ಹೊಸ ವರುಷ ಸ್ವಾಗತದ ಹರುಷ

Contributed byBASAVARAJU KG|Vijaya Karnataka

ಹಿಂದೂಗಳ ಪಾಲಿಗೆ ಹೊಸ ವರ್ಷದ ಆರಂಭ ಹಾಗೂ ವರ್ಷದ ಮೊದಲ ದೊಡ್ಡ ಹಬ್ಬ ಯುಗಾದಿ ಹೊಸ್ತಿಲಲ್ಲಿದೆ. ಮನೆಯನ್ನು ಸ್ವಚ್ಛಗೊಳಿಸಿ, ಹೊಸ ಬಟ್ಟೆಗಳನ್ನು ಖರೀದಿಸಿ ಜನರು ಹಬ್ಬವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಮಾರುಕಟ್ಟೆಯಲ್ಲೂ ಹಬ್ಬದ ವ್ಯಾಪಾರ ಗರಿಗೆದರಿದೆ. ಮಾ.19ರ ಗುರುವಾರ ಯುಗಾದಿ ಹಬ್ಬ, 20ರ ಶುಕ್ರವಾರ ಚಂದ್ರದರ್ಶನ ಆಗಲಿದೆ. ಹೂವು, ಹಣ್ಣುಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ.

yugadi festival preparations for the new year and market developments
ದಾವಣಗೆರೆ: ಹಿಂದೂಗಳ ಪಾಲಿಗೆ ಹೊಸ ವರ್ಷದ ಸಂಕೇತವಾದ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನತೆ ಸಜ್ಜಾಗಿದ್ದಾರೆ. ಮಾರ್ಚ್ 19ರಂದು ಯುಗಾದಿ ಹಬ್ಬವಿದ್ದು, ಮಾರ್ಚ್ 20ರಂದು ಚಂದ್ರದರ್ಶನವಾಗಲಿದೆ. ನಗರದ ಮಾರುಕಟ್ಟೆಯಲ್ಲಿ ಹಬ್ಬದ ಸಡಗರ ಕಳೆಕಟ್ಟಿದ್ದು, ಹೊಸ ಬಟ್ಟೆ, ಹೂವು, ಹಣ್ಣುಗಳ ಖರೀದಿಯಲ್ಲಿ ಜನತೆ ನಿರತರಾಗಿದ್ದಾರೆ. ಈ ಬಾರಿ ಹೂವು ಮತ್ತು ಹಣ್ಣುಗಳ ದರದಲ್ಲಿ ಹೆಚ್ಚಿನ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹಿಂದೂಗಳ ಪಾಲಿಗೆ ಯುಗಾದಿ ಕೇವಲ ಹಬ್ಬವಲ್ಲ, ಅದು ಹೊಸ ಸಂವತ್ಸರದ ಆರಂಭ. ಮುಂಬರುವ ವರ್ಷದ ಆಗುಹೋಗುಗಳಿಗೆ ನಾಂದಿ ಹಾಡುವ ಈ ದಿನವನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಲಾಗಿದೆ. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯಮಿಯಂದು ಯುಗಾದಿ ಹಬ್ಬ ವನ್ನು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 19ರ ಗುರುವಾರ ಯುಗಾದಿ ಹಬ್ಬ ಬಂದಿದ್ದು, ಮಾರನೇ ದಿನ ಅಂದರೆ ಮಾರ್ಚ್ 20ರ ಶುಕ್ರವಾರ ಚಂದ್ರದರ್ಶನವಾಗಲಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ. ವರ್ಷದ ದೊಡ್ಡ ಹಬ್ಬವಾದ್ದರಿಂದ ಹೆಚ್ಚಿನ ಕುಟುಂಬಗಳು ತಮ್ಮ ಮನೆಯವರಿಗೆ ಹೊಸ ಬಟ್ಟೆಗಳನ್ನು ಖರೀದಿಸುತ್ತಿವೆ. ಹೀಗಾಗಿ ಕಳೆದ ವಾರದಿಂದಲೇ ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಉತ್ತಮವಾಗಿದೆ. ಯುಗಾದಿಯ ಜೊತೆಗೆ ರಂಜಾನ್ ಹಬ್ಬವೂ ಹತ್ತಿರವಿರುವುದರಿಂದ ಬಟ್ಟೆ ವ್ಯಾಪಾರ ಇನ್ನಷ್ಟು ಚುರುಕು ಪಡೆದಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ನಗರದ ಬಟ್ಟೆ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಿತ್ತು. ಸೋಮವಾರವೂ ಬಟ್ಟೆ ಖರೀದಿ ಮುಂದುವರಿದಿದ್ದು, ಮಂಗಳವಾರ ಮತ್ತು ಬುಧವಾರ ಜವಳಿ ಮಳಿಗೆಗಳಲ್ಲಿ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.

ಹಬ್ಬದ ಹಿಂದಿನ ದಿನವಾದ ಬುಧವಾರ ಹೂವು, ಹಣ್ಣಿನ ವ್ಯಾಪಾರ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಹೂವು ಹಾಗೂ ಹಣ್ಣುಗಳ ದರ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಹೂವು-ಹಣ್ಣುಗಳ ದರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಹಣ್ಣು-ಹೂವಿನ ವ್ಯಾಪಾರಿ ನಾಗರಾಜ್ ತಿಳಿಸಿದ್ದಾರೆ. ಹಾಲಿ ದರವೇ ಮುಂದುವರಿಯುವ ಸಾಧ್ಯತೆ ಇದೆ. ಒಂದು ವೇಳೆ ದರ ಏರಿಕೆಯಾದರೂ ಅದು ಅಷ್ಟಾಗಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೂವುಗಳ ದರ ಹೀಗಿದೆ: ಮಲ್ಲಿಗೆ 50 ರೂ. (ಮಾರು), ಕನಕಾಂಬರ 50 ರೂ. (ಮಾರು), ದುಂಡು ಮಲ್ಲೆ 80 ರೂ. (ಮಾರು), ಸೇವಂತಿಗೆ 40 ರೂ. (ಮಾರು), ಬಟನ್ ರೋಸ್ 200 ರೂ. (ಕೆಜಿ). ಹಣ್ಣುಗಳ ದರ ಹೀಗಿದೆ: ಸೇಬು 220-250 ರೂ. (ಕೆಜಿ), ಬಾಳೆ 50-60 ರೂ. (ಕೆಜಿ), ಪೇರಲೆ 70-90 ರೂ. (ಕೆಜಿ), ಕಿತ್ತಲೆ 80-100 ರೂ. (ಕೆಜಿ), ಸಪೋಟ 50-60 ರೂ. (ಕೆಜಿ), ದ್ರಾಕ್ಷಿ 80-100 ರೂ. (ಕೆಜಿ).