ತವರು ಅಭಿಮಾನದಲ್ಲಿಮಿಂದೆದ್ದ ಸಚಿವ ಡಾ.ಅಜಯ್ ಸಿಂಗ್

Contributed bybhrahmanand.arali@timesgroup.com|Vijaya Karnataka
minister dr ajay singhs grand welcome with a massive procession
ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮನ| ನಗರೇಶ್ವರ ಶಾಲೆಯಿಂದ ಡಾ.ಎಸ್ .ಎಂ.ಪಂಡಿತ್ ರಂಗ ಮಂದಿರವರೆಗೆ ಬೃಹತ್ ಮೆರವಣಿಗೆ

ತವರು ಅಭಿಮಾನದಲ್ಲಿಮಿಂದೆದ್ದ ಸಚಿವ ಡಾ.ಅಜಯ್ ಸಿಂಗ್
ವಿಕ ಸುದ್ದಿಲೋಕ ಕಲಬುರಗಿ

ರಾಜ್ಯದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ಸಂಜೆ ತವರು ಜಿಲ್ಲೆಗೆ ಆಗಮಿಸಿದ ಡಾ.ಅಜಯ ಧರಂಸಿಂಗ್ ಅವರಿಗೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಭಿಮಾನದಿಂದ ಅದ್ಧೂರಿ ಸ್ವಾಗತ ಕೋರಿದರು.

ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ಬಳಿ ಅಪಾರ ಸಂಖ್ಯೆಯಲ್ಲಿಸೇರಿದ್ದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಜೈ ಘೋಷಗಳೊಂದಿಗೆ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ತೆರೆದ ವಾಹನದಲ್ಲಿಭವ್ಯ ಮೆರವಣಿಗೆ ಮೂಲಕ ಅವರನ್ನು ಎಸ್ . ಎಂ. ಪಂಡಿತ್ ರಂಗ ಮಂದಿರದವರೆಗೆ ಕರೆದೊಯ್ಯಲಾಯಿತು. ಈ ವೇಳೆ ವರುಣ ದೇವನು ಕೆಲ ಹನಿಗಳನ್ನು ಆತ್ಮೀಯವಾಗಿ ಸುರಿಸುವ ಮೂಲಕ ಸಚಿವರನ್ನು ಬರಮಾಡಿಕೊಂಡದ್ದು ಗಮನ ಸೆಳೆಯಿತು.

ಗಂಜ್ ನಿಂದ ಶುರುವಾದ ಮೆರವಣಿಗೆ ಹುಮನಾಬಾದ್ ಬೇಸ್ , ಪೊಲೀಸ್ ಚೌಕ್ , ಸೂಪರ್ ಮಾರ್ಕೆಚ್ , ಜಗತ್ ವೃತ್ತ, ಅನ್ನಪೂರ್ಣ ವೃತ್ತದ ರಂಗ ಮಂದಿರಕ್ಕೆ ಆಗಮಿಸಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಸಚಿವ ಡಾ.ಅಜಯ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮೆರವಣಿಗೆಯಲ್ಲಿವಿವಿಧ ಕಲಾತಂಡಗಳು ಭಾಗಿಯಾಗಿ ಸಾಂಸ್ಕೃತಿಕ ವೈಭವದ ಮೆರಗು ತಂದವು. ಮಹಾರಾಷ್ಟ್ರದ ನಾಸಿಕ್ ಢೋಲ…, ಸ್ಥಳೀಯ ಹಲಗಿ ವಾದನ, ಡೊಳ್ಳು ಕುಣಿತ, ಡಿಜೆ ಸೌಂಡ್ ಮೆರವಣಿಗೆಯ ಆಕರ್ಷಣೆ ಆಗಿದ್ದವು. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.

-ಬಾಕ್ಸ್ -

ದಾರಿಯುದ್ದಕ್ಕೂ ಅಭಿಮಾನದ ಸನ್ಮಾನ

ನೂತನ ಸಚಿವ ಡಾ.ಅಜಯ್ ಸಿಂಗ್ ಅವರಿಗೆ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ವರ್ತಕರು, ಆಪ್ತರು ಹಾಗೂ ಅಭಿಮಾನಿಗಳು ಬೃಹತ್ ಹಾರದ ಮೂಲಕ ಸನ್ಮಾನ ಮಾಡುವುದು ಕಣ್ಮನ ಸೆಳೆಯಿತು. ಡಾ.ಅಜಯ್ ಸಿಂಗ್ ಸಾಬ್ ಅಭಿಮಾನಿಗಳ ಸಂಘದಿಂದ ಬೃಹತ್ ಕ್ರೇನ್ ಮೂಲಕ ಬ್ಯಾನರ್ ನ ಕಟೌಟ್ ನಿಲ್ಲಿಸಿ, ಬೃಹತ್ ಹಾರ, ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಅಭಿಮಾನ ಮೆರೆದರು. ಇನ್ನು ಬೆಳಗ್ಗೆ ಬೆಂಗಳೂರಿನಿಂದ ಹೈದರಾಬಾದ್ ಬಂದು ಅಲ್ಲಿಂದ ರಸ್ತೆ ಮೂಲಕ ಕಲಬುರಗಿಗೆ ಆಗಮಿಸುವ ವೇಳೆ ಮನ್ನಾ ಎಖ್ಖೇಳ್ಳಿ, ಹುಮನಾಬಾದ್ , ಕಮಲಾಪುರ, ಮಹಾಗಾಂವ್ ಕ್ರಾಸ್ , ಕಪನೂರ್ , ಹುಮನಾಬಾದ್ ರಿಂಗ್ ರಸ್ತೆಯಲ್ಲಿಅಭಿಮಾನಿಗಳು ಸನ್ಮಾನಿಸಿದರು.