ವಿಕ ಸುದ್ದಿಲೋಕ ಬೀದರ್ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ವಿರುದ್ಧ ದಾಖಲಾಗಿದ್ದ ನಿಂದನೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಕಲಬುರಗಿಯ ಪೀಠ ಸೋಮವಾರ ತಡೆ ನೀಡಿದೆ. ಈ ಪ್ರಕರಣದಲ್ಲಿಆಳವಾಗಿ ನೋಡಬೇಕಿದೆ. ಈ ಪ್ರಕರಣದ ಮೊಕದ್ದಮೆಗೆ ಅರ್ಹವಿದೆಯೋ ಇಲ್ಲಎಂದು ಅಭಿಪ್ರಾಯ ವ್ಯಕ್ತಪಡಿಸಲಾಗದು. ಆದರೆ, ಮುಂದಿನ ವಿಚಾರಣೆಗೆ ತಡೆ ನೀಡಲಾಗುವುದು ಎಂದು ಹೇಳಿದೆ. ಕೋರ್ಟ್ ನ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಅನಾವಶ್ಯಕವಾಗಿ ಕೋರ್ಟ್ ಗೆ ದಾರಿ ತಪ್ಪಿಸಿ, ಮೂರನೇ ವ್ಯಕ್ತಿಯಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿಪೊಲೀಸರ ದುರ್ಬಳಕೆಯಾಗಿದೆ. ಈ ಮೂಲಕ ನನಗೆ ಕಿರುಕುಳ ನೀಡುವ ದುರುದ್ದೇಶವಿತ್ತು. ಆದರೆ, ಹೈಕೋರ್ಟ್ ಸೂಕ್ತ ವಿಚಾರಣೆ ನಡೆಸಿ, ಪ್ರಕರಣದ ವಿಚಾರಣೆಗೆ ತಡೆ ನೀಡಿದ್ದು, ಸತ್ಯಕ್ಕೆ ಜಯ ಸಂದಿದೆ ಎಂದಿದ್ದಾರೆ. ಪ್ರಕರಣ ಹಿನ್ನೆಲೆ: ಫೆ.7ರಂದು ಬೀದರ್ ನ ಪಾಪನಾಶ ಮಂದಿರದ ಕಾಮಗಾರಿ ಚಾಲನೆ ನೀಡುವ ವೇಳೆ, ಮಂದಿರಕ್ಕೆ ದರುಶನಕ್ಕಾಗಿ ಆಗಮಿಸಿದ್ದ ಬಿಜೆಪಿಗರನ್ನು ಪೊಲೀಸರು ತಡೆದಿದ್ದರು. ಇದನ್ನು ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆದಿತ್ತು. ಅಲ್ಲದೆ, ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರನ್ನು ಗುಂಪಾದ ಸಿದ್ಧಾರೂಢ ಮಠಕ್ಕೆ ಬಂಧಿಸಿ ಕರೆದೊಯ್ಯಲಾಗಿತ್ತು. ಅಲ್ಲಿಂದಲೇ ಫೇಸ್ ಬುಕ್ ಮೂಲಕ ಖೂಬಾ ಹರಿ ಹಾಯ್ದಿದ್ದರು. ಖೂಬಾ ಅವರು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಭಾಲ್ಕಿಯ ಸುರೇಶ್ ಎಸ್ .ಬಿರಾದಾರ್ ದೂರು ನೀಡಿದ್ದರು. ಭಾಲ್ಕಿ ಟೌನ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

