ವಿಕ ಸುದ್ದಿಲೋಕ ಮೈಸೂರು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ.ರಾಮಕೃಷ್ಣಯ್ಯ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಇವರು ಸಂಗೀತ ವಿವಿಯ ನಾಲ್ಕನೇ ಕುಲಪತಿಯಾಗಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿರುವ ವಿವಿಯಲ್ಲಿನಿರ್ಗಮಿತ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅವರು ನೂತನ ಕುಲಪತಿ ಪ್ರೊ.ರಾಮಕೃಷ್ಣಯ್ಯ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನಾಡಿನ ಖ್ಯಾತ ರಂಗಕರ್ಮಿಯಾದ ಪ್ರೊ.ರಾಮಕೃಷ್ಣಯ್ಯ ಅವರು ಬೆಂಗಳೂರು ವಿವಿಯಲ್ಲಿಫರ್ಪಾಮಿಂಗ್ ಆರ್ಟ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಿ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇವರನ್ನು ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿಸಂಗೀತ ವಿವಿಗೆ ಭೇಟಿ ನೀಡಿ ಕುಲಪತಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನವರಾದ ಇವರು ಬೆಂಗಳೂರು ನೀನಾಸಂ ಪದವೀಧರರು. ಪ್ರದರ್ಶನ ಕಲಾ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಎಂ.ಎ.ಡ್ರಾಮ ಪದವಿ, ಪಿಎಚ್ .ಡಿ ಪದವಿ ಪಡೆದು, ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯದಲ್ಲಿ25 ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ16 ಸಂಶೋಧಕರು ಪಿಎಚ್ .ಡಿ ಪದವಿ ಪಡೆದಿದ್ದು, ರಂಗಭೂಮಿ ಕುರಿತಾದ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಂಗಭೂಮಿ ಕಲಾವಿದ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲ್ಕು ನಾಟಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. 2011ರಲ್ಲಿಕರ್ನಾಟಕ ನಾಟಕ ಅಕಾಡೆಮಿ ಸ್ಟೇಟ್ ಫೆಲೋಶಿಪ್ ಹಾಗೂ 2017ರಲ್ಲಿನಾಟಕ ಅಕಾಡೆಮಿಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊಸದಿಲ್ಲಿಯಲ್ಲಿನಡೆದ 8ನೇ ಥಿಯೇಟರ್ ಒಲಿಂಪಿಕ್ಸ್ (2018) ಮತ್ತು ಅಹಮದಾಬಾದ್ ನಲ್ಲಿನಡೆದ ಅಂತಾರಾಷ್ಟ್ರೀಯ ಭಾರತರಂಗ ಮಹೋತ್ಸವ 2024 ಪ್ರಶಸ್ತಿ ಗಳಿಸಿರುವರು. ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕರಾಗಿ 2017ರಿಂದ ಕಾರ್ಯನಿರ್ವಹಿಸುತ್ತಿದ್ದರು. 2009ರಲ್ಲಿಪ್ರಾರಂಭವಾದ ಸಂಗೀತ ವಿವಿ ಪ್ರಥಮ ಕುಲಪತಿಯಾಗಿ ಡಾ.ಹನುಮಣ್ಣ ನಾಯಕ ದೊರೆ, ಬಳಿಕ 2ನೇ ಕುಲಪತಿಯಾಗಿ ಡಾ.ಸರ್ವಮಂಗಳಾ ಶಂಕರ್ ಕಾರ್ಯನಿರ್ವಹಿಸಿದ್ದರು. ನಂತರ 2019ರ ಜನವರಿ 6ರಿಂದ ಆಡಳಿತಾತ್ಮಕ ಕುಲಸಚಿವರಾಗಿದ್ದ ಪೊ›.ನಾಗೇಶ್ ಬೆಟ್ಟಕೋಟೆ ಅವರನ್ನು 2021ರ ಜನವರಿ 22ರಿಂದ ಪೂರ್ಣಾವಧಿಯ ಕುಲಪತಿಯಾಗಿ ನೇಮಕ ಮಾಡಲಾಗಿತ್ತು.

