ಮನರೇಗಾದಲ್ಲಿಕಾಂಗ್ರೆಸ್ ಭ್ರಷ್ಟಾಚಾರ
ವಿಕ ಸುದ್ದಿಲೋಕ ಮಸ್ಕಿ
‘‘ಮನರೇಗಾ ಯೋಜನೆಯಲ್ಲಿಕಾಂಗ್ರೆಸ್ ಸರಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ,’’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆರೋಪಿಸಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘‘ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಬಲ ನೀಡಲಿದೆ. ನಕಲಿ ಗಾಂಧಿಗಳು ಕೇಂದ್ರ ಸರಕಾರದ ಹೊಸ ಯೋಜನೆ ವಿರೋಧಿಸುತ್ತಿದ್ದಾರೆ. ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರವ ಯೋಜನೆ, ಗ್ರಾಪಂ ಮಟ್ಟದಲ್ಲಿನಡೆಯುವ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ ಉದ್ಯೋಗ ಖಾತ್ರಿಯನ್ನು ಹೆಚ್ಚು ಬಲಗೊಳಿಸಿದೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿಯಾಗಿದೆ. ವಿಕಸಿತ ಭಾರತ ರೋಜಗಾರ್ , ಅಜೀವಿಕಾ ಮಿಷನ್ ಗ್ಯಾರಂಟಿ ಯೋಜನೆ ವಿರುದ್ಧ ಅಪಪ್ರಚಾರ ಮಾಡುತ್ತಿದೆ,’’ ಎಂದು ದೂರಿದರು.
ಶಿಷ್ಟಾಚಾರ ಉಲ್ಲಂಘನೆ:
‘‘ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ ಅವರು ಹಳ್ಳಿಗಳಲ್ಲಿಸರಕಾರದ ನಾನಾ ಕಾಮಗಾರಿಗಳ ಭೂಮಿ ಪೂಜೆ, ಉದ್ಘಾಟನೆ ನೆರವೇರಿಸಿ ಶಿಷ್ಟಾಚಾರ ಉಲ್ಲಂಘಿಘಿಸುತ್ತಿದ್ದಾರೆ,’’ ಎಂದು ದೂರಿದರು. ‘‘ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರ ನಗರಕ್ಕೆ ಸೀಮಿತ. ಪ್ರಾಧಿಕಾರದ ಅಧ್ಯಕ್ಷರು ಸರಹದ್ದು ಮೀರಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಎಷ್ಟು ಸರಿ,’’ ಎಂದು ಪ್ರಶ್ನಿಸಿದರು.
ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಬಸವಂತರಾಯ ಕುರಿ, ಸಂತೋಷ ರಾಜಗುರು ಇದ್ದರು.

