. ಅದರ ಮರುದಿನ ಎಂದರೆ ಧನಿಷ್ಠಾ ನಕ್ಷತ್ರ ಇರುವ ದಿನ ಯಜುರ್ವೇದಿಗಳು ಮತ್ತು ಅದೇ ಸಂಪ್ರದಾಯದವರು, ಶ್ರಾವಣ ಹುಣ್ಣಿಮೆಯಂದು ಅಥರ್ವಣ ವೇದಿಗಳು ಉಪಾಕರ್ಮ ವಿಧಿ ಮಾಡಿ ಜನಿವಾರ ಧರಿಸುತ್ತಾರೆ. ಸಾಮವೇದಿಗಳು ಗಣೇಶ ಚತುರ್ಥಿ ದಿನ ಹೊಸ ಜನಿವಾರ ಧರಿಸಿ ಉಪಾಕರ್ಮ ಮಾಡಿಕೊಳ್ಳುತ್ತಾರೆ.
ಉಪಯೋಗ ಏನು ?
ಪ್ರಾಚೀನರು ಕಂಡುಕೊಂಡ ಆರೋಗ್ಯ ಸೂತ್ರದ ಅನ್ವಯ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ ಎನ್ನಲಾಗಿದೆ. ಮಲ, ಮೂತ್ರ ವಿಸರ್ಜನೆಯ ಸಮಯದಲ್ಲಿಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು.
ಶಾಸ್ತ್ರದ ಪ್ರಕಾರ ಜನಿವಾರ ಧರಿಸಿ ಅನುಷ್ಠಾನ ಇರಿಸಿಕೊಂಡ ವ್ಯಕ್ತಿಗೆ ಭಯ, ಶೋಕ, ಮನಸ್ತಾಪ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.ಯಜ್ಞೋಪವೀತ ಧಾರಣೆಯಿಂದ ವ್ಯಕ್ತಿಯ ಸೂರ್ಯನಾಡಿ ಜಾಗೃತವಾಗಿರುತ್ತದೆ. ದಿನವೂ ಮಾಡುವ ತ್ರಿಕಾಲ ಸಂಧ್ಯಾವಂದನೆಯಿಂದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ. ಅಂತರ್ ಶಕ್ತಿ ಜಾಗೃತಗೊಂಡು ಸನ್ಮಾರ್ಗದಲ್ಲಿನಡೆಯುವಂತೆ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರುವಂತೆ ಮಾಡಿ, ವೇದ, ಶಾಸ್ತ್ರಗಳ ಅಧ್ಯಯನಕ್ಕೆ ದಾರಿ ಮಾಡಿ ಕೊಡುತ್ತದೆ.
ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸದೃಢಗೊಂಡು ಆಧ್ಯಾತ್ಮಿಕ ಸಾದನೆ ಆಗುತ್ತದೆ ಎನ್ನಲಾಗಿದೆ.
=======================
ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ | ಇದರ ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂಥದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂಥದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿವಿಶೇಷ ಮಹತ್ವವನ್ನು ನೀಡಲಾಗಿದೆ.