ವಿಕ ಸುದ್ದಿಲೋಕ ಹುಬ್ಬಳ್ಳಿ
ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಮತ್ತೆ ಮತಪತ್ರಕ್ಕೆ ಮರಳಲು ತೆಗೆದುಕೊಂಡ ನಿರ್ಧಾರ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘‘2023ರ ವಿಧಾನಸಭಾ ಚುನಾವಣೆಯಲ್ಲಿರಾಜ್ಯದ ಜನ ಇವಿಎಂನಲ್ಲಿಮತ ಚಲಾಯಿಸಿದ್ದಾರೆ. 2024ರ ಉಪಚುನಾವಣೆಗಳಲ್ಲಿಯೂ ಇವಿಎಂ ಬಳಕೆ ಆಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆÜ ವಿಷಯದಲ್ಲಿಅವು ಹೇಗೆ ವಿಶ್ವಾಸಾರ್ಹವಲ್ಲಎನಿಸಿವೇ,’’ ಎಂದು ಪ್ರಶ್ನಿಸಿದ್ದಾರೆ.
‘‘ಸುಪ್ರೀಂಕೋರ್ಟ್ ಪದೇ ಪದೆ ಇವಿಎಂ ಭದ್ರತೆ ಮತ್ತು ವಿಶ್ವಾಸಾರ್ಹತೆ ಎತ್ತಿ ಹಿಡಿದಿದೆ. ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಅಮಾನ್ಯ ಮತಗಳು, ವಿಳಂಬಿತ ಎಣಿಕೆ ಯುಗದಿಂದ ದೂರ ಸರಿಯುವುದು ಇವಿಎಂ ಬಳಕೆ ದೇಶದ ಉದ್ದೇಶವಾಗಿತ್ತು. ಮತಪತ್ರಗಳನ್ನು ಪುನಃ ಪರಿಚಯಿಸುವುದರಿಂದ ದೇಶವು ಕಠಿಣ ಪರಿಶ್ರಮದಿಂದ ತೊಡೆದುಹಾಕಿದ ಸಮಸ್ಯೆಗಳ ಬಾಗಿಲನ್ನು ಮತ್ತೆ ತೆರೆಯುವ ಅಪಾಯವಿದೆ,’’ ಎಂದು ಎಚ್ಚರಿಸಿದ್ದಾರೆ.
‘‘ಇಡೀ ಜಗತ್ತು ಅಭಿವೃದ್ಧಿ ಒಪ್ಪಿಕೊಂಡರೆ ಕಾಂಗ್ರೆಸ್ ದಿನದಿಂದ ದಿನಕ್ಕೆ ಹಿಂದೆ ಹೋಗುತ್ತಿದೆ. ರಾಜ್ಯಕ್ಕೆ ಉತ್ತಮ ಆಡಳಿತದ ಅವಶ್ಯಕತೆ ಇದೆ ಹೊರತು, ನಾಟಕ ಅಗತ್ಯ ಇಲ್ಲ,’’ ಎಂದಿದ್ದಾರೆ.
‘‘ತಮಗೆ ಬೇಕಾದಂತೆ ಬದಲಾಗುವ ಕಲೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಚೆನ್ನಾಗಿ ತಿಳಿದಂತಿದೆ. ಮತಪತ್ರಗಳಿಗೆ ಮರಳಿ ತಾವು ಎಂದಿಗೂ ಹಿಂದೆಯೇ ಉಳಿಯುತ್ತೇವೆ ಸ್ಪಷ್ಟ ಸಂದೇಶ ನೀಡಿದೆ,’’ ಎಂದು ವ್ಯಂಗ್ಯವಾಡಿದ್ದಾರೆ.
-----

